ಇತ್ತೀಚಿನ ಸುದ್ದಿ
ಮತದಾರರ ಜತೆಯೇ ಎಗರಾಡಿದ ‘ನೀರು ಕೊಡದ’ ಕಾರ್ಪೋರೇಟರ್: ಕಠಿಣ ಕ್ರಮಕ್ಕೆ ಮೇಯರ್, ಕಮಿಷನರ್ ಗೆ ಸ್ಥಳೀಯರ ಮನವಿ
19/07/2023, 22:45
ಮಂಗಳೂರು(reporterkarnataka.com): ನಾಗರಿಕರಿಗೆ ಕುಡಿಯುವ ನೀರು ಒದಗಿಸಲಾಗದ ಬಿಜೆಪಿ ಕಾರ್ಪೊರೇಟರ್ ಜಯಲಕ್ಷ್ಮೀ ಅವರು ತನ್ನ ವಾರ್ಡ್ ನ ನಾಗರಿಕರ ಮೇಲೆಯೇ ಎಗರಾಡಿ ಅಸಭ್ಯವಾಗಿ ವರ್ತಿಸಿದ ಕುರಿತು ಸ್ಥಳೀಯ ನಾಗರಿಕರು ಡಿವೈಎಫ್ ಐ ನೇತೃತ್ವದಲ್ಲಿ ಮೇಯರ್ ಹಾಗೂ ಪಾಲಿಕೆಯ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ.
ಉರ್ವಸ್ಟೋರ್ ಸಮೀಪದ ಸುಂಕದಕಟ್ಟೆ ವಸತಿ ಕಾಲೊನಿಯಲ್ಲಿ ಕಳೆದ 12 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಅದನ್ನು ಪರಿಹರಿಸಿ ಜನರ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರು ಒದಗಿಸದೆ ಬೇಜವಾಬ್ದಾರಿ ತೋರಿಸಿದ ಕಾರ್ಪೋರೇಟರ್ ಅವರು ಸ್ಥಳೀಯರ ಜತೆ ಅಸಂಬದ್ಧವಾಗಿ ಮಾತನಾಡಿದ್ದರು. ಸ್ಥಳೀಯ ರನ್ನು ಭೇಟಿಯಾಗಿ ಎದುರು ನಿಂತು ಮಾತನಾಡಬೇಕಾಗಿದ್ದ ಕಾರ್ಪೊರೇಟರ್ ಜಯಲಕ್ಷ್ಮೀ ಅವರು ಅತ್ತ ಇತ್ತ ಓಡಾಡುತ್ತಾ, ಜನರಿಗೆ ಅಸಂಬದ್ಧ ಉತ್ತರ ನೀಡುತ್ತಿದ್ದರು. ಇದರ ವೀಡಿಯೊವೊಂದು ನಿನ್ನೆಯೇ ವೈರಲ್ ಆಗಿತ್ತು.
ಈ ಕುರಿತು ನಿಯೋಗವೊಂದು ಮೇಯರ್ ಹಾಗೂ ಪಾಲಿಕೆ ಕಮಿಷನರ್ ಅವರನ್ನು ಭೇಟಿಯಾಗಿ ಕಾರ್ಪೋರೇಟರ್ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ನಿಯೋಗದಲ್ಲಿ ಸಿಪಿಎಂ ನಾಯಕರಾದ ಸುನಿಲ್ ಕುಮಾರ್ ಬಜಾಲ್, ಪ್ರಶಾಂತ್ ಎಂ.ಬಿ. ಮುಂತಾದವರು ಉಪಸ್ಥಿತರಿದ್ದರು.