ಇತ್ತೀಚಿನ ಸುದ್ದಿ
ಮಸೀದಿಯಿಂದ ಬಲವಂತವಾಗಿ ಧ್ವನಿವರ್ಧಕ ತೆಗೆಯುವುದಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ
07/04/2022, 00:14
ಬೆಂಗಳೂರು(reporterkarnataka.com): ಸರ್ಕಾರವು ಮಸೀದಿಯಲ್ಲಿನ ಧ್ವನಿವರ್ಧಕಗಳನ್ನು ಬಲವಂತವಾಗಿ ತೆಗೆದುಹಾಕುವುದಿಲ್ಲ ಮತ್ತು ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳಿಗೆ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಹೇಳಿದ್ದಾರೆ.
ಧ್ವನಿವರ್ಧಕಗಳ ಮೂಲಕ ಅಜಾನ್ ಅನ್ನು ನಿಷೇಧಿಸುವ ಬಿಜೆಪಿ ಬೆಂಬಲಿತ ಬಲಪಂಥೀಯ ಗುಂಪಿನ ಹೊಸ ವಿವಾದಕ್ಕೆ ಅವರು ಪ್ರತಿಕ್ರಿಯಿಸುತ್ತಾ, “ಕೇವಲ ಹೇಳಿಕೆ ನೀಡುವ ಮೂಲಕ ಬಿಕ್ಕಟ್ಟು ಬಗೆಹರಿಸಲು ಸಾಧ್ಯವಿಲ್ಲ. ಈ ಬೆಳವಣಿಗೆಗಳ ಹಿಂದೆ ಹಲವು ಅಂಶಗಳಿವೆ. 2001, 2002ರಲ್ಲಿ ಆದೇಶ ಹೊರಡಿಸಲಾಗಿದೆ. ಆಡಳಿತಾರೂಢ ಬಿಜೆಪಿ ಯಾವುದೇ ಆದೇಶವನ್ನು ಹೊರಡಿಸಿಲ್ಲ. ನಾವು ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆ.
ಆಜಾನ್‌ಗೆ ಧ್ವನಿವರ್ಧಕಗಳನ್ನು ಬಳಸುತ್ತಿರುವ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, “ಈ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟ್‌ನಿಂದ ಆದೇಶವಿದೆ. ಆದೇಶಗಳನ್ನು ಏಕೆ ಜಾರಿಗೊಳಿಸುತ್ತಿಲ್ಲ ಎಂದು ಪ್ರಶ್ನಿಸುವ ಇನ್ನೊಂದು ಆದೇಶವೂ ಇದೆ. ಡೆಸಿಬಲ್ ಮಿತಿಯನ್ನು ನಿಗದಿಪಡಿಸಲಾಗಿದೆ ಮತ್ತು ಡೆಸಿಬಲ್ ಮೀಟರ್ ಖರೀದಿಸಲು ಆದೇಶವಿದೆ” ಎಂದು ಹೇಳಿದ್ದಾರೆ.
“ಇದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕಾದ ಕೆಲಸ. ಬಲವಂತವಾಗಿ ಮಾಡುವುದು ಸಾಧ್ಯವಿಲ್ಲ. ತಳಮಟ್ಟದಲ್ಲಿ ಪೊಲೀಸರು ಸಮುದಾಯದ ಮುಖಂಡರೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ತಿಳಿಸಿದ್ದಾರೆ.