ಇತ್ತೀಚಿನ ಸುದ್ದಿ
ಮರುಭೂಮಿಯಲ್ಲಿ ಬೆಳೆಸುವ ಡ್ರ್ಯಾಗನ್ ಫ್ರುಟ್ ಕರಾವಳಿಯಲ್ಲಿ!: ಕುರಿಯಾಳದ ಉದ್ಯಮಿ ಚಂದ್ರಹಾಸ ಶೆಟ್ಟಿ ಚಮತ್ಕಾರ!!
25/07/2023, 12:11
ಯಾದವ ಕುಲಾಲ್ ಅಗ್ರಬೈಲು ಬಂಟ್ವಾಳ
info.reporterkarnataka@gmail.com
ಮರುಭೂಮಿಯಲ್ಲಿ ಬೆಳೆಸುವ ಡ್ರ್ಯಾಗನ್ ಫ್ರುಟ್ ಕರಾವಳಿಯಲ್ಲಿ ಬೆಳೆದಿರುವುದು ಕಂಡು ಅಶ್ಚರ್ಯವಾಯಿತೇ?. ಅಚ್ಚರಿಯಾದರೂ ಇದು ನಿಜ. ಮಂಗಳೂರಿನಿಂದ ಸುಮಾರು 25- 30 ಕಿಮೀ. ದೂರದಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಈ ಚಮತ್ಕಾರ ಮಾಡಲಾಗಿದೆ.
ವಿಶಾಲವಾದ 3.5 ಎಕ್ರೆಯಲ್ಲಿ ಒಂದೇ ಗದ್ದೆ, ಸ್ವಲ್ಪ ಮುಂದೆ ಹೋದರೆ 4 ಎಕ್ರೆ ಸ್ಥಳದಲ್ಲಿ ಸಿಮೆಂಟ್ ಕಂಬದಲ್ಲಿ ನೇತಾಡುತ್ತಿರುವ ಹಚ್ಚ ಹಸುರಿನ ಡ್ರ್ಯಾಗನ್‌ಗಳು, ಸ್ವಲ್ಪ ಮುಂದಕ್ಕೆ ಹೋದರೆ ವಿವಿಧ ತಳಿಯ ಹಲಸಿನ ಗಿಡಗಳು, ವಿಶಿಷ್ಟವಾದ ಪ್ಲಾಸ್ಟಿಕ್ ಹೊದಿಕೆಯೊಂದಿಗೆ ನಿರ್ಮಾಣವಾದ ವಿಶಾಲವಾದ ಕೆರೆ,ಮುಂದುವರಿದು ಹೋದರೆ 12 ಲಕ್ಷ ಲೀಟರ್ ಸಾಂದ್ರತೆಯ ವಿಶಾಲ ವಾದ ನೀರಿನ ಟ್ಯಾಂಕ್, ಗದ್ದೆಯ ಸುತ್ತಲೂ ತೆಂಗಿನ ಸಸಿ, ಮಧ್ಯ ಮಧ್ಯ ಸಿಮೆಂಟ್ ಕಂಬದಲ್ಲಿ ನೇತಾಡುತ್ತಿರುವ ಡ್ರ್ಯಾಗನ್‌ಗಳು, ರಸ್ತೆ ಬದಿಯಲ್ಲಿ ಅಲಸಂಡೆ, ಬೆಂಡೆ, ವಿವಿಧ ರೀತಿಯ ತಳಿಯ ಹಲಸಿನ ಗಿಡಗಳು ಹೀಗೆ 14 ಎಕ್ರೆ ಸ್ಥಳದಲ್ಲಿ ವಿಶೇಷವಾದ ಹಣ್ಣುಗಳ ಗಿಡಗಳನ್ನು ನಿರ್ಮಾಣ ಮಾಡಿದ್ದಾರೆ ಹೊಟೇಲ್ ಉದ್ಯಮಿ.
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ನೋರ್ಣಡ್ಕ ಪಡು ಎಂಬಲ್ಲಿ ಚಂದ್ರಹಾಸ ಶೆಟ್ಟಿ ರಂಗೋಲಿಯವರು. ಕೊರೊನಾ ಸಮಯದಲ್ಲಿ ಹೊಸತನದಲ್ಲಿ ಕೃಷಿ ಉದ್ಯಮ ನಡೆಸುವ ಬಗ್ಗೆ ಅಲೋಚನೆ ಮಾಡಿ ಇವರು ತಮ್ಮಲ್ಲಿರುವ 14 ಎಕ್ರೆ ಗುಡ್ಡವನ್ನು ವಿವಿಧ ಅಂತರದಲ್ಲಿ ಸಮತಟ್ಟು ಮಾಡಿ ಈಗ ಕೃಷಿ ಚಟುವಟಿಕೆಯನ್ನಾಗಿ ಮಾಡಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ಶ್ರೀನಿವಾಸ ರೆಡ್ಡಿಯವರಲ್ಲಿ ಡ್ರ್ಯಾಗನ್ ಹಣ್ಣು ಬೆಳೆಯನ್ನು ಬೆಳೆಸುವ ಬಗ್ಗೆ ಮಾಹಿತಿ ಪಡೆದು ದೊಡ್ಡ ಮಟ್ಟದಲ್ಲಿ ಡ್ರ್ಯಾಗನ್ ಫ್ರುಟ್ಸ್ ಬೆಳೆಸಿರುವವರಲ್ಲಿ ಜಿಲ್ಲೆಯಲ್ಲೇ ಮೊದಲಿಗರಾಗಿದ್ದಾರೆ. ಕೇವಲ 1 ವರ್ಷ 3 ತಿಂಗಳಲ್ಲೇ ಗಿಡಗಳು ಹೂ ಬಿಡಲು ಆರಂಭಿಸಿದ್ದು, ನಂತರ ೪೦ ದಿನಗಳಲ್ಲಿ ಹಣ್ಣನ್ನು ಪಡೆದಿದ್ದಾರೆ. ಎಪ್ರಿಲ್, ಮೇ ತಿಂಗಳನಿಲ್ಲಿ ಹೂ ಬಿಟ್ಟರೆ ಮುಂದಿನ ನವೆಂಬರ್ ತಿಂಗಳವರೆಗೂ ಇಳುವರಿ ಇದ್ದು ಪ್ರತೀ 20 ದಿನಕ್ಕೊಮ್ಮೆ ಗಿಡ ಹೂ ಬಿಡುತ್ತದೆ.
ಡ್ರ್ಯಾಗನ್ ಗಿಡ ಬೆಳೆಸುವ ರೀತಿ : 6 ಅಡಿ ಎತ್ತರದ ಸಿಮೆಂಟ್ ಕಂಬವನ್ನು ಒಂದು ಅಡಿ ಮಣ್ಣಿನಲ್ಲಿ ಹೂತು ಹಾಕಿ ಗಿಡ ನೆಡುವ ಸಂದರ್ಭದಲ್ಲಿ ಗಿಡಗಳ ಬುಡದಲ್ಲಿ ಹಟ್ಟಿ ಗೊಬ್ಬರವನ್ನು ಬಳಸಿ, ಬಳಿಕ ಕುರಿಗೊಬ್ಬರ, ಕೋಳಿ ಗೊಬ್ಬರ, ಬೂದಿಯನ್ನು ಬುಡದಲ್ಲಿ ಹಾಕಿ ಕಂಬದ ನಾಲ್ಕು ಬದಿಯಲ್ಲಿ ನಾಲ್ಕು ಗಿಡಗಳನ್ನು ಬೆಳೆಸಿದ್ದಾರೆ. ಗಿಡದಿಂದ ಗಿಡಕ್ಕೆ ೮ ರಿಂದ 9 ಅಡಿ, ಸಾಲಿಂದ ಸಾಲಿಗೆ 10 ರಿಂದ 11 ಅಡಿ ಅಂತರದಲ್ಲಿ ನಾಲ್ಕು ಸಾವಿರದಷ್ಟು ಗಿಡಗಳನ್ನು ಬೆಳೆಸಿದ್ದಾರೆ. ಕಡಿಮೆ ವೆಚ್ಚದಲ್ಲಿ ಗಿಡವನ್ನು ಬೆಳೆಸುವುದಾದರೆ ಸಿಮೆಂಟ್ ಕಂಬದ ಬದಲು ಕಲ್ಲಿನ ಕಂಬ ಟಯರ್ ಹಾಕಿ ಕಡಿಮೆ ಕರ್ಚಿನಲ್ಲೂ ತೋಟ ಬೆಳೆಸಬಹುದಾಗಿದೆ.
ಪ್ರಾಣಿ ಪಕ್ಷಿಗಳ ಕಾಟ ಇಲ್ಲ: ಹಳ್ಳಿ ಪ್ರದೇಶದಲ್ಲಿ ಕೃಷಿ ಇಲ್ಲವೇ ಹಣ್ಣು ಹಂಪಲು ಬೆಳೆಸಿದರೆ ಹಣ್ಣಾದ ನಂತರ ಕೃಷಿಕರ ಕೈಗೆ ಸಿಗುವುದು ಸ್ವಲ್ಪವೇ. ಹೆಚ್ಚಿನವೆಲ್ಲವನ್ನೂ ಮಂಗಗಳು, ನವಿಲು, ಬಾವಲಿ ಹಾಗೂ ಇತರ ಪಕ್ಷಿಗಳ ಪಾಲಾಗುತ್ತದೆ. ಆದರೆ ಡ್ರ್ಯಾಗನ್ ಗಿಡಕ್ಕೆ ಇದರ ಯಾವುದೇ ತೊಂದರೆ ಇಲ್ಲ. ಏಕೆಂದರೆ ಈ ಗಿಡಗಳು ಮುಳ್ಳುಗಳಿಂದ ಕೂಡಿದ್ದು ಯಾವ ಪ್ರಾಣಿ ಪಕ್ಷಿಗಳೂ ಇದರ ಹತ್ತಿರ ಸುಳಿಯುವುದಿಲ್ಲ. ಕಡಿಮೆ ನೀರು, ಸೀಮಿತ ಗೊಬ್ಬರ ಸಾಕು. ರೋಗ ಬಾಧೆ ಕಡಿಮೆ, ನೀರು ನಿಲ್ಲದ ಇಳಿಜಾರು ಜಮೀನಿನಲ್ಲಿ ಡ್ರಾಗನ್ ಪ್ರೂಟ್ ಬೆಳೆಸಬಹುದು. ಕೇವಲ ಒಂದು ವರ್ಷ 6 ತಿಂಗಳಲ್ಲಿ 5 ಟನ್ ಹಣ್ಣುಗಳನ್ನು ಮಾರಾಟ ಮಾಡಿದ್ದು, ಇನ್ನು ನವೆಂಬರ್ ತಿಂಗಳಲ್ಲಿ 3 ಟನ್ ಹಣ್ಣುಗಳು ಸಿಗುವ ಸಾಧ್ಯತೆ ಇದೆ. ಒಂದು ಹಣ್ಣು ಸುಮಾರು 250 ಗ್ರಾ. ಇರುತ್ತದೆ.
ಮರುಭೂಮಿಯಲ್ಲಿ ಬೆಳೆಸುವ ಹಣ್ಣನ್ನು ದೊಡ್ಡಮಟ್ಟದಲ್ಲಿ ತಾಲೂಕಿನಲ್ಲಿ ಬೆಳೆಸಿ, ಒಂದು ರೀತಿ ಕೃಷಿಯಲ್ಲಿ ಬದಲಾವಣೆಯನ್ನು ತೋರಿಸಿದ್ದಾರೆ. ಡ್ರ್ಯಾಗನ್ ಪ್ರೂಟ್ ಆರೋಗ್ಯ ವರ್ಧಕ ಹಣ್ಣು ಆಗಿದ್ದು ಯಥೇಚ್ಛ ವಿಠಮಿನ್ ಹೊಂದಿದೆ. ಈ ಕಾರಣಕ್ಕಾಗಿ ಬೆಳೆದ ಹಣ್ಣುಗಳಿಗೆ ಸ್ಥಳೀಯವಾಗಿಯೇ ಉತ್ತಮ ಮಾರುಕಟ್ಟೆಯೂ ಅವರಿಗೆ ಲಭ್ಯವಾಗಿದೆ. ರುಚಿಕರವಾದ ಪಿಂಕ್ ಬಣ್ಣದ ಡ್ರ್ಯಾಗನ್ ಪ್ರೂಟ್ ಬೆಳೆದಿದ್ದಾರೆ. ಸುಮಾರು ನಾಲ್ಕು ಎಕರೆ ಭೂ ಪ್ರದೇಶದಲ್ಲಿ ಡ್ರ್ಯಾಗನ್ ಪ್ರೂಟ್ ಬೆಳೆದು ಯಶಸ್ವಿಯಾಗುವುದರ ಜೊತೆಗೆ ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ
ಒಂದು ಎಕರೆಗೆ ಏಳು ಲಕ್ಷ ರೂಪಾಯಿ ಖರ್ಚಾಗಿದೆ, ಈವರೆಗೆ 3 ಲಕ್ಷ ರೂಪಾಯಿಯ ಹಣ್ಣು ಮಾರಿದ್ದೇನೆ, ಇನ್ನೂ 3-4 ಲಕ್ಷ ರೂ.ವಿನ ಹಣ್ಣು ಸಿಗುವ ನಿರೀಕ್ಷೆ ಇದೆ. ಆದ್ದರಿಂದ ಹಾಕಿದ ಏಳೂವರೆ ಲಕ್ಷ ರೂಪಾಯಿ ಮೊದಲ ಬೆಳೆಯಲ್ಲೇ ಸಿಕ್ಕಂತಾಗಿದೆ. ಎಪ್ರಿಲ್ ತಿಂಗಳ ಅಂತ್ಯಕ್ಕೆ ಹೂ ಬಿಡಲು ಆರಂಭವಾಗಿ ನವೆಂಬರ್ ವರೆಗೆ ಹಣ್ಣು ಬಿಡುತ್ತದೆ. ಗಿಡವೊಂದಕ್ಕೆ 30 ವರ್ಷದ ಬಾಳಿಕೆ ಇದೆ, ವರ್ಷಕ್ಕೆ 2 ಬಾರಿ ಗೊಬ್ಬರ ಹಾಕಿ ಹುಲ್ಲು ಕಟಾವು ಮಾಡಿದರೆ ಗಿಡಗಳು ಸೊಂಪಾಗಿ ಬೆಳೆದು ಉತ್ತಮ ಇಳುವರಿ ನೀಡುತ್ತದೆ ಎಂದು ಬೆಳೆಗಾರ ಚಂದ್ರಹಾಸ ಶೆಟ್ಟಿ ರಂಗೋಲಿ ಹೇಳುತ್ತಾರೆ.