7:27 PM Sunday12 - January 2025
ಬ್ರೇಕಿಂಗ್ ನ್ಯೂಸ್
ರಾಷ್ಟ್ರೀಯ ಜಲಮಾರ್ಗಗಳ ಪ್ರಮುಖ ಮೂಲಸೌಕರ್ಯ ನವೀಕರಣಕ್ಕೆ 5 ವರ್ಷಗಳಲ್ಲಿ 50,000 ಕೋಟಿ ಹೂಡಿಕೆ… ರಾಜ್ಯವನ್ನು “ಕೌಶಲ್ಯ ಅಭಿವೃದ್ಧಿ ಹಬ್‌” ಮಾಡುವುದೇ ನಮ್ಮ ಸರ್ಕಾರದ ಗುರಿ!;ಜಿಟಿಟಿಸಿ ಕೈಗಾರಿಕೆ-ಶೈಕ್ಷಣಿಕ ಸಮಾವೇಶದಲ್ಲಿ… ರಾಜ್ಯದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದೆ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಸಂಕಷ್ಟಕ್ಕೀಡಾದ ಬಿಗ್ ಬಾಸ್ ಸೀಸನ್ 11: ಶೋ ನಿಲ್ಲಿಸುವಂತೆ ಬೆಂಗಳೂರು ಜಿಪಂ ಸಿಇಒ… ಶೃಂಗೇರಿ ದೇಗುಲಕ್ಕೆ ನಾಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ: ಸುವರ್ಣ ಮಹೋತ್ಸವದಲ್ಲಿ ಭಾಗಿ ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘನೆ: ಸರಕಾರಿ ನೌಕರರ ಸಂಘಕ್ಕೆ ಚುನಾವಣೆಗೆ ಸಿವಿಲ್ ಕೋರ್ಟ್… ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರಕಾರಿ ಬಸ್: ಪ್ರಯಾಣಿಕರಲ್ಲಿ ಆತಂಕ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆ, ರಾಹುಲ್ ಗಾಂಧಿ ಕೊಟ್ಟಿದ್ದ ಭರವಸೆ ಸಾಕಾರ: ಸಚಿವ… ನಿಮ್ಹಾನ್ಸ್‌ನಲ್ಲಿ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಯ ನೇಮಕಾತಿಗೆ ಕ್ರಮ ಕೈಗೊಳ್ಳಿ: ಮುಖ್ಯಮಂತ್ರಿ ಸೂಚನೆ ದೇಸಿ ತಿನಿಸಿನ ಬೇಡಿಕೆ ಹೆಚ್ಚಸಲು ಕ್ರಮ: ಸಚಿವ ಎನ್. ಚಲುವರಾಯಸ್ವಾಮಿ

ಇತ್ತೀಚಿನ ಸುದ್ದಿ

ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ ಇನ್ನಿಲ್ಲ

15/04/2024, 14:00

ಮಂಗಳೂರು(reporterkarnataka.com): ಜಾನಪದ ವಿಭಾಗದಲ್ಲಿ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಪಡೆದ ಪಾರ್ದನದ ಕೋಗಿಲೆ ಕಟೀಲು ಗಿಡಿಗೆರೆ ರಾಮಕ್ಕ ಮುಗೇರ್ತಿ ಸೋಮವಾರ ನಿಧನರಾದರು.


ಜನಪದ ಸಾಹಿತ್ಯದ ವಿಶ್ವಕೋಶ- ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ ತುಳುನಾಡಿನ ಜನಪದ ಸಾಹಿತ್ಯ ಕೇವಲ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ವರ್ಗಾಯಿಸುವ ಬರೇ ಮೌಖಿಕ ಪರಂಪರೆಯಲ್ಲ, ಬದಲಾಗಿ ನಿತ್ಯ ಬದುಕಿನಲ್ಲಿ ಅನುಭವಿಸಿದ ಒಂದು ಅಭಿವ್ಯಕ್ತೀಕರಣ ಮತ್ತು ಸಂಕೀರ್ಣ ಸಾಮಾಜಿಕತೆಯ ಜೀವ ಮಿಡಿತ ಎಂದು ಸಾರಿದವರು. ಇಂತಹ ಅಮೂಲ್ಯ ಐತಿಹಾಸಿಕ ಬದುಕನ್ನು ವರ್ತಮಾನದಲ್ಲಿ ಕಟ್ಟಿಕೊಡುವ ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ ಅವರ ಸಾಮರ್ಥ್ಯ ವಿವರಣೆಗೆ ನಿಲುಕದ್ದು. 85ರ ಇಳಿ ವಯಸ್ಸಿನಲ್ಲಿಯೂ ಸಂಧಿ, ಪಾಡ್ದನಗಳನ್ನು ನಿರಾರ್ಗಳವಾಗಿ ಹಾಡಿ, ಕೇಳುಗರ ಮೈಪುಳಕಗೊಳಿಸುತ್ತಾ ಅನೇಕ ಸಂಶೋಧನೆಗಳಿಗೆ ಇವರು ಆಕಾರ ಗ್ರಂಥವಾಗಿದ್ದಾರೆ . ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ಮಂಗಳೂರು ವಿಶ್ವವಿದ್ಯಾಲಯ ಮತ್ತು ಕನ್ನಡ ವಿಶ್ವವಿದ್ಯಾಲಯ, ಹಂಪಿ ಇಲ್ಲಿ ನಡೆದಿರುವ ಜನಪದ ಸಂಶೋಧನೆ, ಪಿಎಚ್ ಡಿ ಅಧ್ಯಯನಗಳಲ್ಲಿ ಇವರ ಬೌದ್ಧಿಕ ಕೊಡುಗೆಯ ದಟ್ಟ ಛಾಯೆ ಕಣ್ಣೆದುರಿಗೆ ನಿಲ್ಲುತ್ತದೆ .
ಮಹಾತ್ಮ ಗಾಂಧೀಜಿಯವರ ತತ್ವಾದರ್ಶವನ್ನು ಪಾಲಿಸುವ ರಾಮಕ್ಕ ಅವರು ದಲಿತ ಸಮಾಜದ ಪ್ರತಿಭಾನ್ವಿತರಾಗಿ ಸಾಮಾನ್ಯ ಬದುಕಿನಲ್ಲಿ ಎಲ್ಲರಿಗೂ ಆಪ್ತರಾದವರು. ಪ್ರತಿ ದಿನವೂ ಪಾಡ್ದನ ಹೇಳುತ್ತಾ ತನ್ನ ಜೀವನದಲ್ಲಿ ಪಾಡ್ದನವನ್ನೇ ಅಳವಡಿಸಿಕೊಂಡ ಗಿಡಿಗೆರೆ ರಾಮಕ್ಕ ಸಿರಿ ಪಾಡ್ದನದ ಮೂಲಕ ಅವರು ದೊಡ್ಡ ಶ್ರೇಯಸ್ಸು ಗಳಿಸಿರುವುದು ಮುಗೇರ ಸಮುದಾಯಕ್ಕೆ ಹೆಮ್ಮೆಯ ವಿಷಯ . ವಿಶ್ವವಿಖ್ಯಾತ ಜನಪದ ವಿದ್ವಾಂಸರುಗಳಾದ ಅಮೆರಿಕದ ಡಾ. ಪೀಟರ್ ಕ್ಲಾಸ್, ಫಿನ್ಲೆಂಡಿನ ಡಾ. ಲೌರಿ ಹಾಂಕೋ ಸೇರಿದಂತೆ ಅನೇಕ ವಿದೇಶಿ ಸಂಶೋಧಕರು ಗಿಡಿಗೆರೆ ರಾಮಕ್ಕ ಹಾಡಿರುವ ಪಾಡ್ದನ ಆಧರಿಸಿ ಪಿಎಚ್ ಡಿ ಗಳಿಸಿದ್ದು ನಮಗೆಲ್ಲ ಸಂತಸದ ಸಂಗತಿ. ದೀರ್ಘವಾಗಿ ಹಾಡಿರುವ ‘ಸಿರಿ ಪಾಡ್ದನ’, ಎ. ವಿ. ನಾವಡರ ಸಂಪಾದಕತ್ವದಲ್ಲಿ ಬೃಹತ್ ಗ್ರಂಥವಾಗಿ ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಾಶಿಸಲ್ಪಟ್ಟು, ಆ ಮೂಲಕ ಇಂದಿಗೂ ಈ ಗ್ರಂಥವನ್ನು ದೇಶ-ವಿದೇಶದ ಜನಪದ ವಿದ್ವಾಂಸರು ಸಂಶೋಧನೆಯಲ್ಲಿ ಪರಾಮರ್ಶಿಸುತ್ತಿರುವುದು ಪಾಡ್ದನ ಕೋಗಿಲೆಯ ವಿದ್ವತ್ ಗೆ ಸಂದ ಗೌರವವಾಗಿದೆ. ಅಕ್ಷರಾಭ್ಯಾಸದ ಹೊರತಾಗಿಯೂ ಓ ಬೆಲೆ, ನಲ್ಲೊರಿ ಮಾಮ, ಮಂಜೊಟ್ಟಿ ಗೋಣ, ಗೋವಿಂದ ಬದನೆ, ವಾವಾ ಚಟ್ನಿ, ಕನಡ, ಮಾಲ್ಂಡ್ ಮರ, ಕುಮಾರ, ಸಿರಿ, ಬಂಟರು, ಅಬ್ಬಗ-ದಾರಗೆ ಸೇರಿದಂತೆ ಹಲವಾರು ದೈವಿಕ ಆಚರಣೆ ಮತ್ತು ಶ್ರಮಿಕ ಸಂಸ್ಕ್ರತಿಯ ಸಂಧಿ-ಪಾಡ್ದನಗಳು ಇವರಿಗೆ ಕಂಠಪಾಠ. ಪ್ರತಿ ಬಾರಿಯೂ ಸಂಧಿ-ಪಾಡ್ದನಗಳೆಲ್ಲವೂ ಇವರ ಕಂಠದಲ್ಲಿ ಮರುಹುಟ್ಟು ಪಡೆದು ವಿಸ್ತೃತಗೊಳ್ಳುವ ಪರಿ ವಿಸ್ಮಯವೇ ಆಗಿದೆ. ಜೊತೆಗೆ ಇವರು ಹೇಳುವ ನೈಜ ದಾಟಿ ಗೆ ಎಲ್ಲರೂ ತಲೆಬಾಗಲೇ ಬೇಕು . ಹಾಗಾಗಿಯೇ ಇವರು ಹಾಡಿದ ‘ಲಾಲಿ ಹಾಡು’ ಬಿಬಿಸಿ ವಾಹಿನಿಯ ಮೂಲಕ ವಿಶ್ವದಾದ್ಯಂತ ಪ್ರಸಾರವಾಗುವುದರ ಜೊತೆಗೆ ತಮಗೆ ಜಾಗತಿಕ ಮೌಲ್ಯವೂ ದೊರೆತಿದೆ .
ಮೂಲತ: ವಾಮಾಂಜೂರಿನವರಾದ ಅವರು ಕಾಪಿರ ಗಿಡಿಗೆರೆಯವರನ್ನು ವಿವಾಹವಾಗಿ, 7 ಮಕ್ಕಳ ತುಂಬು ಸಂಸಾರ ಹೊಂದಿದವರು. ಮಂಗಳೂರು ತಾಲೂಕಿನ ಕೊಂಡೆಮೂಲ ಗ್ರಾಮದ ಕಟೀಲು ಗಿಡಿಗೆರೆಯಲ್ಲಿ ರಾಮ- ಲಕ್ಷ್ಮಣ ಅವಳಿ ಮಕ್ಕಳೊಂದಿಗೆ ವಾಸವಾಗಿದ್ದಾರೆ .ತನ್ನ ಓರ್ವ ಮಗ ಲಕ್ಷ್ಮಣ ತಾಯಿಯಂತೆಯೇ ಪಾಡ್ದನವನ್ನು ಅಭ್ಯಾಸ ಮಾಡುತ್ತಿದ್ದಾರೆ . ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ವರ್ಗಾಯಿಸುವ ಪ್ರಯತ್ನವೂ ಹೌದು . ಜನಪದ ಸಾಹಿತ್ಯದ ಕಣಜದಂತಿದ್ದ ತಮ್ಮ ಅಜ್ಜಿ ಉಮ್ಮಕ್ಕನಿಂದ ಮತ್ತು ಬದುಕಿನ ನೊಗ ಹೊತ್ತಿ ಗದ್ದೆಗಿಳಿದ ಕ್ಷಣದಿಂದ ತುಳು ಕಬಿತೆ, ಪಾಡ್ದನ ಮತ್ತು ಸಂಧಿಗಳು ಬಳುವಳಿಯಾಗಿ ಬಂದಿದೆ . ನಿಜಾರ್ಥದಲ್ಲಿ ತಾವು ‘ಜನಪದ ಸಾಹಿತ್ಯದ ವಿಶ್ವಕೋಶ’, ನಮ್ಮ ಕಣ್ಣ ಮುಂದಿರುವ ‘ನಡೆದಾಡುವ ಜನಪದ ವಿಶ್ವವಿದ್ಯಾನಿಲಯ’ವೆಂದರೂ ಅತಿಶಯೋಕ್ತಿಯಾಗಲಾರದು.

ಇತ್ತೀಚಿನ ಸುದ್ದಿ

ಜಾಹೀರಾತು