ಇತ್ತೀಚಿನ ಸುದ್ದಿ
ಮರವಂತೆ ವರಾಹಸ್ವಾಮಿ ದೇವಸ್ಥಾನ: ಭಕ್ತರ ವೇಷದಲ್ಲಿ ಬಂದ ದಂಪತಿಯಿಂದ ಕಾಣಿಕೆ ಡಬ್ಬಿ ಕಳವು ಯತ್ನ; ಸೆರೆ
11/08/2022, 23:35
ಕುಂದಾಪುರ(reporterkarnataka.com):ಮರವಂತೆ ಮಹಾರಾಜ ವರಾಹಸ್ವಾಮಿ ದೇವಸ್ಥಾನಕ್ಕೆ ಭಕ್ತರ ವೇಷದಲ್ಲಿ ಬಂದು ಹಾಡಹಗಲೇ ಕಾಣಿಕೆ ಡಬ್ಬಿ ಕಳವು ಮಾಡಲು ಯತ್ನಿಸಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಂಬದಕೋಣೆ ನಿವಾಸಿ ಕರುಣಾಕರ ದೇವಾಡಿಗ ಹಾಗೂ ಆತನ ಅಪ್ರಾಪ್ತ ಪತ್ನಿ ಬಂಧಿತ ದಂಪತಿ. ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ವಿರಳವಾಗಿದ್ದು, ಪೂಜಾ ಕೆಲಸ ಮುಗಿಸಿ ಅರ್ಚರು ಗರ್ಭಗುಡಿಗೆ ಬಾಗಿಲು ಹಾಗಿ ಮನೆಗೆ ಹೋಗಿದ್ದು, ಈ ಸಂದರ್ಭದಲ್ಲಿ ದಂಪತಿ ದೇಗುಲಕ್ಕೆ ಭಕ್ತರಂತೆ ಬಂದಿದ್ದರು. ಹೊರಗಡೆ ಇದ್ದ ದೇವರಿಗೆ ಕೈಮುಗಿದು ದೇವಸ್ಥಾನ ಪ್ರವೇಶಿಸಿ ಕಾಣಿಕೆ ಡಬ್ಬಿ ಒಡೆಯುವ ಪ್ರಯತ್ನ ಮಾಡಿ ವಿಫಲರಾದರು. ನಂತರ ಗರ್ಭಗುಡಿ ಪ್ರವೇಶಿಸಿ, ಬರಿಗೈಯಲ್ಲಿ ಮರಳಿದ್ದು, ಕಳ್ಳರ ಸಂಪೂರ್ಣ ಚಲನವಲನ ದೇವಸ್ಥಾನದ ಸಿಸಿ ಟಿವಿಯಲ್ಲಿ ದಾಖಲಾಗಿದೆ.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಂ.ನಾಯಕ್ ಗಂಗೊಳ್ಳಿ ಠಾಣೆಗೆ ದೂರು ನೀಡಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ಕರುಣಾಕರ ದೇವಾಡಿಗ ಭದ್ರಾವತಿಯ ಅಪ್ರಾಪ್ತೆಯನ್ನು ಮದುವೆಯಾಗಿ, ಕಂಬದಕೋಣಿಯಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಅಪ್ರಾಪ್ತೆಯನ್ನು ಮದುವೆಯಾದ ಬಗ್ಗೆಯೂ ಪ್ರಕರಣ ದಾಖಲಾಗಿದೆ.
ಗಂಗೊಳ್ಳಿ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪತಿ ಕರುಣಾಕರ ದೇವಾಡಿಗನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಪ್ರಾಪ್ತ ಪತ್ನಿಯನ್ನು ರಿಮ್ಯಾಂಡ್ ಹೋಂ ಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.