ಇತ್ತೀಚಿನ ಸುದ್ದಿ
ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ: ಕಡಲನಗರಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
22/07/2023, 20:42
ಮಂಗಳೂರು(reporterkarnataka.com): ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ, ಬಿಜೆಪಿ ಸರಕಾರದ ಕುಮ್ಮಕ್ಕಿನಿಂದ ನಡೆಯುತ್ತಿರುವ ಅನಿಯಂತ್ರಿತ ಜನಾಂಗೀಯ ದ್ವೇಷದ ಗಲಭೆಯನ್ನು ಖಂಡಿಸಿ ಇಂದು ಮಂಗಳೂರಿನ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ವತಿಯಿಂದ ಕ್ಲಾಕ್ ಟವರ್ ಮುಂಭಾಗ ಬೃಹತ್ ಪ್ರತಿಭಟನೆ ನಡೆಯಿತು. ಸುರಿಯುತ್ತಿದ್ದ ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಅಪಾರ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದರು.ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಜಾತ್ಯತೀತ ಪಕ್ಷಗಳು ಮತ್ತು ಸಂಘಟನೆಗಳ ಜಂಟಿ ವೇದಿಕೆಯ ಅಧ್ಯಕ್ಷರಾದ ಮಾಜಿ ಸಚಿವ ಬಿ. ರಮಾನಾಥ ರೈ ಪ್ರತಿಭಟನಾ ಸಭೆಯನ್ನು ಉದ್ಘಾಟಿಸುತ್ತಾ , ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗ ದ್ವೇಷದ ಗಲಭೆಯಿಂದ ದೇಶದ ಗೌರವಕ್ಕೆ ಧಕ್ಕೆಯಾಗಿದೆ. ಮತೀಯ ದ್ವೇಷವನ್ನು ಜನರ ತಲೆಗೆ ವ್ಯವಸ್ಥಿತವಾಗಿ ತುಂಬಿಸಿದರ ಪರಿಣಾಮ ಇಂದು ದೇಶದಲ್ಲಿ ಕಾಣಿಸುತ್ತಿದೆ. ಗುಜರಾತ್ ನಲ್ಲಿ ಬಿಲ್ಕಿಸ್ ಬಾನೋ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಮೋದಿ ಸರಕಾರ ನಿರ್ಲಜ್ಜವಾಗಿ ನಡೆದುಕೊಂಡಿತ್ತು. ಈಗ ಮಣಿಪುರದಲ್ಲಿ ಅದು ಮರುಕಳಿಸಿದೆ.ಮಣಿಪುರದ ಜನತೆಗೆ ನ್ಯಾಯ ಒದಗಿಸಲು, ಶಾಂತಿ ನೆಲೆಗೊಳಿಸಲು ಎಲ್ಲರೂ ಒಂದಾಗಿ ನಿಲ್ಲಬೇಕಿದೆ. ಕರ್ನಾಟಕದಲ್ಲಿ ಬಿಜೆಪಿ ಸರಕಾರವನ್ನು ಸೋಲಿಸಿದಂತೆ ಲೋಕಸಭೆ ಚುನಾವಣೆಯಲ್ಲಿಯೂ ನರೇಂದ್ರ ಮೋದಿ ಸರಕಾರವನ್ನು ಸೋಲಿಸಿ ಸರಿಯಾದ ಪಾಠ ಕಲಿಸಬೇಕಿದೆ ಎಂದು ಹೇಳಿದರು.
ಮದರ್ ಥೆರೆಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರಾಯ್ ಕ್ಯಾಸ್ಟಲಿನೋ ಮಾತನಾಡಿ, ಮಹಿಳೆಯರ ಬೆತ್ತಲೆ ಮೆರವಣಿಗೆಯಿಂದ ನಾವೆಲ್ಲರೂ ನಾಚಿ ತಲೆತಗ್ಗಿಸುವಂತಾಗಿದೆ. ಗಲಭೆ ಶುರುವಾಗಿ ಎಪ್ಪತ್ತಾರು ದಿನಗಳಾದರೂ ಬಾಯಿ ತೆರೆಯದ ಪ್ರಧಾನಿಗಳು ಬಾಯಿ ಬಿಚ್ಚಿರಲಿಲ್ಲ. ಈಗ ಸುಪ್ರೀಂ ಕೋರ್ಟ್ ಚೀಮಾರಿ ಹಾಕಿದ ಮೇಲೆ, ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಮೇಲೆ ಮೂವತ್ತು ಸೆಕೆಂಡ್ ನ ಪ್ರತಿಕ್ರಿಯೆ ನೀಡಿ ಮೊಸಳೆ ಕಣ್ಣೀರು ಸುರಿಸಿದ್ದಾರೆ. ದೇಶದ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಮಣಿಪುರ ಹಿಂಸಾಚಾರದ ಹಿಂದೆ ಬಿಜೆಪಿ ಸರಕಾರ ಇದೆ. ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಗಲಭೆ ಸೃಷ್ಟಿಸಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಸರಕಾರವನ್ನು ಜನತೆ ಒಂದಾಗಿ ಕಿತ್ತು ಹಾಕಬೇಕು ಎಂದು ಹೇಳಿದರು.
ರೈತ ಸಂಘದ ಸನ್ನಿ ಡಿಸೋಜ, ಕೆಥೋಲಿಕ್ ವುಮನ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷರಾದ ಗ್ರೆಟ್ಟಾ ಪಿಂಟೊ, ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಾಲೆಟ್ ಪಿಂಟೋ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರಾದ ಪುರುಷೋತ್ತಮ ಚಿತ್ರಾಪುರ, ಕವಿತಾ ಸನಿಲ್, ಅಪ್ಪಿ,ಕವಿತಾ ವಾಸು, ಸಿಪಿಎಂ ಮುಖಂಡರಾದ ಕೆ ಯಾದವ ಶೆಟ್ಟಿ,ಸುಕುಮಾರ್, ಸಿಪಿಐ ನಾಯಕರಾದ ಸೀತಾರಾಮ ಬೇರಿಂಜಾ, ವಿ.ಕುಕ್ಯಾನ್, ಕಾರ್ಮಿಕ ನಾಯಕರಾದ ಸುನಿಲ್ ಕುಮಾರ್ ಬಜಾಲ್,ವಸಂತ ಆಚಾರಿ, ಜೆ.ಬಾಲಕೃಷ್ಣ ಶೆಟ್ಟಿ,ಯೋಗೀಶ್ ಜಪ್ಪಿನಮೋಗರು, ರೋಹಿದಾಸ್ ತೊಕ್ಕೊಟ್ಟು, ತಿಮ್ಮಪ್ಪ ಕಾವೂರು,ಯುವಜನ ಮುಖಂಡರಾದ ಮನೋಜ್ ವಾಮಂಜೂರು,ರಮಾನಂದ ಪೂಜಾರಿ,ರೆಹಮಾನ್ ಖಾನ್ ಕುಂಜತ್ತಬೈಲ್, ನಿತಿನ್ ಕುತ್ತಾರ್,ಚರಣ್ ಶೆಟ್ಟಿ,ಅನಿಲ್ ಡಿಸೋಜ,ಮಹಿಳಾ ಮುಖಂಡರಾದ ಭಾರತಿ ಬೋಳಾರ,ಪ್ರಮೀಳಾ ಶಕ್ತಿನಗರ,ಶಶಿಕಲಾ,ಶಾಂತಲಾ ಗಟ್ಟಿ,ಪ್ರಮೀಳಾ ದೇವಾಡಿಗ, ಸೌಮ್ಯ ಪಂಜಿಮೋಗರು,ದಲಿತ ನಾಯಕರಾದ ಎಂ ದೇವದಾಸ್,ರಘು ಎಕ್ಕಾರು, ಕಮಲಾಕ್ಷ,ಆದಿವಾಸಿ ನಾಯಕರಾದ ಲಕ್ಷ್ಮಣ್ ವಾಮಂಜೂರು,ಸಾಮಾಜಿಕ ಚಿಂತಕರಾದ ಎಂ. ಜಿ. ಹೆಗ್ಡೆ, ಡಾ.ಕೃಷ್ಣಪ್ಪ ಕೊಂಚಾಡಿ,ನರೇಂದ್ರ ನಾಯಕ್,ಅನಿಲ್ ಲೋಬೋ,ಫ್ಲೇವಿ ಕ್ರಾಸ್ತಾ, ಕ್ವೀನಿ ಪರ್ಸಿ ಆನಂದ್,ಜೆರ್ರಿ ಪತ್ರವೋ ಮುಂತಾದವರು ಉಪಸ್ಥಿತರಿದ್ದರು.