ಇತ್ತೀಚಿನ ಸುದ್ದಿ
ಮಂಗಳೂರು: ವ್ಯಾಪಕವಾಗಿ ಹಬ್ಬುತ್ತಿರುವ ಕೆಂಗಣ್ಣು; ಶಾಲಾ ಮಕ್ಕಳೇ ಟಾರ್ಗೆಟ್; ಭಯ ಬೇಡ ಎಂದ ವೈದ್ಯರು
18/11/2022, 11:01

ಮಂಗಳೂರು(reporterkarnataka.com): ಕಡಲನಗರಿ ಮಂಗಳೂರು ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಕೆಂಗಣ್ಣು ಕಾಯಿಲೆ ವ್ಯಾಪಕವಾಗಿ ಹಬ್ಬುತ್ತಿದ್ದು, ಇದು ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಕಾಣಿಸಿಕೊಂಡಿದೆ.
ಒಂದು ಅಂದಾಜು ಸಮೀಕ್ಷೆ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 50ರಷ್ಟು ಮಕ್ಕಳಲ್ಲಿ ಮೆಡ್ರಾಸ್ ಐ ಎಂದು ಕರೆಸಿಕೊಳ್ಳುವ ಕೆಂಗಣ್ಣು ಸಮಸ್ಯೆ ಕಂಡು ಬಂದಿದೆ. ಕಣ್ಣು ಕೆಂಪು ಮಾಡಿ ಹೋದ ಶಾಲಾ ಮಕ್ಕಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಇನ್ನು ಕೆಲವು ಖಾಸಗಿ ಶಾಲೆಗಳಲ್ಲಿ ಕೆಂಗಣ್ಣು ಸಮಸ್ಯೆಗೆ ಗುರಿಯಾದ ಮಕ್ಕಳನ್ನು ಇತರ ಮಕ್ಕಳಿಂದ ಪ್ರತ್ಯೇಕಿಸಿ, ಡೈನಿಂಗ್ ಹಾಲ್ ನಲ್ಲಿ ಕೂರಿಸಲಾಗುತ್ತದೆ. ಹಾಗೆ ಮರುದಿನದಿಂದ ಕಾಯಿಲೆ ಗುಣ ಆಗುವ ವರೆಗೆ ಶಾಲೆಗೆ ಬರುವುದು ಬೇಡ ಎಂದು ಸೂಚಿಸಲಾಗುತ್ತಿದೆ.
ಮಕ್ಕಳು ಮಾತ್ರವಲ್ಲದೆ ವಯಸ್ಕರಿಗೆ ಕೂಡ ಕೆಂಗಣ್ಣು ಸಮಸ್ಯೆಗೆ ತುತ್ತಾಗಿದ್ದಾರೆ.ಕೆಂಗಣ್ಣು ಕಾಯಿಲೆ ಪ್ರತಿ ವರ್ಷ ಅಲ್ಲಲ್ಲಿ ಕಾಣಿಸುತ್ತಿದ್ದು, ಕಣ್ಣಿನ ಡ್ರಾಫ್ಸ್ ಮೂಲಕ ಕೆಂಗಣ್ಣನ್ನು ಗುಣಪಡಿಸಬಹುದು.
ಕೆಂಗಣ್ಣಿಗೆ ಗುರಿಯಾದವರು ಕಣ್ಣುಜ್ಜದೇ, ವೈದ್ಯರ ಸಲಹೆ ಪಡೆದು ಕಣ್ಣಿಗೆ ಡ್ರಾಫ್ಸ್ ಹಾಕಿಸಿಕೊಂಡರೆ ಶೀಘ್ರ ಗುಣಮುಖರಾಗಲು ಸಾಧ್ಯ. ಇದರ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ವೈದ್ಯರು ಸಲಹೆ ನೀಡುತ್ತಾರೆ.