ಇತ್ತೀಚಿನ ಸುದ್ದಿ
ಮಂಗಳೂರು: ಶಾಲಾ ಮಕ್ಕಳ ಸಾಗಿಸುತ್ತಿರುವ ಖಾಸಗಿ ವಾಹನಗಳ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
27/06/2024, 23:33
ಮಂಗಳೂರು(reporterkarnataka.com): ಮಂಗಳೂರು: ಶಾಲಾ ಮಕ್ಕಳ ಸಾಗಿಸುತ್ತಿರುವ ಖಾಸಗಿ ವಾಹನಗಳ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆಶಾಲಾ ಮಕ್ಕಳನ್ನು ಸಾಗಿಸುತ್ತಿರುವ ಖಾಸಗಿ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಒತ್ತಾಯಿಸಿ ದ.ಕ.ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ನೇತ್ರತ್ವದಲ್ಲಿ
ನಗರದ ಕ್ಲಾಕ್ ಟವರ್ ಬಳಿ ಗುರುವಾರ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಶಾಲಾ ಮಕ್ಕಳ ವಾಹನ ಚಾಲಕರು ಆಕ್ರೋಶಭರಿತವಾಗಿ ಘೋಷಣೆಗಳನ್ನು ಕೂಗುತ್ತಾ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್ ಅವರು ಮಾತನಾಡುತ್ತಾ, ಬಿಳಿ ಬಣ್ಣದ ಖಾಸಗೀ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಸಾಗಿಸುತ್ತಿರುವ ಘಟನೆಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ಪೋಲಿಸ್ ಇಲಾಖೆ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ.ಈ ಬಗ್ಗೆ ಹಲವಾರು ಬಾರಿ ಮನವಿಯನ್ನು ಸಂಬಂಧಪಟ್ಟ ಇಲಾಖೆಗೆ ನೀಡಿದ್ದರೂ ಈವರೆಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಇರುವುದು ಭಾರೀ ಸಂಶಯಕ್ಕೆಡೆ ಮಾಡಿದೆ. ಒಂದು ವೇಳೆ ಪೋಲಿಸ್ ಇಲಾಖೆ ಖಾಸಗಿ ವಾಹನಗಳ ಬಗ್ಗೆ ಮೃದು ಧೋರಣೆ ತಳೆದದ್ದೇ ಆದರೆ ಅದು ಎಳೆಯ ಪ್ರಾಯದ ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟವಾಡಿದಂತೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ದ.ಕ. ಜಿಲ್ಲಾ ಟ್ಯಾಕ್ಸಿ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಆನಂದ ಅವರು ಮಾತನಾಡಿ, ಸಾರಿಗೆ ಇಲಾಖೆಯ ಎಲ್ಲಾ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಪ್ರಾಮಾಣಿಕವಾಗಿ ದುಡಿಯುವ ಟೂರಿಸ್ಟ್ ವಾಹನಗಳ ಬಗ್ಗೆ ಸದಾ ಕೆಂಗಣ್ಣು ಬೀರುವ ಸಾರಿಗೆ ಅಧಿಕಾರಿಗಳು, ವಾಹನ ಸಂಚಾರ ನಿಯಮಗಳನ್ನೇ ಗಾಳಿಗೆ ತೂರಿ ಹಾಡುಹಗಲಲ್ಲೇ ಶಾಲಾ ಮಕ್ಕಳನ್ನು ಬಿಳಿ ಬಣ್ಣದ ಖಾಸಗಿ ವಾಹನಗಳಲ್ಲಿ ಸಾಗಿಸುತ್ತಿರುವ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಇರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ರೆಹಮಾನ್ ಖಾನ್ ಕುಂಜತ್ತಬೈಲ್ ಅವರು ಶಾಲಾ ಮಕ್ಕಳ ವಾಹನ ಚಾಲಕರ ಬವಣೆಗಳ ಬಗ್ಗೆ ಬೆಳಕು ಚೆಲ್ಲುತ್ತಾ,ಶಾಲಾ ಮಕ್ಕಳನ್ನು ಸಾಗಿಸುತ್ತಿರುವ ಖಾಸಗಿ ವಾಹನ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ರೀತಿಯ ಹೋರಾಟವನ್ನು ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯನ್ನುದ್ದೇಶಿಸಿ ಸಂಘದ ಕಾರ್ಯಾಧ್ಯಕ್ಷರಾದ ಲೋಕೇಶ್ ಸುರತ್ಕಲ್ , ಅಧ್ಯಕ್ಷರಾದ ಮೋಹನ್ ಕುಮಾರ್ ಅತ್ತಾವರ ಅವರು ಮಾತನಾಡಿ ಹೋರಾಟದ ಮಹತ್ವವನ್ನು ವಿವರಿಸಿದರು. ಪ್ರತಿಭಟನೆಯಲ್ಲಿ ಟ್ಯಾಕ್ಸಿ ಮೆನ್ ಅಸೋಸಿಯೇಷನ್ ನ ಮುಖಂಡರಾದ ಕಮಲಾಕ್ಷ, KTDO ಸಂಘಟನೆಯ ಕಾರ್ಯದರ್ಶಿ ಸೂರಜ್ ಅವರು ಭಾಗವಹಿಸಿದ್ದರು.
ಪ್ರತಿಭಟನೆಯ ಬಳಿಕ ಸಂಘದ ಉನ್ನತ ಮಟ್ಟದ ನಿಯೋಗವೊಂದು ಆರ್ ಟಿಒ ಅಧಿಕಾರಿಗಳು, ನಗರ ಪೋಲಿಸ್ ಆಯುಕ್ತರು ಹಾಗೂ ದ.ಕ.ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಹೋರಾಟದ ನೇತೃತ್ವವನ್ನು ಸಂಘದ ಜಿಲ್ಲಾ ಮುಖಂಡರಾದ ಸ್ಟೇನಿ ಮಿನೇಜಸ್, ಕಿರಣ್ ಲೇಡಿಹಿಲ್, ದಿನೇಶ್ ಕುಂಜತ್ತಬೈಲ್, ಶರತ್ ಸುರತ್ಕಲ್, ಶ್ರೀಕಾಂತ್ ಬಿ.ಸಿ.ರೋಡ್, ಬೆಂಜಮಿನ್ ವೇಗಸ್, ಶಂಕರ್ ಶೆಟ್ಟಿ, ಪ್ರವೀಣ್ ಲೇಡಿಹಿಲ್, ರಾಜೇಶ್ ಕುಳಾಯಿ, ಮುನ್ನ ಪದವಿನಂಗಡಿ, ಸತೀಶ್ ಪೂಜಾರಿ, ನರೇಂದ್ರ ಹೊಯಿಗೆಬೈಲ್, ಚಿತ್ತರಂಜನ್ ಸುವರ್ಣ ಮುಂತಾದವರು ವಹಿಸಿದ್ದರು.