ಇತ್ತೀಚಿನ ಸುದ್ದಿ
ಮಂಗಳೂರು ಸಹಿತ ರಾಜ್ಯದಲ್ಲಿ 6 ಹೊಸ ನಗರಗಳ ನಿರ್ಮಾಣ: ಟೆಕ್ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಘೋಷಣೆ
19/11/2022, 20:08

ಬೆಂಗಳೂರು(reporterkarnataka.com): ರಾಜ್ಯದಲ್ಲಿ ಮಂಗಳೂರು ಸೇರಿದಂತೆ 6 ಹೊಸ ನಗರಗಳ ನಿರ್ಮಾಣ ಮಾಡಲಾಗುತ್ತಿದೆ. ಮಂಗಳೂರು, ಕಲಬುರಗಿ, ಹುಬ್ಬಳ್ಳಿ ಧಾರವಾಡ ಹಾಗೂ ಮೈಸೂರು ಸುತ್ತ ಹೊಸ ನಗರಗಳು ನಿರ್ಮಾಣವಾಗಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುಯಲ್ ಆಗಿ ಉದ್ಘಾಟಿಸಿದ, ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ 3 ದಿನಗಳ ಟೆಕ್ ಸಮ್ಮೇಳನ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಂಗಳೂರಿನ ಪಕ್ಕ ಹೊಸ ನಗರ ನಿರ್ಮಾಣ ಮಾಡಲಾಗುತ್ತದೆ. ಜ್ಞಾನ, ವಿಜ್ಞಾನ ಹಾಗೂ ಟೆಕ್ ಸಿಟಿ ನಿರ್ಮಾಣ ಮಾಡಲಾಗುತ್ತಿದ್ದು, ಇದು ವಿಮಾನ ನಿಲ್ದಾಣಕ್ಕೆ ಹತ್ತಿರವಿರಲಿದೆ. 6 ತಿಂಗಳೊಳಗೆ ಈ ನಗರ ನಿರ್ಮಾಣದ ಬಗ್ಗೆ ಘೋಷಣೆ ಮಾಡಲಿದ್ದು, ಯೋಜನೆಯನ್ನು ರೂಪಿಸಲಾಗುವುದು. ಸ್ಟಾರ್ಟ್ ಅಪ್‌ಗಳನ್ನು ಪ್ರೋತ್ಸಾಹಿಸಲು ಅನೇಕ ಕಾರ್ಯಕ್ರಮಗಳಿದ್ದು, ಸರ್ಕಾರದ ವತಿಯಿಂದ ಇನ್ನಷ್ಟು ಕಾರ್ಯಕ್ರಮ ರೂಪಿಸಬೇಕಿದೆ. ಸ್ಟಾರ್ಟ್ ಅಪ್ ಪಾರ್ಕ್ ನಿರ್ಮಾಣಕ್ಕೆ ತೀರ್ಮಾನಿಸಿದ್ದು ಇದೂ ಕೂಡ 6 ತಿಂಗಳಲ್ಲಿ ಸ್ಥಾಪಿಸಲಾಗುವುದು ಎಂದು ತಿಳಿಸಿದರು.