ಇತ್ತೀಚಿನ ಸುದ್ದಿ
Mangaluru | ಹೆಚ್ಚುತ್ತಿರುವ ತಾಪಮಾನ: ಕಟ್ಟಡ, ಹಮಾಲಿ ಕಾರ್ಮಿಕರಿಗೆ ಸೌಲಭ್ಯ ಒದಗಿಸಲು ಇಲಾಖೆ ಸೂಚನೆ
28/03/2025, 11:15

ಮಂಗಳೂರು(reporterkarnataka.com): ಬೇಸಿಗೆಯ ಹಿನ್ನೆಲೆಯಲ್ಲಿ ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಶಾಖದ ಹೊಡೆತದಿಂದ ಕಾರ್ಮಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಮುಂಜಾಗೃತಾ ಕ್ರಮವಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಹಮಾಲಿ ಕಾರ್ಮಿಕರು, ದಿನಗೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಮತ್ತಿತರ ಎಲ್ಲಾ ವರ್ಗದ ಕಾರ್ಮಿಕರಿಗೆ ಕೆಲಸದ ಸ್ಥಳಗಳಲ್ಲಿ ಸುರಕ್ಷತೆ, ಆರೋಗ್ಯ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಎಲ್ಲಾ ಉದ್ಯೋಗದಾತರ, ಗುತ್ತಿಗೆದಾರರ ಹಾಗೂ ನಿಯೋಜಕರ ಆದ್ಯ ಕರ್ತವ್ಯವಾಗಿರುತ್ತದೆ. ಆದ್ದರಿಂದ ಜಿಲ್ಲೆಯ ಎಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣಗಳ ಮಾಲೀಕರು, ಉದ್ಯೋಗದಾತರು ಮತ್ತು ಕಾರ್ಮಿಕರು ಸಂಬಂಧಿಸಿದ ಸೂಚನೆಗಳನ್ನು ಪಾಲಿಸಬೇಕು.
ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಮತ್ತು ವಸತಿ ಶೆಡ್‍ಗಳಲ್ಲಿ ಪರಿಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಲೀಕರು ಮಾಡಬೇಕು. ನಿರ್ಜಲೀಕರಣವಾಗದಂತೆ ತಡೆಯಲು ಕೆಲಸದ ವೇಳೆ ಅರ್ಧ ಗಂಟೆಗೊಮ್ಮೆಯಾದರೂ ನೀರು ಕುಡಿಯುವುದು ಮತ್ತು ಕೆಲಸದ ಮಧ್ಯ ವಿಶ್ರಾಂತಿ ಪಡೆಯಲು ಗಮನ ಕೊಡಬೇಕು. ಶ್ರಮದಾಯಕ ಮತ್ತು ಹೊರಾಂಗಣ ಕೆಲಸಗಳನ್ನು ಬೆಳಿಗ್ಗೆ ಮತ್ತು ಸಂಜೆಯ ವೇಳೆ ತಾಪಮಾನ ಕಡಿಮೆಯಿರುವ ಸಮಯದಲ್ಲಿ ನಿರ್ವಹಿಸುವುದು. ಬೃಹತ್ ಕಟ್ಟಡ ಮತ್ತು ಇತರೆ ನಿರ್ಮಾಣದಾರರು ತಮ್ಮ ಕಾರ್ಮಿಕರು ನೇರ ಸೂರ್ಯನ ಬಿಸಿಲಿನಲ್ಲಿ ಕೆಲಸ ನಿರ್ವಹಿಸದಂತೆ ಎಚ್ಚರ ವಹಿಸುವುದು ಮತ್ತು ಕಾರ್ಮಿಕರೊಂದಿಗೆ ಸಮಾಲೋಚಿಸಿ ಸಾಧ್ಯವಾದಲ್ಲಿ ರಾತ್ರಿ ವೇಳೆಯಲ್ಲಿ ಕೆಲಸ ಮಾಡಿಸಬಹುದಾಗಿದೆ.
ಹೆಚ್ಚಿನ ಬಿಸಿಲಿನ ತಾಪಮಾನವಿರುವ ಸಮಯದಲ್ಲಿ ಕಾರ್ಮಿಕರಿಗೆ ಕೆಲಸ ಮಾಡಲು ಅನುಕೂಲವಾಗುವಂತೆ ನೆರಳಿರುವ ಪ್ರದೇಶವನ್ನು ಒದಗಿಸುವುದು. ಕೆಲಸದ ಸ್ಥಳದ ಬಳಿ ಗಾಳಿ, ಬೆಳಕು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇರುವ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಬೇಕು. ಕಾರ್ಮಿಕರು ಬಿಸಿಲಿನಲ್ಲಿ ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವಾಗ ರಕ್ಷಣಾತ್ಮಕ ಕನ್ನಡಕಗಳು ಟೋಪಿ, ಬೂಟ್ ಅಥವಾ ಚಪ್ಪಲಿಗಳನ್ನು ಧರಿಸುವಂತೆ ಗಮನಿಸಬೇಕು.
ಕಾರ್ಮಿಕರಿಗೆ ಆರೋಗ್ಯ ತಪಾಸಣಾ ವ್ಯವಸ್ಥೆಯನ್ನು ಕೈಗೊಳ್ಳುವುದು ಹಾಗೂ ಕೆಲಸದ ಸ್ಥಳದಲ್ಲಿ ಪ್ರಥಮ ಚಿಕಿತ್ಸಾ ಸೌಲಭ್ಯಗಳನ್ನು ಕಡ್ಡಾಯವಾಗಿ ವ್ಯವಸ್ಥೆಗೊಳಿಸುವುದು. ಬಿಸಿಲಿನಿಂದ ಹೀಟ್ ಸ್ಟ್ರೋಕ್ ಲಕ್ಷಣಗಳು ಕಂಡುಬಂದಲ್ಲಿ ತಂಪಾದ ಜಾಗಕ್ಕೆ ಸ್ಥಳಾಂತರಿಸಿ ಅಂತಹ ವ್ಯಕ್ತಿಗೆ ಐಸ್ ಪ್ಯಾಕ್ ಗಳನ್ನು ಉಪಯೋಗಿಸುವುದು ಮತ್ತು ಅವಶ್ಯಕತೆಯಿದ್ದಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕ್ರಮವಹಿಸುವುದು.
ಅಂತರ್ ಜಿಲ್ಲೆ ಮತ್ತು ಅಂತರರಾಜ್ಯಗಳಿಂದ ಕೆಲಸಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿರುವ ಕಾರ್ಮಿಕರಿಗೆ ನಿರ್ಮಾಣ ಕಾಮಗಾರಿಗಳ ಮಾಲೀಕರು/ ಗುತ್ತಿಗೆದಾರರು/ ನಿರ್ವಾಹಕರು ಕಲ್ಪಿಸಿರುವ ತಾತ್ಕಾಲಿಕ ಕಾರ್ಮಿಕರ ಶೆಡ್‍ಗಳಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳು ದೊರೆಯುವಂತೆ ಕ್ರಮವಹಿಸಬೇಕು ಎಂದು ಮಂಗಳೂರು ಕಾರ್ಮಿಕ ಇಲಾಖೆ, ಉಪವಿಭಾಗ-1 ಮತ್ತು 2ರ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.