ಇತ್ತೀಚಿನ ಸುದ್ದಿ
Mangaluru | ಇಂಡಿಯನ್ ಡಿಸೈನ್ ಸ್ಕೂಲ್ ನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ
22/08/2025, 11:08

ಮಂಗಳೂರು(reporterkarnataka.com): ನಗರದ ಅತ್ತಾವರ ಇಂಡಿಯನ್ ಡಿಸೈನ್ ಸ್ಕೂಲ್ ನ ಪ್ರಥಮ ವರ್ಷದ ವಿದ್ಯಾರ್ಥಿ ಗಳಿಗೆ ಓರಿಯಂಟೇಶನ್ ಕಾಯ೯ಕ್ರಮ ಇತ್ತೀಚೆಗೆ ಕಾಲೇಜಿನ ಆವರಣದಲ್ಲಿ ಜರುಗಿತು.
ಅತಿಥಿ ಗಣ್ಯರೆಲ್ಲ ಸೇರಿ ಗಿಡಕ್ಕೆ ನೀರು ಹಾಯಿಸುವ ಮೂಲಕ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪ್ರಸನ್ನ ಟೆಕ್ನಾಲಜೀಸ್ ನ ವ್ಯವಸ್ಥಾಪಕ ನಿರ್ದೇಶಕ ಸುಭೋದ್ ಶೆಟ್ಟಿ ಅವರು ಮಾತನಾಡಿ ತಂತ್ರಜ್ಞಾನ ಕ್ಷೇತ್ರದ ಅನುಭವಗಳನ್ನು ಹಂಚಿಕೊಂಡು, ವಿದ್ಯಾರ್ಥಿಗಳು ಹೇಗೆ ಭವಿಷ್ಯದತ್ತ ತಮ್ಮನ್ನು ತಾವು ಸಜ್ಜುಗೊಳಿಸಬೇಕೆಂದು ತಿಳಿಸಿದರು.
ಕೃತಕ ಬುದ್ಧಿಮತ್ತೆ (AI) ವೇಗವಾಗಿ ಬೆಳೆಯುತ್ತಿರುವ ಮತ್ತು ಎಲ್ಲ ಕ್ಷೇತ್ರಗಳಲ್ಲೂ ಪ್ರವೇಶಿಸುತ್ತಿರುವ ಈ ಯುಗದಲ್ಲಿ ವಿದ್ಯಾರ್ಥಿಗಳು ಹಳೆಯದಾಗಿ ಬಿಟ್ಟುಕೊಳ್ಳದೆ, ತಮ್ಮ ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕು.
“ಯಾರು ನೋಡುತ್ತಿಲ್ಲವಾದರೂ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು” ಎಂಬ ಅಂತರಂಗದ ಮೌಲ್ಯವನ್ನು ಅವರು ವಿಶೇಷವಾಗಿ ತಿಳಿ ಹೇಳಿದರು.
ಪಿ.ಎಸ್. ಮೊಹಮ್ಮದ್ ಹನೀಫ್, ಮ್ಯಾನೇಜಿಂಗ್ ಪಾಲುದಾರ – ಸ್ವರಾಜ್ ಬೋರ್ಡ್ ಪ್ರಾಡಕ್ಟ್ಸ್ ಮತ್ತು ಡೈರೆಕ್ಟರ್ – ಆಪಲ್ ಮಾರ್ಟ್, ಇವರು ತಮ್ಮ ಉದ್ಯಮಶೀಲ ಜೀವನಯಾನ ಆಧರಿಸಿದ ಪ್ರೇರಣಾದಾಯಕ ಭಾಷಣ ನೀಡಿದರು. ಅವರು ಸ್ಮಾರ್ಟ್ ಮಾರ್ಕೆಟಿಂಗ್ ಕುರಿತು ಮಾತನಾಡಿ, “ಅತ್ಯುತ್ತಮ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಅಂದ್ರೆ, ಆಂಟಾರ್ಕ್ಟಿಕಾದಲ್ಲಿ ಫ್ರಿಜ್ ಮಾರಬಲ್ಲವನು” ಎಂದು ಹಾಸ್ಯಾತ್ಮಕವಾದರೂ ಗಂಭೀರ ಸಂದೇಶ ನೀಡಿದರು.
ಕಾಲೇಜಿನ ಅಧ್ಯಕ್ಷರಾದ ಆರ್ಕಿಟೆಕ್ಟ್ ಮೊಹಮ್ಮದ್ ನಿಸಾರ್ ಅವರು ಸಂಸ್ಥೆಯ ಉದ್ದೇಶಗಳ ಬಗ್ಗೆ ಮಾತನಾಡಿ, ಶೈಕ್ಷಣಿಕ ಮೇಲುಗೈ ಜೊತೆಗೆ ಸ್ವಭಾವ ನಿರ್ಮಾಣದ ಮಹತ್ವವನ್ನು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲೆ ತಾರಾ ಎಸ್. ಶೆಟ್ಟಿಯವರು ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಮತ್ತು ಬದ್ಧತೆಯಿಂದ ಕಲಿಕೆಯನ್ನು ಅಕ್ಕರೆಯಿಂದ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾಯ೯ಕ್ರಮದಲ್ಲಿ, ಕಾಲೇಜಿನ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಹಾಗೂ ಹೊಸ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಬಿ.ಎಸ್.ಸಿ. ಇಂಟೀರಿಯರ್ ಡಿಸೈನ್ ಅಂತಿಮ ವರ್ಷದ ವಿದ್ಯಾರ್ಥಿನಿಗಳಾದ ಝಿನೆರಾ ಸ್ವಾಗತಿಸಿದರು. ಅಫಾ೯ ಅತಿಥಿ ಗಳನ್ನು ಪರಿಚಯಿಸಿದರು. ಬಿ.ಎಸ್.ಸಿ. ಇಂಟೀರಿಯರ್ ಡಿಸೈನ್ ದ್ವಿತೀಯ ವರ್ಷದ ವಿದ್ಯಾರ್ಥಿನಿ ಶಮ್ನಾಸ್ ವಂದಿಸಿದರು. ಅಂತಿಮ ವರ್ಷದ ವಿದ್ಯಾರ್ಥಿನಿ ಮಿಸ್ಬಾ ಕಾಯ೯ಕ್ರಮ ನಿರೂಪಿಸಿದರು.