ಇತ್ತೀಚಿನ ಸುದ್ದಿ
Mangaluru | ನೂತನ ಪೋಪ್ ಆಯ್ಕೆಗೆ ಮಂಗಳೂರು ಬಿಷಪ್ ಸಂತಸ: ರಾಷ್ಟ್ರದ ಸೈನಿಕರಿಗಾಗಿ ಪ್ರಾರ್ಥನೆ
10/05/2025, 21:39

ಮಂಗಳೂರು(reporterkarnataka.com): ಪೋಪ್ ಫ್ರಾನ್ಸಿಸ್ ಅವರ ಉತ್ತರಾಧಿಕಾರಿಯಾಗಿ ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಪ್ರೆವೊಸ್ಟ್ ಅವರು ಹೊಸ ಪೋಪ್ ಆಗಿ ಆಯ್ಕೆಗೊಂಡಿದ್ದು, ಈ ಬಗ್ಗೆ ಕ್ಯಾಥೊಲಿಕ್ ಧರ್ಮ ಸಭೆ ಸಂತೋಷ ಪಡುತ್ತದೆ. ಪೋಪ್ ರಾಬರ್ಟ್ ಫ್ರಾನ್ಸಿಸ್ ಪ್ರೆವೊಸ್ಟ್ ಅವರು ಪೋಪ್ ಲಿಯೋ XIV ಎಂಬ ಹೆಸರನ್ನು ಪಡೆದುಕೊಂಡಿದ್ದಾರೆ. ಇದು ಜಾಗತಿಕ ಕ್ಯಾಥೊಲಿಕ್ ಧರ್ಮ ಸಭೆಗೆ ಅತೀವ ಸಂತೋಷ ಮತ್ತು ನವೀಕೃತ ಭರವಸೆಯ ಕ್ಷಣವಾಗಿದೆ. ನಮ್ಮ ಕರ್ತನಾದ ಯೇಸು ಕ್ರಿಸ್ತನ ಬಯಕೆಯ ಪ್ರಕಾರ ಧರ್ಮ ಸಭೆಯನ್ನು ಮುನ್ನಡೆಸಲು ಹೊಸ ಪೋಪ್ ಸ್ವಾಮಿಯನ್ನು ಆಯ್ಕೆ ಮಾಡುವಲ್ಲಿ ಕಾರ್ಡಿನಲ್ ಗಳ ಮಂಡಳಿಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ನಾವು ದೇವರಿಗೆ ಧನ್ಯವಾದಗಳನ್ನು ಅರ್ಪಿಸೋಣ. ಧರ್ಮ ಸಭೆಯನ್ನು ಮುನ್ನಡೆಸುವಲ್ಲಿ ಪರಮೋಚ್ಛ ಗುರುಗಳನ್ನು ಬಲಪಡಿಸಲು ನಾವು ದೇವರ ಮುಂದೆ ಪ್ರಾರ್ಥನೆ ಸಲ್ಲಿಸೋಣ ಎಂದು ಮಂಗಳೂರು ಬಿಷಪ್ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ವಿನಂತಿಸಿದ್ದಾರೆ.
ಇದೇ ವೇಳೆ ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಕ್ರೂರ ಮತ್ತು ಹೇಡಿತನದ ಭಯೋತ್ಪಾದಕ ದಾಳಿಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ ಮತ್ತು ಸಂಕಷ್ಟಕ್ಕೀಡಾಗಿದ್ದೇವೆ. ಅಮೂಲ್ಯ ಜೀವಗಳನ್ನು ಬಲಿ ತೆಗೆದುಕೊಂಡು, ಅನೇಕ ಜನರನ್ನು ಗಾಯಗೊಳಿಸಿದ ಈ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ದುಃಖದ ಸಮಯದಲ್ಲಿ ತಮ್ಮವರನ್ನು ಕಳೆದುಕೊಂಡು ಸಂತ್ರಸ್ತರಾದವರ ಮತ್ತು ಅವರ ಕುಟುಂಬಗಳೊಂದಿಗೆ ನಾವು ನಮ್ಮ ಒಗ್ಗಟ್ಟನ್ನು ಬಲವಾಗಿ ವ್ಯಕ್ತಪಡಿಸುತ್ತೇವೆ. ಒಂದು ವಿಶ್ವಾಸಾರ್ಹ ಸಮುದಾಯವಾಗಿ, ಈ ದಾಳಿಗಳಲ್ಲಿ ಸಾವನ್ನಪ್ಪಿದವರ ಆತ್ಮಗಳಿಗಾಗಿ ನಾವು ಪ್ರಾರ್ಥಿಸುತ್ತೇವೆ ಮತ್ತು ಗಾಯಗೊಂಡವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥನೆ ಸಲ್ಲಿಸುತ್ತೇವೆ. ಅದೇ ಸಮಯದಲ್ಲಿ ನಮ್ಮ ದೇಶದ ಗಡಿಗಳನ್ನು ಕಾಯುತ್ತಾ ನಮ್ಮ ಜನರನ್ನು ರಕ್ಷಣೆ ಮಾಡುತ್ತಿರುವ ನಮ್ಮ ಸಶಸ್ತ್ರ ಪಡೆಗಳ ಧೈರ್ಯ ಮತ್ತು ದಿಟ್ಟತನದ ಪ್ರಯತ್ನಗಳಿಗೆ ನಾವು ನಮ್ಮ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. ನಾಗರಿಕರು ಮತ್ತು ಸೈನಿಕರ ಸುರಕ್ಷತೆಗಾಗಿಯೂ ನಾವು ಪ್ರಾರ್ಥನೆಗಳನ್ನು ಸಲ್ಲಿಸೋಣ. ಈ ಎರಡು ಮಹತ್ವದ ಬೆಳವಣಿಗೆಗಳು ಅಂದರೆ ಹೊಸ ಪೋಪ್ ಆಯ್ಕೆಯ ಹಿನ್ನೆಲೆಯಲ್ಲಿ ಕೃತಜ್ಞತೆ ಸಲ್ಲಿಕೆ ಮತ್ತು ಇನ್ನೊಂದು ರಾಷ್ಟ್ರೀಯ ಶೋಕಾಚರಣೆ ಈಗ ನಮ್ಮ ಮುಂದೆ ಇದೆ. ನಾವು ನೆರೆಯ ರಾಷ್ಟ್ರಗಳ ನಡುವೆ ಶಾಂತಿಗಾಗಿ ಪ್ರಾರ್ಥಿಸೋಣ. ಪರಮ ಪವಿತ್ರ ಸಂಸ್ಕಾರದ ಆರಾಧನೆಯ ಸಮಯದಲ್ಲಿ ನಮ್ಮ ಕೃತಜ್ಞತೆ ಮತ್ತು ನಮ್ಮ ಮನವಿಯನ್ನು ಭಗವಂತನ ಮುಂದೆ ಇಡೋಣ. ಈ ಉದ್ದೇಶಗಳಿಗಾಗಿ ನಮ್ಮ ಧರ್ಮ ಪ್ರಾಂತ್ಯದ ಎಲ್ಲಾ ಚರ್ಚ್ ಗಳ ಧರ್ಮಗುರುಗಳು ಮತ್ತು ಚಾಪ್ಲಿನ್‌ಗಳು 2025 ಮೇ 11ರಂದು ಭಾನುವಾರದ ಬಲಿ ಪೂಜೆಯ ಬಳಿಕ ಆರಾಧನೆಯನ್ನು ನಡೆಸ ಬೇಕೆಂದು ನಾನು ವಿನಂತಿಸುತ್ತೇನೆ ಎಂದು ಬಿಷಪ್ ತಿಳಿಸಿದ್ದಾರೆ.