ಇತ್ತೀಚಿನ ಸುದ್ದಿ
Mangaluru | ಕೆಲರಾಯ್ ಸೈಂಟ್ ಆ್ಯನ್ಸ್ ಚರ್ಚ್ ನಲ್ಲಿ ‘ಕೊಂಕಣಿ ಸಂಭ್ರಮ್ 25’
31/08/2025, 21:27

ಮಂಗಳೂರು(reporterkarnataka.com): ಮಂಗಳೂರಿನ ಕೆಲರಾಯ್ ಸೈಂಟ್ ಆ್ಯನ್ಸ್ ಚರ್ಚ್ ನಲ್ಲಿ ‘ಕೊಂಕಣಿ ಸಂಭ್ರಮ್ 25’ ಕಾರ್ಯಕ್ರಮ ಭಾನುವಾರ ನಡೆಯಿತು.
ಕೆಲರಾಯ್ ಚರ್ಚ್ ನ ಧರ್ಮಗುರು ವಂದನೀಯ ಫಾ. ಸಿಲ್ವೆಸ್ಟರ್ ಡಿ’ಕೋಸ್ತಾ ಅವರು ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಕೊಂಕಣಿ ಭಾಷೆಯನ್ನು ಮನೆಯಲ್ಲಿ ಮಾತನಾಡುವ ಮೂಲಕ ಉಳಿಸಿ ಬೆಳೆಸ ಬೇಕು. ಮುಂದಿನ ಪೀಳಿಗೆಗೆ ಹಸ್ತಾಂತರಿಸ ಬೇಕು ಎಂದು ಕರೆ ನೀಡಿದರು.
ಕೊಂಕಣಿ ಸಾಹಿತಿ ಹಾಗೂ ಶಿಕ್ಷಕ ಫ್ರಾನ್ಸಿಸ್ ಡಿ’ಕುನ್ಹಾ, ಫೋರ್ ವಿಂಡ್ಸ್ ನಿರ್ದೇಶಕ ಎಲಿಯಾಸ್ ಫೆರ್ನಾಂಡಿಸ್, ಕೆಲರಾಯ್ ಚರ್ಚ್ ನ ವಾಸ್ತವ್ಯ ಧರ್ಮಗುರು ವಂದನೀಯ ಫಾ. ರೋಶನ್ ಫೆರ್ನಾಂಡಿಸ್, ಚರ್ಚ್ ಉಪಾಧ್ಯಕ್ಷ ಸಂತೋಷ್ ಡಿ’ಕೋಸ್ತಾ, ಕಾರ್ಯದರ್ಶಿ ಸೆಲಿನ್ ಡಿ’ಮೆಲ್ಲೊ, ಫಾತಿಮಾ ಕಾನ್ವೆಂಟಿನ ಸುಪೀರಿಯರ್ ಭಗಿನಿ ಐರಿನ್ ರೊಡ್ರಿಗಸ್, ಆರೋಗ್ಯ ಮಾತಾ ಕಾನ್ವೆಂಟಿನ ಸುಪೀರಿಯರ್ ಭಗಿನಿ ಝೀಜಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 40 ಮಕ್ಕಳಿಂದ ಕೊಂಕಣಿಯ ವಿವಿಧ ಸಮುದಾಯಗಳ ವಸ್ತ್ರ ಧಾರಣೆ ಪ್ರದರ್ಶನ, 10 ಕುಟುಂಬಗಳಿಂದ ಕೊಂಕಣಿ ಪುಸ್ತಕ ಪ್ರದರ್ಶನ, ನಾಲ್ಕು ತಂಡಗಳಿಂದ ಕೊಂಕಣಿ ಸಮುದಾಯಗಳ ಜನರು ಮನೆಯಲ್ಲಿ ಬಳಸುವ ಹಳೆಯ ಸಾಧನಗಳ ಪ್ರದರ್ಶನ, 14 ತಂಡಗಳಿಂದ ಕೊಂಕಣಿ ಗೀತೆಗಳ ಗಾಯನ, 9 ತಂಡಗಳಿಂದ ಕೊಂಕಣಿ ನೃತ್ಯ ಪ್ರದರ್ಶನ ನಡೆಯಿತು. ಕೊನೆಯಲ್ಲಿ ಸಾಂಪ್ರದಾಯಿಕ ಭೋಜನದ ವ್ಯವಸ್ಥೆ ಇತ್ತು.