ಇತ್ತೀಚಿನ ಸುದ್ದಿ
ಮಂಗಳೂರು: ಇಂಧನ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆಯ ವಿರುದ್ಧ ಪ್ರತಿಭಟನೆ
05/04/2022, 22:05

ಮಂಗಳೂರು(reporterkarnataka.com): ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಔಷಧಿ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆಯನ್ನು ವಿರೋಧಿಸಿ ಸಿಪಿಎಂ ಕೇಂದ್ರ ಸಮಿತಿ ಕರೆಯ ಮೇರೆಗೆ ನಗರದ ಕ್ಲಾಕ್ ಟವರ್ ಬಳಿಯಲ್ಲಿ ಇಂದು ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಬೆಲೆಯೇರಿಕೆಗೆ ಕಾರಣವಾದ ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಅವರು ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ವಿಪರೀತವಾಗಿ ಕಡಿಮೆಯಾಗಿದ್ದರೂ ಪೆಟ್ರೋಲ್ ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡುವ ಬದಲು ವಿಪರೀತವಾಗಿ ತೆರಿಗೆ ಹೆಚ್ಚಿಸುವ ಮೂಲಕ ಜನಸಾಮಾನ್ಯರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಇದರಿಂದಾಗಿ ಜೀವನಾವಶ್ಯಕ ವಸ್ತುಗಳ ಬೆಲೆಗಳೂ ಕೂಡ ಕೈಗೆಟುಕದ ರೀತಿಯಲ್ಲಿ ಹೆಚ್ಚಾಗಿ ಬದುಕು ಸಾಗಿಸಲಾರದ ಪರಿಸ್ಥಿತಿ ಉದ್ಭವವಾಗಿದೆ. ಅಧಿಕಾರಕ್ಕೇರುವ ಮೊದಲು ಬೆಲೆಯೇರಿಕೆಯ ಬಗ್ಗೆ ಭಾರೀ ಬೊಗಳೆ ಬಿಟ್ಟ ಬಿಜೆಪಿಗರು ಇಂದು ಅಧಿಕಾರದಲ್ಲಿದ್ದು ಬೆಲೆಯೇರಿಕೆಯ ಬಗ್ಗೆ ತುಟಿಪಿಟಿಕ್ ಎನ್ನುತ್ತಿಲ್ಲ. ಬದಲಿಗೆ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಜಾತಿ ಧರ್ಮ ದೇವರುಗಳ ಹೆಸರಿನಲ್ಲಿ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದು ನೀಚ ರಾಜಕೀಯ ಮಾಡುತ್ತಿದೆ ಎಂದು ಹೇಳಿದರು
ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ.ಬಾಲಕೃಷ್ಣ ಶೆಟ್ಟಿ ಅವರು ಮಾತನಾಡಿ, ಉದ್ಯೋಗ ನಷ್ಟ, ನಿರುದ್ಯೋಗ ಸಮಸ್ಯೆಯಿಂದ ಕಂಗಾಲಾದ ದೇಶದ ಜನತೆ ವಿಪರೀತ ತೆರಿಗೆ, ಜಿ ಎಸ್ ಟಿಯಂತಹ ಕ್ರಮಗಳಿಗೆ ಸೋತು ಸುಣ್ಣವಾಗಿದೆ. ಮತ್ತೆ ವಾಹನ ತಿದ್ದುಪಡಿ ಕಾಯಿದೆಯ ಹೆಸರಿನಲ್ಲಿ ರಸ್ತೆಯಲ್ಲಿ ನಿಂತು ಹಾಡುಹಗಲಲ್ಲೇ ದರೋಡೆ ಮಾಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಹೇಳಿದರು
ಪ್ರಾಸ್ತಾವಿಕವಾಗಿ ಮಾತನಾಡಿದ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್, ಕೇಂದ್ರದ ನರೇಂದ್ರ ಮೋದಿ ಸರಕಾರ ಹೆಜ್ಜೆಹೆಜ್ಜೆಗೂ ತನ್ನ ಜನವಿರೋಧಿ ನೀತಿಗಳಿಂದ ಜನರ ಬದುಕಿನಲ್ಲಿ ಚೆಲ್ಲಾಟವಾಡುವ ವಿಚಾರಗಳನ್ನು ವಿವರಿಸಿದರು.
ಪಕ್ಷದ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸದಾಶಿವದಾಸ್ ಅವರು ಮಾತನಾಡಿ, ಕೊರೋನಾ ಸಂಕಷ್ಟದ ಕಾಲದಲ್ಲಿ ದೇಶದ ಜನತೆ ತೀರಾ ಸಂಕಷ್ಟದ ಲ್ಲಿದ್ದರೂ ದೇಶದ ಕಾರ್ಪೋರೇಟ್ ಕಂಪೆನಿಗಳು ವಿಪರೀತವಾಗಿ ಲಾಭ ಗಿಟ್ಟಿಸುವ ಹಿಂದೆ ಕೇಂದ್ರ ಸರಕಾರದ ಹುನ್ನಾರ ಅಡಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ನಾಯಕರಾದ ಪದ್ಮಾವತಿ ಶೆಟ್ಟಿ, ಜಯಂತ ನಾಯಕ್,ಯೋಗೀಶ್ ಜಪ್ಪಿನಮೊಗರು, ಜಯಂತಿ ಶೆಟ್ಟಿ, ಬಿ.ಕೆ.ಇಮ್ತಿಯಾಜ್, ಮನೋಜ್ ವಾಮಂಜೂರು, ಮಹಾಬಲ ದೆಪ್ಪಲಿಮಾರ್,ನೋಣಯ್ಯ ಗೌಡ,ಭಾರತಿ ಬೋಳಾರ, ಸಿಐಟಿಯು ನಾಯಕರಾದ ಸಂತೋಷ್ ಆರ್.ಎಸ್, ಮುಸ್ತಫಾ, ನಾಗೇಶ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.