ಇತ್ತೀಚಿನ ಸುದ್ದಿ
Mangaluru | ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ಖಂಡನೀಯ: ಶಾಸಕ ವೇದವ್ಯಾಸ ಕಾಮತ್
25/03/2025, 20:45

ಮಂಗಳೂರು(reporter Karnataka.com): ಕೇವಲ ಓಲೈಕೆ ರಾಜಕಾರಣಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬರೆದ ಸಂವಿಧಾನವನ್ನೇ ಬದಲಿಸಿ ಧರ್ಮದ ಆಧಾರದಲ್ಲಿ ಮೀಸಲಾತಿ ತರಲು ನಾವು ಸಿದ್ದ ಎಂದಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ರವರ ಹೇಳಿಕೆ ಖಂಡನೀಯವೆಂದು ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಪುರಭವನದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ನಂತರ ಮುಸ್ಲಿಂ ಲೀಗ್ ಕೂಡ ಇಂತಹದೇ ಬೇಡಿಕೆಯನ್ನಿಟ್ಟಿತ್ತು. ಆಗ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸರ್ದಾರ್ ಪಟೇಲರು ಅದನ್ನು ಖಂಡ ತುಂಡವಾಗಿ ವಿರೋಧಿಸಿದ್ದರು. ಅಂತಹ ಮಹಾನ್ ನಾಯಕರ ಮಾತನ್ನೇ ಧಿಕ್ಕರಿಸಿ, ಇದೀಗ ಸಂವಿಧಾನವನ್ನೇ ಬದಲಾಯಿಸಲು ಹೊರಟಿದೆ ಕಾಂಗ್ರೆಸ್. ಮತ್ತೆ ಸಂವಿಧಾನವನ್ನು ಉಳಿಸುವ ಬಗ್ಗೆ ಬೊಗಳೆ ಬಿಡುತ್ತಾರೆ. ಇದು ಅತ್ಯಂತ ಗಂಭೀರವಾದ ವಿಷಯವಾಗಿದ್ದು ಕಾಂಗ್ರೆಸ್ಸಿನ ಸಾವಿರ ಜನ ಬಂದರೂ ಸಂವಿಧಾನದ ಒಂದಿಂಚನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು.
ಜೇಬಿನಲ್ಲಿ ಸಂವಿಧಾನದ ಪುಸ್ತಕ ಇಟ್ಟುಕೊಂಡು ಊರೆಲ್ಲ ಓಡಾಡಿ ನಾಟಕ ಮಾಡಿದ್ದ ಪುಣ್ಯಾತ್ಮ ರಾಹುಲ್ ಗಾಂಧಿ ಈಗ ಕಾಣೆಯಾಗಿದ್ದಾರೆ. ಮಾತೆತ್ತಿದರೆ ಸಂವಿಧಾನ ಎನ್ನುವ ಪ್ರಗತಿಪರರು, ಬುದ್ದಿಜೀವಿಗಳು ಇದೀಗ ಸಂವಿಧಾನಕ್ಕೇ ಸವಾಲೊಡ್ಡುವ ಮಾತನಾಡಿದ್ದರೂ ಬಾಯಿಗೆ ಬೀಗ ಹಾಕಿಕೊಂಡು ಮನೆಯೊಳಗೇ ಕೂತಿದ್ದಾರೆ. ಹಿಂದುಳಿದವರು, ಹಾಗೂ ಪರಿಶಿಷ್ಟ ಬಂಧುಗಳಿಗೆ ಅನ್ಯಾಯ ಮಾಡಲು ನಿಂತಿರುವ ಕಾಂಗ್ರೆಸ್ಸಿನ ಹಿಡನ್ ಅಜೆಂಡಾ ಬಯಲಾಗಿದ್ದು, ಈಗಲಾದರೂ ಕಾಂಗ್ರೆಸ್ಸಿನ ಅಸಲಿ ತನವನ್ನು ಅರಿತು ತಕ್ಕ ಪಾಠ ಕಲಿಸಬೇಕಿದೆ. ಈ ಕೂಡಲೇ ಸಂವಿಧಾನಕ್ಕೆ ಅಪಚಾರ ಮಾಡಿದ ಡಿಕೆಶಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಅವರ ಹೇಳಿಕೆಯನ್ನು ಸಮರ್ಥಿಸಿದ ಕಾಂಗ್ರೆಸ್ಸಿಗರು ಈ ದೇಶದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಸಹಿತ, ಜಿಲ್ಲೆಯ ಶಾಸಕರುಗಳು, ಪಕ್ಷದ ಪ್ರಮುಖರು, ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಸದಸ್ಯರು, ಪ್ರಕೋಷ್ಠಗಳ ಪ್ರಮುಖರ ಸಹಿತ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.