ಇತ್ತೀಚಿನ ಸುದ್ದಿ
ಮಂಗಳೂರು ದಕ್ಷಿಣ: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಯುವ ನ್ಯಾಯವಾದಿ ಪದ್ಮರಾಜ್ ಗೆ ವ್ಯಾಪಕ ಒತ್ತಾಯ
09/04/2023, 23:14
ಮಂಗಳೂರು(reporterkarnataka.com): ಮಂಗಳೂರು ದಕ್ಷಿಣ ಕ್ಷೇತ್ರದ ರಾಜಕೀಯ ರಂಗ ದಿನಕ್ಕೊಂದು ತಿರುವು ಪಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಕಡೆಯಿಂದಲೇ ಅಚ್ಚರಿಯ ಬೆಳವಣಿಗಳು ದಾಖಲಾಗುತ್ತಿವೆ. ಟಿಕೆಟ್ ಸಿಗದಿದ್ದರೆ ಪಕ್ಷೇತರಳಾಗಿ ಸ್ಪರ್ಧಿಸುವ ಬಗ್ಗೆ ಮಾಜಿ ಮೇಯರ್ ಒಬ್ಬರು ನಿನ್ನೆ ಮನದ ಇಂಗಿತ ವ್ಯಕ್ತಪಡಿಸಿದ್ದರು. ಇಂದು ಯುವ ವಕೀಲ, ಸಾಮಾಜಿಕ ಧುರೀಣ ಪದ್ಮರಾಜ್ ಆರ್. ಅವರನ್ನು ಸ್ಪರ್ದಿಸುವಂತೆ ಅವರ ಹಿತೈಷಿಗಳು ಹಾಗೂ ಅಭಿಮಾನಿಗಳಿಂದ ವ್ಯಾಪಕ ಒತ್ತಾಯ ಕೇಳಿ ಬಂದಿದೆ.
ಪದ್ಮರಾಜ್ ಅವರು ಮಂಗಳೂರು ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡುವಂತೆ ಅರ್ಜಿಯೇನೂ ಹಾಕಿಲ್ಲ. ಹಾಗೆಂತ ಅವರು ನಿಷ್ಠಾವಂತ ಕಾಂಗ್ರೆಸಿಗನೇ ಆಗಿದ್ದಾರೆ. ಪದ್ಮರಾಜ್ ಅವರ ಹಿತೈಷಿಗಳಿಗೆ ಅವರು ಸ್ಪರ್ಧಿಸಬೇಕೆಂಬ ಆಸೆ ಇತ್ತು. ರಾಜ್ಯಮಟ್ಟದ ನಾಯಕರು ಕೂಡ ಇದಕ್ಕೆ ಬೆಂಬಲವಾಗಿ ನಿಂತಿದ್ದರು. ಸರ್ವೇ ವರದಿಗಳು ಕೂಡ ಪದ್ಮರಾಜ್ ಅವರ ಪರವಾಗಿಯೇ ಬಂದಿತ್ತು. ಹೆಚ್ಚುಕಡಿಮೆ ಪದ್ಮರಾಜ್ ಅವರ ಹೆಸರು ಮಂಗಳೂರು ದಕ್ಷಿಣಕ್ಕೆ ಫೈನಲ್ ಎಂಬ ಸ್ಥಿತಿಯಲ್ಲಿತ್ತು.
ವಿಶೇಷವೆಂದರೆ, ಪದ್ಮರಾಜ್ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಹೊಂದದಿದ್ದರೂ ಪಕ್ಷ ನಡೆಸಿದ ಸರ್ವೆಯಲ್ಲಿ ಅವರ ಹೆಸರು ಮುಂಚೂಣಿಯಲ್ಲಿತ್ತು. ಬಂಟ್ವಾಳ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಕ್ಷೇತ್ರಗಳ ಪೈಕಿ ಎಲ್ಲೂ ಸ್ಪರ್ಧಿಸಿದರೂ ಅಚ್ಚರಿಯ ಫಲಿತಾಂಶ ದಾಖಲಾಗುತ್ತದೆ ಎಂಬ ಅಂಶವನ್ನು ಸರ್ವೇ ವರದಿಗಳು ಬಹಿರಂಗಪಡಿಸಿತ್ತು. ಆದರೆ ಕೊನೆಯ ಕ್ಷಣದ ರಾಜಕೀಯ ಬೆಳವಣಿಗೆ ಪದ್ಮರಾಜ್ ಹೆಸರು ಹಿಂದಕ್ಕೆ ಸರಿಯುವಂತೆ ಮಾಡಿತು. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಲೇ ಬಂದಿರುವ ಪದ್ಮರಾಜ್ ಅವರ ಹಿತೈಷಿಗಳು ಇಂದು ನಗರದಲ್ಲಿ ಸಭೆ ನಡೆಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಲು ತೀವ್ರ ಒತ್ತಡ ತಂದಿದ್ದಾರೆ. ಸಭೆಯಲ್ಲಿ
ಪದ್ಮರಾಜ್ ಅವರ ಆತ್ಮೀಯರು, ಕ್ರೈಸ್ತ ಬಾಂಧವರು, ಸ್ವಾಭಿಮಾನಿ ಮತದಾರರು, ವಿವಿಧ ಸಂಘಟನೆಗಳ ಪ್ರಮುಖರು, ಉದ್ಯಮಿಗಳು
ಪಾಲ್ಗೊಂಡಿದ್ದರು. ಆದರೆ ಪದ್ಮರಾಜ್ ಅವರಿಂದ ಯಾವ ತರಹದ ಉತ್ತರ ಬರುತ್ತದೆ ಎಂಬ ಕುತೂಹಲ ಎಲ್ಲರಿಗಿದೆ.