ಇತ್ತೀಚಿನ ಸುದ್ದಿ
ಮಂಗಳೂರು: ಮನೆ ನಿವೇಶನ, ವಸತಿ ಯೋಜನೆ ಶೀಘ್ರ ಜಾರಿಗೊಳಿಸಲು ಪಾಲಿಕೆ ಆಯುಕ್ತರಿಗೆ ಸಿಪಿಎಂ ಮನವಿ
14/03/2025, 21:39

ಮಂಗಳೂರು(reporterkarnataka.com): ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್ ಗಳಿಗೆ ಸಂಬಂಧಪಟ್ಟ ವಸತಿ ರಹಿತರು ಮನೆ ನಿವೇಶನ, ವಸತಿಗಾಗಿ ಕಳೆದ ಹನ್ನೆರಡು ವರ್ಷಗಳಿಂದ ನಿರಂತರ ಹೋರಾಟ, ಚಳುವಳಿಗಳನ್ನು ನಡೆಸುತ್ತಿದ್ದರೂ, ಮಂಗಳೂರು ಮಹಾನಗರ ಪಾಲಿಕೆಯ ಆಡಳಿತವು ಇಲ್ಲಿಯವರೆಗೆ ಯಾವುದೇ ರೀತಿಯಲ್ಲಿ ಕ್ರಮವಹಿಸದೆ ಇರುವುದನ್ನು ಗಂಭೀರವಾಗಿ ಪರಿಗಣಿಸಿದ ಸಿಪಿಎಂ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರನ್ನು ಭೇಟಿಯಾಗಿ ಮನವಿ ಅರ್ಪಿಸಿತು.
ನಿವೇಶನರಹಿತರ ಧೀರೋದತ್ತವಾದ ಹೋರಾಟದ ಪರಿಣಾಮವಾಗಿ ಮಂಗಳೂರು ಮಹಾನಗರ ಪಾಲಿಕೆಯು ಕಣ್ಣೂರು, ಇಡ್ಯಾ ಮತ್ತು ಶಕ್ತಿನಗರದಲ್ಲಿ ವಸತಿರಹಿತರಿಗೆ ವಸತಿ ನೀಡುವ ಭರವಸೆ ನೀಡಿತ್ತು. ಸುರತ್ಕಲ್ ಇಡ್ಯಾದ ಸರ್ವೆ ನಂಬ್ರ 16ಪಿ1ರಲ್ಲಿ ಜಿ+3 ಮಾದರಿಯ 600 ಮನೆಗಳ ವಸತಿ ಸಂಕೀರ್ಣ ಮಾಡುವ ಬಗ್ಗೆ ಭರವಸೆ ನೀಡಲಾಗಿತ್ತು. ಅದರಲ್ಲಿ 392 ಜನ ಫಲಾನುಭವಿಗಳು ಆರಂಭಿಕ ಮೊತ್ತವನ್ನು ಪಾವತಿಸಿರುತ್ತಾರೆ. ಆದರೆ ಯೋಜನೆಯು ಅರ್ಧದಲ್ಲೇ ನಿಂತು 6 ವರ್ಷಗಳು ಕಳೆದಿವೆ. ಅದರಲ್ಲೂ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಶೇಕಡಾವಾರು ಮೀಸಲು ಸರಿಯಾಗಿ ನೀಡದೇ ತಾರತಮ್ಯ ಎಸಗಲಾಗಿದೆ. ಶಕ್ತಿನಗರದ ಸರ್ವೆ ನಂಬ್ರ 82ರಲ್ಲಿ 930 ಮನೆಗಳ ಸಂಕೀರ್ಣದ ಬಗ್ಗೆ ಹೋರಾಟಗಾರರಿಗೆ ಮನವರಿಕೆ ಮಾಡಲಾಗಿತ್ತು. ಆ ಯೋಜನೆಯೂ ಕೂಡ ನೆನೆಗುದಿಗೆ ಬಿದ್ದಿದೆ. ಆದರೆ ಇದಿಷ್ಟೇ 8000ಕ್ಕೂ ಮಿಕ್ಕಿದ ನಿವೇಶನರಹಿತರಿಗೆ ಸಾಕಾಗುವುದಿಲ್ಲ. ನಿವೇಶನರಹಿತರ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿಗಳ ಅವ್ಯವಹಾರಗಳು ಎಗ್ಗಿಲ್ಲದೇ ನಡೆದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸುದ್ದಿಗಳು ಕೇಳಿಬರುತ್ತಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇರುವ ನಿವೇಶನರಹಿತರು ಬಾಡಿಗೆ ಕಟ್ಟಲು ಸಾಧ್ಯವಿಲ್ಲದೆ, ಬದುಕಲು ಅಸಾಧ್ಯವಾದ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ನಗರಪಾಲಿಕೆಯು ಮನಗಾಣಬೇಕಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ವಸತಿ ಯೋಜನೆಗಳು ಮಾಧ್ಯಮ, ಜಾಹೀರಾತುಗಳಿಗೆ ಮಾತ್ರ ಸೀಮಿತವಾಗಿದೆ. ಜನಪ್ರತಿನಿಧಿಗಳು ಕೇವಲ ಚುನಾವಣಾ ಸಂದರ್ಭಗಳಲ್ಲಿ ನೀಡುವ ಭರವಸೆಗಳು ಬಡ ನಿವೇಶನರಹಿತರ ಓಟು ಗಿಟ್ಟಿಸುವ ತಂತ್ರವಾಗಿದೆ ಎಂಬುದು ನಿಸ್ಸಂದೇಹ. ಆದುದರಿಂದ ಪಾಲಿಕೆಯೊಳಗಿನ ಎಲ್ಲಾ ನಿವೇಶನ ರಹಿತರಿಗೆ ನಿವೇಶನ ದೊರಕುವ ನಿಟ್ಟಿನಲ್ಲಿ ಮಂಗಳೂರು ನಗರ ಸಮಗ್ರ ಯೋಜನೆ (ಸಿಡಿಪಿ) ಸಿದ್ದಪಡಿಸಿ ರಾಜ್ಯ ಸರಕಾರದಿಂದ ಶೀಘ್ರ ಅನುಮೋದನೆ ಪಡೆದು ನಿವೇಶನ/ವಸತಿ ದೊರಕಿಸಿಕೊಡಬೇಕೆಂದು ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಸಮಿತಿಗಳು ಜಂಟಿಯಾಗಿ ಮಂಗಳೂರು ಮಹಾನಗರ ಪಾಲಿಕೆಯನ್ನು ಒತ್ತಾಯಿಸಿದೆ.
ನಿಯೋಗದಲ್ಲಿ ಸಿಪಿಎಂ ಮಂಗಳೂರು ದಕ್ಷಿಣ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಉತ್ತರ ಸಮಿತಿ ಕಾರ್ಯದರ್ಶಿ ಪ್ರಮೀಳಾ ಶಕ್ತಿನಗರ, ಸಿಪಿಎಂ ಜಿಲ್ಲಾ ನಾಯಕರಾದ ಸುನಿಲ್ ಕುಮಾರ್ ಬಜಾಲ್, ಸಂತೋಷ್ ಬಜಾಲ್, ಸಿಪಿಎಂ ಉಭಯ ಸಮಿತಿಗಳ ಮುಖಂಡರಾದ ಶಶಿಧರ್ ಶಕ್ತಿನಗರ,ಅಸುಂತ ಡಿಸೋಜ, ಭಾರತಿ ಬೋಳಾರ, ಕೃಷ್ಣ ತಣ್ಣೀರುಬಾವಿ,ಚರಣ್ ಶೆಟ್ಟಿಯವರು ಹಾಜರಿದ್ದರು.