ಇತ್ತೀಚಿನ ಸುದ್ದಿ
mangaluru | 40 ಗಂಟೆಗಳ ಕಾಲ ನಿರಂತರ ಗಾಯನ: ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ
20/11/2025, 18:29
ಮಂಗಳೂರು(reporterkarnataka.com): ಎರಡು ದಿನಗಳಿಂದ ನಿರಂತರ 40 ಗಂಟೆಗಳ ಕಾಲ ಕಿಶೋರ್ ಕುಮಾರ್ ಅವರ ಪ್ರಮುಖ ಗೀತೆಗಳನ್ನು ನಿರಂತರ
ಹಾಡುವ ಮೂಲಕ ತಂಡವೊಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದೆ.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಹೋಲ್ಡರ್, ಜೀ ಕನ್ನಡದ ಸ ರೆ ಗ ಮ ಖ್ಯಾತಿಯ ಯಶವಂತ್ ಎಂ.ಜಿ. ಮಾರ್ಗದರ್ಶನದಲ್ಲಿ ಷೋಡಶಿ ಫೌಂಡೇಶನ್ ವತಿಯಿಂದ, ಭಾರತೀಯ ಸಿನೀ ಸಂಗೀತ ಲೋಕದ ಅಮರ ಗಾಯಕ ಕಿಶೋರ್ ಕುಮಾರ್ ಅವರಿಗೆ ಗೌರವವಾಗಿ ಮಂಗಳೂರು ಪುರಭವನದಲ್ಲಿ “ಗಾತಾ ರಹೇ ಮೇರಾ ದಿಲ್ ” ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮ ನಡೆಯಿತು.



![]()



ನವೆಂಬರ್ 18ರಂದು ಬೆಳಗ್ಗೆ 2.00 ಗಂಟೆಗೆ ಡಿವೈಎಸ್ ಪಿ ಮಹೇಶ್ ಕುಮಾರ್ ದೀಪ ಬೆಳಗುವ ಮೂಲಕ ಪ್ರಾರಂಭಗೊಂಡ ಈ ಹಾಡುಗಳ ಸರಣಿ, 19ರಂದು ಸಂಜೆ 6.10 ಗಂಟೆಗೆ ಸಮಾಪ್ತಿಗೊಂಡಿತು. ಮಹಾ ಸಂಗೀತ ಸಂಭ್ರಮದಲ್ಲಿ 130ಕ್ಕೂ ಹೆಚ್ಚು ಹಾಡುಗಾರರು ಪಾಲ್ಗೊಂಡಿದ್ದರು.
ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಕಿಶೋರ್ ಕುಮಾರ್ ಅವರ ಪ್ರಮುಖ ಗೀತೆಗಳೊಂದಿಗೆ 40 ಗಂಟೆಗಳ ನಿರಂತರ ಗಾಯನ ಪ್ರದರ್ಶನ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕದ ಪ್ರಖ್ಯಾತ ಹಾಗೂ ಗೌರವಾನ್ವಿತ ಗಾಯಕರಿಂದ ನಡೆಸಲಾಗಿದ್ದು, ಸಂಗೀತಾಭಿಮಾನಿಗಳಿಗೆ ಸಾಂಸ್ಕೃತಿಕ ಹಬ್ಬದಂತೆಯೇ ಸಂಭ್ರಮ ನೀಡಿತು.

ದಾಖಲೆ ಪೂರೈಸಿದ ಷೋಡಶಿ ಫೌಂಡೇಶನ್ ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಮನೀಷ್ ಬಿಷ್ಣೋಯ್, ಶಾಸಕ ವೇದವ್ಯಾಸ ಕಾಮತ್ ಪ್ರಮಾಣ ಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಈ ರೀತಿಯ ಪ್ರಯೋಗಗಳು ನಡೆಯುತ್ತಲೇ ಇರುತ್ತದೆ. ದೇವಸ್ಥಾನಗಳಲ್ಲಿ ನಿರಂತರ ಭಜನೆ ಕೂಡಾ ನಡೆಯುತ್ತದೆ. ಆದರೆ ಆಧ್ಯಾತ್ಮಿಕ ಕಾರಣಕ್ಕಾಗಿ ಅದನ್ನು ದಾಖಲೆಗೆ ಬಳಸುವುದಿಲ್ಲ. ಇಂತಹ ಸಾಧನೆಗಳು ಮತ್ತಷ್ಟು ನಡೆಯಬೇಕು. ಇಂತಹ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಶಿವರಾಮ್ ಕೆ.ಭಂಡಾರಿ, ಅತ್ಯಂತ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾರೆ. ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು. ತಮ್ಮ ಕಸುಬನ್ನು ಪರಿಶ್ರಮ ಮತ್ತು ಪ್ರೀತಿಯಿಂದ ಕೆಲಸ ಮಾಡಿದರೆ ಉನ್ನತ ಸ್ಥಿತಿಗೆ ಏರಬಹುದು ಎಂದರು.
ಸಂಗೀತ ನಿರ್ದೇಶಕ ಮಣಿಕಾಂತ ಕದ್ರಿ ಮಾತನಾಡಿ, ಈ ರೀತಿಯ ಕಾರ್ಯಕ್ರಮ ಮಾಡಿರುವುದಕ್ಕೆ ಹೆಮ್ಮೆ ಇದೆ. ಇನ್ನಷ್ಟು ಕಾರ್ಯಕ್ರಮಗಳು ನಡೆಯಲಿದೆ, ಎಸ್ಪಿಬಿ, ರಾಜ್‌ಕುಮಾರ್ ಅವರ ಹಾಡುಗಳೂ ಇರಲಿ ಎಂದರು.
ಭರತ್ ಕಾಮತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ, ಯಶ್ವಂತ್ ಎಂ.ಜಿ, ಮನೀಷ್ ವಿಷ್ಣೋಯ್, ಲಂಚುಲಾಲ್, ಮಣಿಕಾಂತ ಕದ್ರಿ, ರಮೇಶ್ ಚಂದ್ರ,
ಶ್ರೀಕಾಂತ ಕಾಮತ್, ವೇಣುಗೋಪಾಲ್ ಪುತ್ತೂರು, ರಂಜನ್ ದಾಸ್ , ವಿಶ್ವಾಸ್ ಗುರುಪುರ, ಸತೀಶ್ ಇರಾ, ಡಾ. ಶಿವರಾಮ್ ಭಂಡಾರಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಡಾ. ಮನೀಷ್ ವಿಷ್ಣೋಯ್, ಡಾ. ಶಿವರಾಮ್ ಕೆ. ಭಂಡಾರಿ,ರಮೇಶ್ ಚಂದ್ರ, ರಮೇಶ್. ಕೆ . ಪಾಟೀಲ್, ಅನಿಲ್ ಶೆಟ್ಟಿ ಸೂರಿಂಜೆ,ಮನೋಹರ್ ಶೆಟ್ಟಿ,
ಗೋಪಾಲಕೃಷ್ಣ,ಅಮಿತ್ ಕಾರ್ವಿ, ಭರತ್ ಕಾಮತ್, ಮಣಿಕಾಂತ ಕದ್ರಿ ಮತ್ತಿತರರು ಉಪಸ್ಥಿತರಿದ್ದರು.













