ಇತ್ತೀಚಿನ ಸುದ್ದಿ
Mangaluru | ಭಾರತದ ವೈವಿಧ್ಯತೆಯ ಸಂಭ್ರಮ: ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಐಕೆಎಸ್ ಆಚರಣೆ
28/02/2026, 10:10
ಚಿತ್ರ :ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಭಾರತದ ಸಮೃದ್ಧ ಪರಂಪರೆ, ಆಚಾರ-ವಿಚಾರ ಮತ್ತು ಸಂಸ್ಕೃತಿಯ ವೈವಿಧ್ಯತೆಯನ್ನು ಆಚರಿಸುವ ನಿಟ್ಟಿನಲ್ಲಿ ನಗರದ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ( ಸ್ವಾಯತ್ತ) ಆಂತರಿಕ ಗುಣಮಟ್ಟ ಭರವಸೆ ಘಟಕ (IQAC) ವತಿಯಿಂದ ಇಂಡಿಯನ್ ನಾಲೆಜ್ ಸಿಸ್ಟಮ್ಸ್ (Indian Knowledge Systems – IKS) ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇತಿಹಾಸವನ್ನು ಧರ್ಮದ ದೃಷ್ಟಿಕೋಣದಿಂದ ನೋಡದೇ ಸಮಗ್ರವಾಗಿ ಅರ್ಥಮಾಡಿಕೊಳ್ಳಬೇಕು. ಟಿಪ್ಪು ಸುಲ್ತಾನ್ ಮತ್ತು ಶಿವಾಜಿ ಕುರಿತ ಚರ್ಚೆಗಳಿಗಿಂತ ದೇಶದ ಏಕತೆ ಹಾಗೂ ಇತಿಹಾಸದ ಸಂಪೂರ್ಣತೆಯನ್ನು ಅರಿಯುವುದು ಮುಖ್ಯ. ದೇಶದ ವೈವಿಧ್ಯತೆಯನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗದೇ, ಮೂಲ ಇತಿಹಾಸ ಮತ್ತು ಜ್ಞಾನವನ್ನು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು. ಭಾರತೀಯ ಜ್ಞಾನ ಪರಂಪರೆಯನ್ನು ಮುಂದುವರಿಸಿ ಸಂರಕ್ಷಿಸುವ ಜವಾಬ್ದಾರಿ ಯುವಜನರ ಮೇಲಿದೆ ಎಂದು ನುಡಿದರು.

ನಿಟ್ಟೆ ವಿಶ್ವವಿದ್ಯಾಲಯದ ಸಂಶೋಧನ ಮತ್ತು ಅಭಿವೃದ್ಧಿ ಕೇಂದ್ರದ ನಿರ್ದೇಶಕರಾದ ಡಾ. ಇಂದ್ರಾಣಿ ಕಾರುಣಸಾಗರ್ ಅವರು ನಮ್ಮ ದೇಶದ ಮಹತ್ವವನ್ನು ವಿದೇಶಿಗಳು ಗುರುತಿಸಿದಾಗ ಮಾತ್ರ ಅರಿಯುವ ಸ್ಥಿತಿಯನ್ನು ಬಿಟ್ಟು, ಭಾರತದ ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಮೇಲೆ ಗೌರವ ಮತ್ತು ನಂಬಿಕೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.








ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ದುರುಪಯೋಗದ ಬಗ್ಗೆ ಎಚ್ಚರಿಕೆ ನೀಡಿದ ಅವರು, ಮೊಬೈಲ್‌ಗಳಿಗೆ ದಾಸರಾಗಬಾರದು. ಅವನ್ನು ಜ್ಞಾನಾರ್ಜನೆಗೆ ಉಪಕರಣಗಳಾಗಿ ಜಾಣ್ಮೆಯಿಂದ ಬಳಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಡಾ. ಗಣಪತಿ ಭಟ್ , ಜೆದ್ದು ಆಯುರ್ವೇದ ವಿಶೇಷ ಆಸ್ಪತ್ರೆ, ಇಂಡಿಯನ್ ನಾಲೆಜ್ ಸಿಸ್ಟಮ್ಸ್ ಗೆ ಸಾವಿರಾರು ವರ್ಷಗಳಿಂದ ಜೀವಂತವಾಗಿರುವ ಸಮಗ್ರ ಜ್ಞಾನ ವ್ಯವಸ್ಥೆಯಾಗಿದೆ. ಆಧುನಿಕ ವಿಜ್ಞಾನವನ್ನು ಒಗ್ಗೂಡಿಸಿ ಕಾಲಕ್ಕೆ ತಕ್ಕಂತೆ ಬದಲಾಗುವುದು ಅಗತ್ಯ ಇಲ್ಲವಾದರೆ ನಾಶವಾಗುತ್ತೇವೆ ಎಂದು ಹೇಳಿದರು.
ಅಧ್ಯಕ್ಷೀಯ ಮಾತನಾಡಿದ ಪ್ರಾಂಶುಪಾಲರು ಸಿಸ್ಟರ್ ಡಾ.ವೆನಿಸ್ಸ ಎ.ಸಿ, ಶಿಕ್ಷಣವೆಂದರೆ ಕೇವಲ ಮಾಹಿತಿಯ ಸಂಗ್ರಹವಲ್ಲ,ಅದು ವ್ಯಕ್ತಿಯ ಪರಿವರ್ತನೆ. ಭಾರತೀಯ ಜ್ಞಾನ ಪರಂಪರೆಯ ಪ್ರಾಮುಖ್ಯತೆ ಭೂತಕಾಲವನ್ನು ಸ್ಮರಿಸುವುದಲ್ಲ, ಭವಿಷ್ಯವನ್ನು ಸುರಕ್ಷಿತಗೊಳಿಸುವುದಲ್ಲಿದೆ ಎಂದು ಹೇಳಿದರು.
ನಿಜವಾದ ಪ್ರಗತಿ ಅಂತರಂಗದ ಜಾಗೃತಿಯೊಂದಿಗೆ ಪೂರ್ಣಗೊಳ್ಳುತ್ತದೆ ಎಂಬ ಸಂದೇಶವನ್ನು ನೀಡಿದರು.


































ಉಪ ಪ್ರಾಂಶುಪಾಲರು ಸಿಸ್ಟರ್ ಡಾ. ರೂಪಾ ರೋಡ್ರಿಗಸ್, ಐಕ್ಯೂಎಸಿ ಸಂಯೋಜಕರಾದ ಡಾ.ಸಬೀನಾ ಡಿಸೋಜ , ಕಾರ್ಯಕ್ರಮದ ಆಯೋಜಕಿ ಡಾ.ವಿಶಾಲಬಿ.ಕೆ.,ಸ್ನಾತಕೋತ್ತರ ಪದವಿ ಸಂಯೋಜಕರಾದ ಸಿಸ್ಟರ್ ಡಾ ವಿನೋರಾ ಎ.ಸಿ. ಮತ್ತಿತರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ವಿವಿಧ ರಾಜ್ಯಗಳ ಸಾಂಸ್ಕೃತಿಕ ವೈಭವವನ್ನು ಜಾನಪದ ಹಾಡು, ಭರತನಾಟ್ಯ ಹಾಗೂ ಜಾನಪದ ನೃತ್ಯಗಳ ಮೂಲಕ ಪ್ರದರ್ಶಿಸಿದರು.
ಭಾರತದ ವೈವಿಧ್ಯಮಯ ಪರಂಪರೆ, ಸಂಗೀತ ಮತ್ತು ನೃತ್ಯಶೈಲಿಗಳ ಸೊಗಡು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದಿತು.
ಡಾ.ಹಿತಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ” ಜ್ಞಾನದ ಬೇರುಗಳು: ಭಾರತದ ಜೀವಂತ ಪರಂಪರೆ” ಎಂಬ ಪ್ರದರ್ಶನವನ್ನು ಏರ್ಪಡಿಸಲಾಯಿತು.










