ಇತ್ತೀಚಿನ ಸುದ್ದಿ
ಮಂಗಳೂರು: 5 ದಿನಗಳ ಕಾಲ ನಡೆದ ‘ನವಲೇಖನ ಶಿಬಿರ’ ಸಮಾರೋಪ
19/05/2024, 00:19

ಮಂಗಳೂರು(reporterkarnataka.com): ಭಾರತದಲ್ಲಿ ಹಿಂದಿ ರಾಜ್ಯಭಾಷಾ ಸ್ಥಾನ ಪಡೆದಿದೆ. ಅತಿ ಹೆಚ್ಚಿನ ಜನರು ಹಿಂದಿ ಭಾಷೆ ಮಾತನಾಡಬಲ್ಲವರಾಗಿದ್ದಾರೆ. ಹಾಗಾಗಿ ಹಿಂದಿ ಭಾಷೆ ಮಾತನಾಡುವುದಕ್ಕೆ ಯಾವುದೇ ರೀತಿಯ ಸಂಕೋಚ ಇರಕೂಡದು ಎಂದು ಡಾ. ವಿದ್ಯಾಕುಮಾರ್ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಕೇಂದ್ರೀಯ ಹಿಂದಿ ವಿದೇಶಾಲಯ, ಶಿಕ್ಷಣ ಸಚಿವಾಲಯ(ಉನ್ನತ ಶಿಕ್ಷಣ ವಿಭಾಗ, ಭಾರತ ಸರ್ಕಾರ), ಮಂಗಳೂರು ವಿಶ್ವವಿದ್ಯಾನಿಲಯ, ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟ ಮತ್ತು ಆಂತರಿಕ ಗುಣಮಟ್ಟ ಖಾತರಿಕೋಶದ ಸಹಭಾಗಿತ್ವದಲ್ಲಿ ಐದು ದಿನಗಳ ಕಾಲ ನಡೆದ “ನವಲೇಖನ ಶಿಬಿರ” ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕೇಂದ್ರೀಯ ಹಿಂದಿ ವಿದೇಶಾಲಯದ ಅಧಿಕಾರಿ ಪ್ರದೀಪ್ ಕುಮಾರ್ ಮಾತನಾಡಿ, ವಿದೇಶಾಲಯದ ವತಿಯಿಂದ ಮಂಗಳೂರಿನಲ್ಲಿ ಮಾಡುತ್ತಿರುವ ಪ್ರಥಮ ಕಾರ್ಯಕ್ರಮ ಯಶಸ್ವಿಯಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಕೇಂದ್ರೀಯ ವಿದೇಶಾಲಯ ಮಂಗಳೂರು ವಿಶ್ವವಿದ್ಯಾನಿಲಯದ ಜೊತೆ ಸೇರಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕಾಗಿ ಪ್ರಯತ್ನಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನುಸೂಯ ರೈ ಮಾತನಾಡಿ, ಹಲವು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಇಲ್ಲಿ ಕಲಿತಂತಹ ವಿಷಯವನ್ನು ಮುಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸದುಪಯೋಗಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪ್ರೊ. ಈಶ್ವರ್ ಪವಾರ್, ಕಾರ್ಯಕ್ರಮ ಸಂಯೋಜಕ ಡಾ. ನಾಗರತ್ನ ಎನ್. ರಾವ್, ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಸುಮಾ ಟಿ.ಆರ್., ನಿವೃತ್ತ ಉಪನ್ಯಾಸಕಿ ಡಾ. ಸುಧಾ ಭಟ್, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.