ಇತ್ತೀಚಿನ ಸುದ್ದಿ
ಮಂಗಳೂರಿನಲ್ಲಿ ವಿಶಿಷ್ಟ ಚೇತನ ಮಕ್ಕಳಿಗಾಗಿ ವಿಶೇಷ ಪಾರ್ಕ್ ನಿರ್ಮಾಣ: ಶಾಸಕ ವೇದವ್ಯಾಸ ಕಾಮತ್
13/02/2023, 20:49
ಮಂಗಳೂರು(reporterkarnataka.com): ನಗರದ ಕದ್ರಿ ಪಾರ್ಕ್ ಗಂಗನಪಳ್ಳ ಕೆರೆಯ ಸಮೀಪವೇ ವಿಶೇಷ ಚೇತನ ಮಕ್ಕಳಿಗಾಗಿ ಇನ್ನೊಂದು ಪಾರ್ಕ್ ಹಾಗೂ ಆಟದ ಮೈದಾನ ನಿರ್ಮಾಣವಾಗಲಿದೆ ಎಂದು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.
ಮಂಗಳೂರಿನಲ್ಲಿ ಎರಡು ವಿಶೇಷ ಚೇತನ ಮಕ್ಕಳ ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು, ಚೇತನಾ ಶಾಲೆಯ ವಿನೋದ್ ಶೆಣೈ ಹಾಗೂ ಸಾನ್ನಿಧ್ಯ ವಿಶೇಷ ಮಕ್ಕಳ ಶಾಲೆಯ ವಸಂತ್ ಶೆಟ್ಟಿ ಅವರು ಈ ಮಕ್ಕಳ ಆಟ-ಪಾಠ ಮತ್ತು ಬೌದ್ಧಿಕ ವಿಕಾಸಕ್ಕಾಗಿ ಪ್ರತ್ಯೇಕ ಪಾರ್ಕ್ ಮತ್ತು ಆಟದ ಮೈದಾನ ನಿರ್ಮಿಸಿಕೊಡುವಂತೆ ಶಾಸಕ ಕಾಮತ್ ಅವರಿಗೆ ಮನವಿ ಸಲ್ಲಿಸಿದ್ದರು.
ಮನವಿಯನ್ನು ಪರಿಗಣಿಸಿದ ಶಾಸಕರು ಮಂಗಳೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ಅಧ್ಯಕ್ಷ ರವಿಶಂಕರ ಮಿಜಾರು ಅವರ ಜತೆ ಚರ್ಚಿಸಿ, ಮಂಗಳೂರು ಮಹಾನಗರ ಪಾಲಿಕೆಯಲ್ಲೂ ಪ್ರಸ್ತಾವ ಮಂಡಿಸಿ ಅನುಮೋದನೆ ದೊರಕವಂತೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕದ್ರಿ ಪಾರ್ಕಿನ ಒಳಗಡೆ 50 ಸೆಂಟ್ಸ್ ಜಾಗದಲ್ಲಿ ವಿಶೇಷ ಚೇತನ ಮಕ್ಕಳ ಪಾರ್ಕ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಶೀಘ್ರವೇ ಇದು ಕಾರ್ಯಗತಗೊಳ್ಳಲಿದ್ದು, ಸ್ಮಾರ್ಟ್ ಸಿಟಿ ಮಂಗಳೂರಿನಲ್ಲಿ ಹೊಸದೊಂದು ಸೌಲಭ್ಯ ವಿಶಿಷ್ಟ ಚೇತನ ಮಕ್ಕಳು ಮತ್ತು ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ. ಪಾರ್ಕ್ ನಿರ್ಮಾಣ ಕುರಿತು ವಿಶೇಷ ಮಕ್ಕಳ ಪೋಷಕರು, ಶಿಕ್ಷಕರು ಹಾಗೂ ಸಂಘ ಸಂಸ್ಥೆಗಳು ಮೆಚ್ಚುಗೆ ವ್ಯಕ್ತಪಡಿಸಿದೆ.