ಇತ್ತೀಚಿನ ಸುದ್ದಿ
ಮಂಗಳೂರಿನಲ್ಲಿ ದಿ ಸ್ಲೀಪ್ ಕಂಪನಿಯ ಮೊದಲ ಮಳಿಗೆಗೆ ಚಾಲನೆ: ದೇಶದಲ್ಲಿ ಇನ್ನೂ 150 ಹೊಸ ಮಳಿಗೆ ತೆರೆಯುವ ಗುರಿ
14/05/2024, 17:51
ಮಂಗಳೂರು(reporterkarnataka.com): ಭಾರತದ ಪ್ರಮುಖ ಕಂಫರ್ಟ್- ಟೆಕ್ ಬ್ರಾಂಡ್ ದಿ ಸ್ಲೀಪ್ ಕಂಪನಿ(ಟಿಎಸ್ ಸಿ) ಮಂಗಳೂರಿನಲ್ಲಿ ತನ್ನ ಮೊದಲ ಮಳಿಗೆಯನ್ನು ಆರಂಭಿಸಿದೆ. ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ಸಿಟಿ ಸೆಂಟರ್ ಮಾಲ್ ನ 3ನೇ ಮಹಡಿಯಲ್ಲಿ ಸ್ಲೀಪ್ ಕಂಪನಿ ಹೊಸ ಮಳಿಗೆಗೆ ಚಾಲನೆ ನೀಡಿದೆ.
ಮಳಿಗೆ ಉದ್ಘಾಟಿಸಿದ ಬಳಿಕ ಕಂಪನಿಯ ಸಿಒಒ ಕರಣ್ ಸಿಂಗ್ಲಾ ಈ ವಿಷಯವನ್ನು ಮಾಧ್ಯಮಕ್ಕೆ ತಿಳಿಸಿದರು.
ಹೊಸ ಮಳಿಗೆಯು ಕರ್ನಾಟಕದಲ್ಲಿ ಕಂಪನಿಯ 15ನೇ ಮಳಿಗೆಯಾಗಿದೆ. ಕಂಪನಿ ಈಗಾಗಲೇ 14 ಮಳಿಗೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಮಂಗಳೂರಿನ ಮಳಿಗೆಯಲ್ಲಿ ಗ್ರಾಹಕರ ವಿವಿಧ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಪೇಟೆಂಟ್ ಸ್ಮಾರ್ಟ್ ಗ್ರೀಡ್ ಹಾಸಿಗೆಗಳು, ಸ್ಮಾರ್ಟ್ ರಿಕ್ಲೈನರ್ ಹಾಸಿಗೆಗಳು, ದಿಂಬುಗಳು, ಕಚೇರಿಯಲ್ಲಿ ಬಳಸಬಹುದಾದ ಕುರ್ಚಿಗಳು ಮತ್ತು ರಿಕ್ಲೈನರ್ ಸೋಫಾಗಳು ಸೇರಿದಂತೆ ವಿವಿಧ ಉತ್ಪನ್ನಗಳಿರಲಿವೆ. ಮಂಗಳೂರು ಮತ್ತು ಸುತ್ತಮುತ್ತಲ ಗ್ರಾಹಕರು ನಿಶ್ಚಿಂತೆಯಿಂದ ಗುಣಮಟ್ಟದ ನಿದ್ರೆ ಮಾಡುವಂತಾಗಬೇಕೆಂಬ ಆಶಯವನ್ನು ಕಂಪನಿ ಹೊಂದಿದೆ ಎಂದು ಅವರು ವಿವರಿಸಿದರು.
ಪ್ರತಿ ರಾತ್ರಿ 7 ಗಂಟೆಗಳ ಆರಾಮದಾಯಕ ನಿದ್ರೆ ಅಗತ್ಯ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಸರಕಾರ ನಡೆಸುತ್ತಿರುವ ಟೆಲಿ ಮೆಂಟಲ್ ಆರೋಗ್ಯ ಸಹಾಯವಾಣಿಗೆ ಬಂದ ಹೆಚ್ಚಿನ ಕರೆಗಳು ನಿದ್ರಾಹೀನತೆಗೆ ಸಂಬಂಧಿಸಿದ್ದವು. ಗುಣಮಟ್ಟದ ನಿದ್ರೆಗೆ ಅಗತ್ಯವಿರುವ ಉತ್ಪನ್ನಗಳು ಮತ್ತು ಆರಾಮದಾಯಕ ಆಸನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿ ದಿ ಸ್ಲೀಪ್ ಕಂಪನಿ ರಾಜ್ಯದಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ವಿಸ್ತರಿಸುತ್ತಿದೆ ಎಂದು ಸಿಂಗ್ಲಾ ನುಡಿದರು.
ಹೊಸ ಮಳಿಗೆ ಉದ್ಘಾಟನೆ ಕುರಿತು ಮಾತನಾಡಿದ ದಿ ಸ್ಲೀಪ್ ಕಂಪೆನಿಯ ಸಹ ಸಂಸ್ಥಾಪಕಿ ಪ್ರಿಯಾಂಕಾ ಸಾಲೋಟ್,
ಮಂಗಳೂರಿನಲ್ಲಿ ಸ್ಲೀಪ್ ಕಂಪನಿ ಆರಂಭಿಸಿರುವ ಮೊದಲ ಮಳಿಗೆಯು ರಾಜ್ಯದಲ್ಲಿ ನಮ್ಮ ವ್ಯಾಪ್ತಿಯನ್ನು ವಿಸ್ತರಿಸುವ ಮತ್ತು ಜನರ ಜೀವನ ಮಟ್ಟವನ್ನು ಹೆಚ್ಚಿಸುವ ನಮ್ಮ ಬದ್ಧತೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಉತ್ತಮ ನಿದ್ರೆಯು ವ್ಯಕ್ತಿಯ ಒಟ್ಟಾರೆ ಯೋಗಕ್ಷೇಮಕ್ಕೆ ಮೂಲಭೂತ ಅಗತ್ಯವಾಗಿದೆ. ನಮ್ಮ ವೈಜ್ಞಾನಿಕ ನೆಲೆಯ ಹಾಸಿಗೆಗಳು ಮತ್ತು ಆಸನಗಳು ಗ್ರಾಹಕರಿಗೆ ಉತ್ತಮ ಸೌಕರ್ಯ ವನ್ನು ಒದಗಿಸಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸ್ಲೀಪ್ ಕಂಪನಿಯು ಗಮನಾರ್ಹ ಬೆಳವಣಿಗೆಯನ್ನು ದಾಖಲಿಸುತ್ತಿದ್ದು, ಕೇವಲ 4 ವರ್ಷಗಳಲ್ಲಿ ರಾಷ್ಟ್ರದಾದ್ಯಂತ ತನ್ನ ಅಸ್ತಿತ್ವವನ್ನು ವಿಸ್ತರಿಸಿದೆ. 2023ರ ಸೆಪ್ಟೆಂಬರ್ ಗೆ ಅನ್ವಯ ವಾಗುವಂತೆ ಕಂಪನಿ 350 ಕೋಟಿ ರೂ.ಗಳ ವಹಿವಾಟು ನಡೆಸಿದ್ದು, ಕಳೆದ 2 ವರ್ಷಗಳಲ್ಲಿ ವಹಿವಾಟು ಪ್ರಮಾಣ ಆರು ಪಟ್ಟು ಹೆಚ್ಚಿದೆ. 2021ರ ನವೆಂಬರ್ ನಲ್ಲಿ ಕಂಪನಿಯು ವಹಿವಾಟು 60 ಕೋಟಿ ರೂಗಳಾಗಿದ್ದವು. ತನ್ನ ವಿಸ್ತರಣಾ ಕಾರ್ಯ ತಂತ್ರವನ್ನು ಚುರುಕುಗೊಳಿಸಿರುವ ದಿ ಸ್ಲೀಪ್ ಕಂಪನಿಯು ಈ ವರ್ಷದ ಅಂತ್ಯ ದ ವೇಳೆಗೆ ಇನ್ನೂ 150 ಮಳಿಗೆಗಳನ್ನು ತೆರೆಯುವ ಗುರಿಯನ್ನು ಹೊಂದಿದೆ. ಇತ್ತೀಚೆಗೆ ಕಂಪನಿ ಹೈದರಾಬಾದ್ ನಲ್ಲಿ ತನ್ನ ದೇಶದ 75ನೇ ಮಳಿಗೆಯನ್ನು ಆರಂಭಿಸಿತ್ತು. ಕಂಫರ್ಟ್ – ಟೆಕ್ ವಲಯದಲ್ಲಿ ಆದ್ಯ ಪ್ರವರ್ತಕ ಕಂಪನಿಯಾಗಿ ಗುರುತಿಸಿಕೊಂಡಿರುವ ದಿ ಸ್ಲೀಪ್ ಕಂಪನಿ ಕಳೆದ 18 ತಿಂಗಳಲ್ಲಿ ಮಳಿಗೆಗಳ ಆರಂಭದ ದೃಷ್ಟಿಯಿಂದ ದೇಶದ ಅತಿ ವೇಗವಾಗಿ ಬೆಳೆಯುತ್ತಿರುವ ಓಮ್ನಿ ಚಾನಲ್ ಬ್ರಾಂಡ್ ಗಳಲ್ಲಿ ಒಂದೆನಿಸಿಕೊಂಡಿದೆ ಎಂದು ಅವರು ಹೇಳಿದರು.
ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಅಮೃತ್ ಜೋಗಿ ಮುಂತಾದವರು ಉಪಸ್ಥಿತರಿದ್ದರು.