8:45 PM Saturday19 - July 2025
ಬ್ರೇಕಿಂಗ್ ನ್ಯೂಸ್
ಭಾರೀ ಮಳೆ ಮಧ್ಯೆಯೂ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು: ಕಾರು – ಜೀಪ್ ಮುಖಾಮುಖಿ… ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಜಸ್ಟಿಸ್ ವಿಭು ಬಖ್ರು ಅಧಿಕಾರ ಸ್ವೀಕಾರ: ರಾಜ್ಯಪಾಲ… Kodagu |ಪೊನ್ನಂಪೇಟೆ: ವ್ಯಾಘ್ರನ ಸೆರೆಗೆ 75 ಮಂದಿ ಅರಣ್ಯ ಸಿಬ್ಬಂದಿಗಳ ಕೂಂಬಿಂಗ್ ಕಾರ್ಯಾಚರಣೆ… ಮಂಗಳೂರು – ಬೆಂಗಳೂರು 4 ತಾಸಿನ ಆಂಬುಲೆನ್ಸ್ ಪ್ರಯಾಣ!: ಹೃದಯ ಕಾಯಿಲೆಯ 14… ವಿದ್ಯುತ್ ಶಾಕ್: ಲೈನ್ ಮ್ಯಾನ್ ದಾರುಣ ಸಾವು; ಒಂದೂವರೆ ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ… ರಾಹುಲ್ ಗಾಂಧಿಯ ಗೊತ್ತಿಲ್ಲದ ಸಾಧನೆಗೆ ಗೊತ್ತಿಲ್ಲದ ಪ್ರಶಸ್ತಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ಬಿರುಸುಗೊಂಡ ಕಾಡಾನೆಗಳ ಅರಣ್ಯಕ್ಕೆ ಅಟ್ಟುವ ಕಾರ್ಯ: ನಾಡಿನಿಂದ ಕಾಡಿನತ್ತ ಆನೆಗಳ ಮತ್ತೊಂದು ಹಿಂಡು ಭಾರೀ ಮಳೆ: ಕೊಡಗು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ: ಶಾಲೆ- ಕಾಲೇಜುಗಳಿಗೆ ನಾಳೆಯೂ… ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಅತ್ಯಂತ… ಭಾರೀ ಮಳೆ: ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜಿಗೆ…

ಇತ್ತೀಚಿನ ಸುದ್ದಿ

ಮಂಗಳೂರು- ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಭರ್ಜರಿ ಗಳಿಕೆ: 1 ತಿಂಗಳಲ್ಲಿ‌ 5 ಕೋಟಿಗೂ ಅಧಿಕ ಆದಾಯ

19/07/2025, 19:28

ಜಯಾನಂದ ಪೆರಾಜೆ ಬಂಟ್ವಾಳ

info.reporterkarnataka@gmail.com

ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯ ತನಕ ವಿಸ್ತರಣೆಗೊಂಡ ಬಳಿಕ ಭರ್ಜರಿ ಆದಾಯ ಗಳಿಸಿದೆ.
ಇತ್ತೀಚೆಗೆ ಪುತ್ತೂರು-ಸುಬ್ರಹ್ಮಣ್ಯ ರೈಲು ಬಳಕೆದಾರರ ಸಮಿತಿಯು ಮಾಹಿತಿಯ ಹಕ್ಕು ಕಾಯ್ದೆಯಡಿ ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗದಿಂದ ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯಕ್ಕೆ ವಿಸ್ತರಣೆಗೊಳ್ಳುವ ಮೊದಲು ಹಾಗೂ ನಂತರ ಬಂಟ್ವಾಳದಿಂದ-ಸುಬ್ರಹ್ಮಣ್ಯ ತನಕ ಇರುವ ಎಲ್ಲಾ ರೈಲು ನಿಲ್ದಾಣಗಳು ಗಳಿಸಿದ ಆದಾಯದ ಬಗ್ಗೆ ಮಾಹಿತಿಯನ್ನು ಕೇಳಿತ್ತು. ಇದಕ್ಕೆ ಅನುಸಾರವಾಗಿ ಮೈಸೂರು ವಿಭಾಗದ ಅಧಿಕಾರಿಗಳು ಆದಾಯದ ಮಾಹಿತಿಯನ್ನು ನೀಡಿದ್ದಾರೆ.


ಮೂರು ತಿಂಗಳಿನಲ್ಲಿ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದ ಆದಾಯದಲ್ಲಿ 12 ಲಕ್ಷ ರೂಪಾಯಿ ಏರಿಕೆಯಾಗಿದೆ. ಈ ವರ್ಷದ ಜನವರಿಯಿಂದ ಮಾರ್ಚ್ ತನಕ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ನೈರುತ್ಯ ರೈಲ್ವೆ ವಲಯವು 2,90,40,404 ರೂಪಾಯಿ ಆದಾಯವನ್ನು ಗಳಿಸಿತ್ತು. ಅದೇ ಏಪ್ರಿಲ್‍ನಿಂದ ಜೂನ್ ತನಕ ಬರೋಬ್ಬರಿ 3,02,45,904 ರೂಪಾಯಿ ಗಳಿಸಿದೆ. ಇದರಲ್ಲಿ ಎಕ್ಸ್‌ಪ್ರೆಸ್ ರೈಲುಗಳ ಆದಾಯ, ಪ್ಯಾಸೆಂಜರ್ ರೈಲುಗಳ ಆದಾಯ, ಪ್ಲಾಟ್‌ಫಾರ್ಮ್ ಟಿಕೇಟು, ಕ್ಯಾಂಟೀನ್, ಜಾಹೀರಾತು ಎಲ್ಲವೂ ಸೇರಿದೆ. ಆದರೂ ಮೂರು ತಿಂಗಳಿನಲ್ಲಿ ಸುಮಾರು 12 ಲಕ್ಷ ರೂಪಾಯಿ ಏರಿಕೆಯಾಗಿದೆ.
*ಪ್ರಕೃತಿಯ ಮಧ್ಯದಲ್ಲಿರುವ ರೈಲು ನಿಲ್ದಾಣದಲ್ಲಿ 31 ಸಾವಿರ ರೂಪಾಯಿ ಗಳಿಸಿದ ರೈಲ್ವೆ ಇಲಾಖೆ!:*
ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದ ಬಳಿಕ ಸಿಗುವ ರೈಲು ನಿಲ್ದಾಣವೆಂದರೆ ಬಜಕೆರೆ ಹಾಲ್ಟ್ ರೈಲು ನಿಲ್ದಾಣ. ಇಲ್ಲಿ ಜನವರಿಯಿಂದ ಮಾರ್ಚ್ ತನಕ ನೈರುತ್ಯ ರೈಲ್ವೆ ವಲಯವು 8,880 ರೂಪಾಯಿ ಆದಾಯವನ್ನು ಗಳಿಸಿತ್ತು. ಅದೇ ಏಪ್ರಿಲ್‍ನಿಂದ ಜೂನ್ ತನಕ 31,570 ರೂಪಾಯಿ ಗಳಿಸಿದೆ.
ಕೇವಲ ಮೂರು ತಿಂಗಳಿನಲ್ಲಿ ಸುಮಾರು 60,000 ರೂಪಾಯಿಗಳಷ್ಟು ಆದಾಯದಲ್ಲಿ ಏರಿಕೆ ಕಂಡ ಕಡಬ ತಾಲೂಕು ಕೇಂದ್ರಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣ.
*ಕೋಡಿಂಬಾಳ ಹಾಲ್ಟ್:!* ಇದು ಕಡಬ ತಾಲೂಕು ಕೇಂದ್ರಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣ. ಇಲ್ಲಿಂದ ಕೋಡಿಂಬಾಳ ರೈಲು ನಿಲ್ದಾಣಕ್ಕೆ ಇರುವ ದೂರ 4.7 ಕಿ.ಮಿ.ಮಾತ್ರ. ಜನವರಿಯಿಂದ ಮಾರ್ಚ್ ತನಕ ಕೇವಲ ಮಧ್ಯಾಹ್ನದ ಪ್ಯಾಸೆಂಜರ್ ರೈಲಿನ ನಿಲುಗಡೆಯಿಂದ 26,775 ರೂಪಾಯಿ ಆದಾಯವನ್ನು ಗಳಿಸಿದ್ದ ನೈರುತ್ಯ ರೈಲ್ವೆ ವಲಯವು ಮಂಗಳೂರು-ಕಬಕ ಪುತ್ತೂರು ರೈಲು ಸುಬ್ರಹ್ಮಣ್ಯಕ್ಕೆ ವಿಸ್ತರಣೆಗೊಂಡ ಬಳಿಕ ಬರೋಬ್ಬರಿ 83,290 ರೂಪಾಯಿ ಗಳಿಸಿದೆ.

ಮೂರು ತಿಂಗಳಿನಲ್ಲಿ ಎಡಮಂಗಲ ರೈಲು ನಿಲ್ದಾಣದ ಆದಾಯದಲ್ಲಿ ಸುಮಾರು 33,000 ರೂಪಾಯಿ ಏರಿಕೆಯಾಗಿದೆ.
ಎಡಮಂಗಲ ಇದು ಕಡಬ ತಾಲೂಕಿನ ಒಂದು ಮುಖ್ಯ ಗ್ರಾಮ. ಇಲ್ಲಿರುವ ರೈಲು ನಿಲ್ದಾಣದಲ್ಲಿ ಈ ಹಿಂದೆ ಬೆಂಗಳೂರು-ಕಣ್ಣೂರು/ಕಾರವಾರ ಎಕ್ಸ್‌ಪ್ರೆಸ್ ರೈಲುಗಳು ಕೂಡ ನಿಲ್ಲುತ್ತಿತ್ತು. ಜನವರಿಯಿಂದ ಮಾರ್ಚ್ ತನಕ ಎಡಮಂಗಲ ರೈಲು ನಿಲ್ದಾಣದಲ್ಲಿ 8,915 ರೂಪಾಯಿ ಆದಾಯವನ್ನು ಗಳಿಸಿದ್ದ ನೈರುತ್ಯ ರೈಲ್ವೆ ವಲಯವು ಏಪ್ರಿಲ್‍ನಿಂದ ಜೂನ್ ತನಕ 42,190 ರೂಪಾಯಿಯಷ್ಟು ಆದಾಯವನ್ನು ಗಳಿಸಿದೆ! ಈ ರೈಲು ನಿಲ್ದಾಣದ ಆದಾಯದಲ್ಲಿ ಸುಮಾರು 33,275 ರೂಪಾಯಿ ಏರಿಕೆಯಾಗಿರುವುದಾಗಿ ಮಾಹಿತಿ ತಿಳಿಸಿದೆ.

*ಸಣ್ಣ ರೈಲು ನಿಲ್ದಾಣವಾದರೂ ನೈರುತ್ಯ ರೈಲ್ವೆ ವಲಯಕ್ಕೆ ಚಿನ್ನದ ಮೊಟ್ಟೆ ಇಟ್ಟ ಕಾಣಿಯೂರು ರೈಲು ನಿಲ್ದಾಣ!:*
ಕಾಣಿಯೂರು ಹಾಲ್ಟ್ ರೈಲು ನಿಲ್ದಾಣ. ಇದು ನಮ್ಮ ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿಗೆ ಅತ್ಯಂತ ಹತ್ತಿರದಲ್ಲಿರುವ ರೈಲು ನಿಲ್ದಾಣ. ಈ ನಿಲ್ದಾಣ ಕೇವಲ ಕಾಣಿಯೂರು ಗ್ರಾಮಕ್ಕೆ ಮಾತ್ರವಲ್ಲದೆ ಸುತ್ತಮುತ್ತಲಿನ 9-10 ಗ್ರಾಮಗಳಿಗೂ ರೈಲು ಸಂಪರ್ಕ ನೀಡುವ ರೈಲು ನಿಲ್ದಾಣವಾಗಿದೆ. ಜನವರಿಯಿಂದ ಮಾರ್ಚ್ ತನಕ ಇಲ್ಲಿ 8,965 ರೂಪಾಯಿ ಆದಾಯವನ್ನು ಗಳಿಸಿದ್ದ ನೈರುತ್ಯ ರೈಲ್ವೆ ವಲಯವು ಏಪ್ರಿಲ್‍ನಿಂದ ಜೂನ್ ತನಕ ಅಂದರೆ ಪ್ಯಾಸೆಂಜರ್ ರೈಲು ವಿಸ್ತರಣೆಗೊಂಡ ಬಳಿಕ ಬರೋಬ್ಬರಿ 89,050 ರೂಪಾಯಿ ಗಳಿಸಿದೆ.ಅಂದರೆ ಕೇವಲ ಮೂರು ತಿಂಗಳಿನಲ್ಲಿ 80,085 ರೂಪಾಯಿಯಷ್ಟು ಆದಾಯ ಏರಿಕೆಗೊಂಡಿದೆ! ಇದು ಕಾಣಿಯೂರು ರೈಲು ನಿಲ್ದಾಣದಿಂದ ರೈಲಿಗೆ ಜನರು ಕೊಡುತ್ತಿರುವ ಬೆಂಬಲವನ್ನು ಸ್ಪಷ್ಟವಾಗಿ ತೋರಿಸುತ್ತದೆ ಹಾಗೂ ಕಾಣಿಯೂರಿನಲ್ಲಿ ಸುಸಜ್ಜಿತ ರೈಲು ನಿಲ್ದಾಣದ ಬೇಡಿಕೆಗೆ ಮತ್ತಷ್ಟು ಬಲ ನೀಡಿದೆ.

*ನರಿಮೊಗರು ರೈಲು ನಿಲ್ದಾಣದ ಆದಾಯದಲ್ಲೂ ಏರಿಕೆ!:*
ನರಿಮೊಗರು ರೈಲು ನಿಲ್ದಾಣ. ಇದು ಇರುವುದು ನರಿಮೊಗರು ಗ್ರಾಮದಿಂದ ಸುಮಾರು 4.8 ಕಿ.ಮೀ. ದೂರದಲ್ಲಿರುವ ಸರ್ವೆ ಎಂಬ ಗ್ರಾಮದಲ್ಲಿ ಆದರೂ ನರಿಮೊಗರು ಹೆಸರನ್ನು ಹೊಂದಿದೆ. ಈ ಹಿಂದೆ ಮಧ್ಯಾಹ್ನದ ಪ್ಯಾಸೆಂಜರ್ ರೈಲಿನಲ್ಲಿ ಇಲ್ಲಿಂದ ಒಬ್ಬನೇ ಒಬ್ಬ ಪ್ರಯಾಣಿಕನೂ ಸಂಚರಿಸದೇ ಇದ್ದ ರೈಲು ನಿಲ್ದಾಣ ಇದು ಆಗಿತ್ತು. ನಂತರ ಸುಧಾರಿಸುತ್ತಾ ಬಂದು ಜನವರಿಯಿಂದ ಮಾರ್ಚ್ ತನಕ 2,855 ರೂಪಾಯಿಯಷ್ಟು ಆದಾಯ ಗಳಿಸಿದ ರೈಲು ನಿಲ್ದಾಣ ಏಪ್ರಿಲ್‍ನಿಂದ ಜೂನ್ ತನಕ 17,300 ರೂಪಾಯಿಯಷ್ಟು ಆದಾಯ ಗಳಿಸಿದೆ.

*ಅಭಿವೃದ್ಧಿ ಕುಂಠಿತಗೊಂಡರೂ ಆದಾಯದಲ್ಲಿ ಬಹಳಷ್ಟು ಕೊಡುಗೆ ನೀಡಿದ ಕಬಕ ಪುತ್ತೂರು ರೈಲು ನಿಲ್ದಾಣ!:*
ಕಬಕ ಪುತ್ತೂರು ರೈಲು ನಿಲ್ದಾಣವು ನಮ್ಮ ಜಿಲ್ಲೆಯ ಎರಡನೆಯ ದೊಡ್ಡ ನಗರವಾದ ಪುತ್ತೂರಿನಲ್ಲಿರುವ ರೈಲು ನಿಲ್ದಾಣ. ಪುತ್ತೂರು ತಾಲೂಕಿನ ಮುಖ್ಯ ರೈಲು ನಿಲ್ದಾಣವೂ ಹೌದು. ಜನವರಿಯಿಂದ ಮಾರ್ಚ್ ತನಕ ನೈರುತ್ಯ ರೈಲ್ವೆ ವಲಯವು 1,09,34,431 ರೂಪಾಯಿಗಳಷ್ಟು ಆದಾಯವನ್ನು ಗಳಿಸಿತ್ತು. ಅದೇ ಏಪ್ರಿಲ್‍ನಿಂದ ಜೂನ್ ತನಕ ಬರೋಬ್ಬರಿ 1,22,44,465 ರೂಪಾಯಿಗಳಷ್ಟು ಆದಾಯವನ್ನು ನೈರುತ್ಯ ರೈಲ್ವೆ ವಲಯವು ಗಳಿಸಿದೆ.ಇದರಲ್ಲಿ ಎಕ್ಸ್‌ಪ್ರೆಸ್ ರೈಲುಗಳ ಆದಾಯ, ಪ್ಯಾಸೆಂಜರ್ ರೈಲುಗಳ ಆದಾಯ,ಪ್ಲಾಟ್‌ಫಾರ್ಮ್ ಟಿಕೇಟು,ಕ್ಯಾಂಟೀನ್, ಜಾಹೀರಾತು ಎಲ್ಲವೂ ಸೇರಿದೆ. ಆದರೂ ಮೂರು ತಿಂಗಳಿನಲ್ಲಿ ಸುಮಾರು13,10,034 ರೂಪಾಯಿ ಏರಿಕೆಯಾಗಿರುವುದು ಕಂಡುಬಂದಿದೆ.

*ಆದಾಯದಲ್ಲಿ ನಿರೀಕ್ಷೆಯಷ್ಟು ಏರಿಕೆ ಕಾಣದ ನೇರಳಕಟ್ಟೆ ರೈಲು ನಿಲ್ದಾಣ ?:*
ಕಬಕ ಪುತ್ತೂರು ಹಾಗೂ ಬಂಟ್ವಾಳ ರೈಲು ನಿಲ್ದಾಣಗಳ ನಡುವೆ ಕಾರ್ಯಾಚರಣೆಯಲ್ಲಿರುವ ಏಕೈಕ ರೈಲು ನಿಲ್ದಾಣವಾದ ನೇರಳಕಟ್ಟೆ ರೈಲು ನಿಲ್ದಾಣದಲ್ಲಿ ಜನವರಿಯಿಂದ ಮಾರ್ಚ್ ತನಕ ನೈರುತ್ಯ ರೈಲ್ವೆ ವಲಯವು 8,025 ರೂಪಾಯಿ ಆದಾಯವನ್ನು ಗಳಿಸಿದೆ. ಏಪ್ರಿಲ್‍ನಿಂದ ಜೂನ್ ತನಕ ಸುಮಾರು 8,880 ರೂಪಾಯಿ ಗಳಿಸಿದೆ.
ಮೂರು ತಿಂಗಳಿನಲ್ಲಿ ಬಂಟ್ವಾಳ ರೈಲು ನಿಲ್ದಾಣದ ಆದಾಯದಲ್ಲಿ 11 ಲಕ್ಷ ರೂಪಾಯಿ ಏರಿಕೆಯೆಂದರೆ ಆಶ್ಚರ್ಯ ವಾಗಬಹುದು.

*ಬಂಟ್ವಾಳ ರೈಲು ನಿಲ್ದಾಣ!:*
ಇದು ಮಂಗಳೂರು-ಸುಬ್ರಹ್ಮಣ್ಯ ಮಾರ್ಗದಲ್ಲಿ ಬರುವ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದು. ಅಷ್ಟೇ ಅಲ್ಲದೆ ನಮ್ಮ ಜಿಲ್ಲೆಯಲ್ಲಿ ಒಂದು ರಾಷ್ಟ್ರೀಯ ಹೆದ್ದಾರಿಗೆ ಅತ್ಯಂತ ಹತ್ತಿರದಲ್ಲಿರುವ ರೈಲು ನಿಲ್ದಾಣವೂ ಹೌದು. ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಯಡಿ ಅಭಿವೃದ್ಧಿಯನ್ನು ಕಾಣುತ್ತಿರುವ ಈ ನಿಲ್ದಾಣದಲ್ಲಿ ನೈರುತ್ಯ ರೈಲ್ವೆ ವಲಯವು ಜನವರಿಯಿಂದ ಮಾರ್ಚ್ ತನಕ 65,47,160 ರೂಪಾಯಿ ಆದಾಯ ಗಳಿಸಿದೆ ಎನ್ನಲಾಗಿದೆ. ಅದೇ ಏಪ್ರಿಲ್‍ನಿಂದ ಜೂನ್ ತನಕ 76,75,877 ರೂಪಾಯಿ ಆದಾಯವನ್ನು ಗಳಿಸಿದೆ. ಇದರಲ್ಲಿ ಎಕ್ಸ್‌ಪ್ರೆಸ್ ರೈಲುಗಳ ಆದಾಯ, ಪ್ಯಾಸೆಂಜರ್ ರೈಲುಗಳ ಆದಾಯ,ಪ್ಲಾಟ್‌ಫಾರ್ಮ್ ಟಿಕೇಟು,ಕ್ಯಾಂಟೀನ್ ಎಲ್ಲವೂ ಸೇರಿದೆ. ಅಂದರೆ ಮೂರು ತಿಂಗಳ ಅವಧಿಯಲ್ಲಿ ಬರೋಬ್ಬರಿ 11,28,717 ರೂಪಾಯಿ ಏರಿಕೆಯಾಗಿದೆ?

ಎಲ್ಲಾ ನಿಲ್ದಾಣಗಳ ಆದಾಯವನ್ನು ಸೇರಿಸಿ ಹೇಳುವುದಾದರೆ ನೈರುತ್ಯ ರೈಲ್ವೆ ವಲಯವೂ ಪಡೀಲ್ ಹಾಗು ಸುಬ್ರಹ್ಮಣ್ಯ ರೋಡ್ ನಡುವೆ ಇರುವ ಎಲ್ಲಾ ರೈಲು ನಿಲ್ದಾಣಗಳಿಂದ ಏಪ್ರಿಲ್‍ನಿಂದ ಜೂನ್ ತಿಂಗಳ ಅವಧಿಯಲ್ಲಿ ಬರೋಬ್ಬರಿ 5,04,38,446 ರೂಪಾಯಿ ಆದಾಯವನ್ನು ಗಳಿಸಿದೆ!
ಈಗ ಗಮನಿಸ ಬೇಕಾದ ವಿಷಯವೇನೆಂದರೆ ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ವಿಸ್ತರಣೆಗೊಂಡ ಬಳಿಕ ಗ್ರಾಮೀಣ ಭಾಗದ ಸಣ್ಣ ರೈಲು ನಿಲ್ದಾಣಗಳ ಆದಾಯದಲ್ಲಿ ಬಹಳಷ್ಟು ಏರಿಕೆಗೊಂಡಿದೆ. ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲಿಗೆ ಉತ್ತಮ ಜನಸ್ಪಂದನೆಯಿದೆ.
ಇಷ್ಟೆಲ್ಲ ಆದಾಯವನ್ನು ಈ ಭಾಗ ರೈಲ್ವೆ ಇಲಾಖೆ ನೀಡಿದರೂ ಅಭಿವೃದ್ಧಿ ವಿಷಯದಲ್ಲಿ ಇನ್ನೂ ಹಿಂದೆ ಉಳಿದಿದೆ. ಗ್ರಾಮೀಣ ಭಾಗದ ರೈಲು ನಿಲ್ದಾಣಗಳು ಇನ್ನು ಅಭಿವೃದ್ಧಿಗೊಳ್ಳಬೇಕಾಗಿದೆ. ಅದರಲ್ಲೂ ಕಾಣಿಯೂರಿನಲ್ಲಿ ಹೊಸ ಸುಸಜ್ಜಿತ ರೈಲು ನಿಲ್ದಾಣದ ಪ್ರಸ್ತಾಪ ಇದ್ದರೂ ಅದನ್ನು ತಿರಸ್ಕರಿಸಿ ಮಲತಾಯಿ ಧೋರಣೆಯನ್ನು ತೋರುತ್ತಿರುವ ನೈರುತ್ಯ ರೈಲ್ವೆ ವಲಯದ ಬಳಿ ಈ ಆದಾಯದ ಅಂಕಿಅಂಶವೂ ಮತ್ತೆ ಹೊಸ ರೈಲು ನಿಲ್ದಾಣದ ಬೇಡಿಕೆಗೆ ಹೊಸ ಶಕ್ತಿ ಬಂದಿದೆ.
ಅಂತೂ ನಮ್ಮ ಭಾಗದಲ್ಲಿಯೂ ರೈಲು ಸೇವೆಗಳಿಗೆ ಜನರು ಸ್ಪಂದಿಸುತ್ತಿದ್ದಾರೆ, ಬೆಂಬಲ ನೀಡುತ್ತಿದ್ದಾರೆ ಎಂದು ಸಾಬೀತಾಗಿದೆ ಎಂದು ಮೆಚ್ಚುಗೆ ವ್ಯಕ್ತವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು