ಇತ್ತೀಚಿನ ಸುದ್ದಿ
ಮಂಗಳೂರು: ೧೩ನೇ ವರ್ಷದ ‘ಕಾಲ ಕೋಂದೆ-೨೦೨೬’ ತುಳು ಕ್ಯಾಲೆಂಡರ್ ಬಿಡುಗಡೆ
31/12/2025, 23:14
ಮಂಗಳೂರು(reporterkarnataka.com): ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿ ಹೊರ ತಂದಿರುವ ‘ಕಾಲ ಕೋಂದೆ-೨೦೨೬’ ತುಳು ಕ್ಯಾಲೆಂಡರ್ ಬಿಡುಗಡೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ಕಳೆದ ೧೩ ವರ್ಷಗಳಿಂದ ಈ ಕ್ಯಾಲೆಂಡರ್ ಅನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯವಾದುದು. ಪ್ರತಿಯೊಂದು ಕೆಲಸ, ಕಾರ್ಯಕ್ರಮಗಳಿಗೂ ದಿನದ ಮುಹೂರ್ತವನ್ನು ನೋಡುವ ಕ್ರಮ ತುಳುವರದ್ದಾಗಿದೆ. ತುಳುವಿನ ಆಚಾರ ವಿಚಾರ ಉಳಿಸುವತ್ತಲೂ ಪ್ರಮುಖ ಪಾತ್ರ ವಹಿಸಲಿದೆ. ತುಳುವರಿಗೆ ತುಳುವಿನದ್ದೇ ಕ್ಯಾಲೆಂಡರ್ ನಿಂದ ಹೆಚ್ಚು ಅನುಕೂಲವಾಗುತ್ತದೆ. ಈ ಕ್ಯಾಲೆಂಡರ್ ತುಳುವಿನ ದಿನ, ತಿಂಗಳು ಮತ್ತು ಲಿಪಿಯ ಮಾಹಿತಿಯನ್ನು ಕೂಡ ನೀಡುತ್ತದೆ. ಇದರಲ್ಲಿ ಕನ್ನಡ ಮತ್ತು ತುಳು ಎರಡರಲ್ಲೂ ಮಾಹಿತಿಯಿರುವುದರಿಂದ ಈಗಿನ ತಲೆಮಾರಿನವರಿಗೂ ಅನುಕೂಲವಾಗಲಿದೆ. ಇದು ತುಳುವಿಗೆ ದೊಡ್ಡ ಕೊಡುಗೆಯಾಗಿದೆ ಎಂದು ಹೇಳಿದರು.
ಡಿಜಿಟಲ್ ತುಳು ಲಿಪಿ ವಿನ್ಯಾಸಕ ಹಾಗೂ ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿಯ ಡಾ. ಪ್ರವೀಣ್ ರಾಜ್ ಎಸ್. ರಾವ್ ಮಾತನಾಡಿ, ಕಾಲ ಕೋಂದೆ ಕ್ಯಾಲೆಂಡರ್ ತುಳು ನಾಡಿನ ಸರ್ವ ಧರ್ಮೀಯರ ಹಬ್ಬ, ಆಚರಣೆಗಳ ಸಮಗ್ರ ಮಾಹಿತಿಯನ್ನು ನೀಡುತ್ತದೆ. ತುಳು ಲಿಪಿ ತಂತ್ರಾಂಶದ ಸಹಾಯದಿಂದ ಕಳೆದ ೧೨ ವರ್ಷಗಳಿಂದ ಪ್ರತೀ ವರ್ಷ ಈ ಕ್ಯಾಲೆಂಡರ್ ತಯಾರಿಸಲಾಗುತ್ತಿದೆ. ೨೦೦೮ ರಲ್ಲಿ ತುಳುವಿನ ಡಿಜಿಟಲ್ ಅಕ್ಷರಗಳನ್ನು ಸಿದ್ದಪಡಿಸಲಾಗಿದ್ದು, ಅದು ೨೦೦೯ ರಿಂದ ಬಳಕೆಗೆ ಬಂದಿದೆ. ೧೫ ನಾನಾ ಫಾಂಟ್ ಗಳನ್ನು ಸಿದ್ದಪಡಿಸಿದ್ದು, ಅದನ್ನು ಅಕಾಡೆಮಿಗೆ ನೀಡಲಾಗುವುದು. ಇದರಿಂದ ಬಹಳಷ್ಟು ತುಳುವರಿಗೆ ಉಪಯೋಗವಾಗಲಿದೆ ಎಂದು ಹೇಳಿದರು.
ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ, ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿಯ ತಾಂತ್ರಿಕ ಸಲಹೆಗಾರ ವಿವೇಕ್ ಹಾಗೂ ರಾಮಕೃಷ್ಣ ಎನ್. ಉಪಸ್ಥಿತರಿದ್ದರು.












