ಇತ್ತೀಚಿನ ಸುದ್ದಿ
ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳ: ಕನ್ನಡ ರಥಕ್ಕೆ ಮಂಗಳೂರಿನಲ್ಲಿ ಸ್ವಾಗತ
08/11/2024, 10:53
ಮಂಗಳೂರು (reporterkarnataka.com): ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ನಿಮಿತ್ತ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ಗುರುವಾರ ಮಂಗಳೂರು ನಗರಕ್ಕೆ ಆಗಮಿಸಿತು.
ನಗರದ ಪುರಭವನ ಆವರಣಕ್ಕೆ ಕನ್ನಡ ರಥ ಆಗಮಿಸಿದಾಗ ಜಿಲ್ಲಾಡಳಿತ ವತಿಯಿಂದ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಅತಿದೊಡ್ಡ ನುಡಿಹಬ್ಬವಾಗಿದೆ. ಶ್ರೀಮಂತ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯು ಸಾಹಿತ್ಯ ಲೋಕದಲ್ಲಿ ಆಳವಾದ ಬೇರನ್ನು ಹೊಂದಿದೆ. ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನವು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಮುಂದಿನ ವರ್ಷ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವಂತಾಗಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮುಖಂಡರು ಪ್ರಯತ್ನಿಸಬೇಕು. ಜಿಲ್ಲೆಯಲ್ಲಿ ಸಮ್ಮೇಳನ ನಡೆದರೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ, ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಮಹಾನಗರಪಾಲಿಕೆ ಆಯುಕ್ತ ಸಿ.ಎಲ್. ಆನಂದ್, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರು ಇದ್ದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಾಥ್ ಅವರು ಕನ್ನಡ ರಥಯಾತ್ರೆ ಸಂಚಾರದ ಮಾಹಿತಿ ನೀಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಸ್ವಾಗತಿಸಿ, ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಂಜುನಾಥ್ ರೇವಣ್ಕರ್ ವಂದಿಸಿದರು.