ಇತ್ತೀಚಿನ ಸುದ್ದಿ
ಮಂದಾರದಿಂದ ಪಂಜರಕ್ಕೆ: ಪಚ್ಚನಾಡಿ ತ್ಯಾಜ್ಯ ದುರಂತಕ್ಕೆ 2 ವರ್ಷ !; ಸಂತ್ರಸ್ತರಿಗೆ ಸಿಕ್ಕಿದ್ದು ಮಧ್ಯಂತರ ಪರಿಹಾರ ಮಾತ್ರ, ಮಿಕ್ಕಿದ್ದು ಬರೇ ಸೀರುಂಡೆ !!
05/08/2021, 21:24
ಅಶೋಕ್ ಕಲ್ಲಡ್ಕ ಮಂಗಳೂರು
info.reporterkarnataka@gmail.com
ನಗರದ ಪಚ್ಚನಾಡಿ ಡಂಪಿಂಗ್ ಯಾರ್ಡ್ ಸಮೀಪದ ಮಂದಾರದಲ್ಲಿ ಸಂಭವಿಸಿದ ಮಾನವ ನಿರ್ಮಿತ ಭೀಕರ ತ್ಯಾಜ್ಯ ದುರಂತಕ್ಕೆ ಇದೀಗ ಎರಡು ವರ್ಷ ತುಂಬಿದೆ. ಮನೆ ಮಠ ಕಳೆದುಕೊಂಡ 25 ಕುಟುಂಬಗಳು ಅನಾಥವಾಗಿ ಕರ್ನಾಟಕ ಗೃಹ
ಮಂಡಳಿಯ ಗೂಡು ಸೇರಿವೆ. ಅಂದು ಆಡಳಿತದಲ್ಲಿದ್ದವರು ಇಂದು ಪ್ರತಿಪಕ್ಷದ ಸ್ಥಾನದಲ್ಲಿದ್ದಾರೆ. ಪ್ರತಿಪಕ್ಷದಲ್ಲಿದ್ದವರು ಅಧಿಕಾರದ ಗದ್ದುಗೆ ಏರಿದ್ದಾರೆ. ಇಷ್ಟು ಬದಲಾವಣೆ ಬಿಟ್ಟರೆ ಸಂತ್ರಸ್ತರಿಗೆ ಸಿಕ್ಕಿದ್ದು ಮಧ್ಯಂತರ ಪರಿಹಾರ 14 ಕೋಟಿ ರೂ. ಮಾತ್ರ. ಮತ್ತೆಲ್ಲ ಬರೇ ಸೀರುಂಡೆ ಮಾತ್ರ.
2019 ಆಗಸ್ಟ್ 6ರಂದು ಕರಾವಳಿಯಲ್ಲಿ ಸುರಿದ ಭಾರಿ ಮಳೆಗೆ ಪಚ್ಚನಾಡಿ ಡಂಪಿಂಗ್ ಯಾರ್ಡ್ ನ ತಡೆಗೋಡೆ ಕುಸಿದಿತ್ತು. ಕೆಂಪು ಕಲ್ಲಿನಿಂದ ಕಟ್ಟಿದ್ದ ತಡೆಗೋಡೆ ಕುಸಿದ ಪರಿಣಾಮ ಮಹಾ ದುರಂತ ಸಂಭವಿಸಿತ್ತು. ನೋಡು ನೋಡುತ್ತಿದ್ದಂತೆ ತ್ಯಾಜ್ಯ ಸುನಾಮಿ 2 ಕಿಮೀ. ದೂರದ ಮಂದಾರವನ್ನು ನುಂಗಿ ಹಾಕಿತು. ಸುಮಾರು 10 ಲಕ್ಷ ಟನ್ ತ್ಯಾಜ್ಯ ಮಂದಾರದ ಸುಮಾರು 17 ಎಕರೆ ಫಲವತ್ತಾದ ಕೃಷಿಭೂಮಿಯನ್ನು ಆಹುತಿ ಪಡೆಯಿತು. ಸುಮಾರು 25 ಕುಟುಂಬಗಳು ಅಕ್ಷರಶಃ ಬೀದಿ ಪಾಲಾದವು. ಸಾಕು ಪ್ರಾಣಿಗಳು ತಬ್ಬಲಿಯಾದವು. ಕೆರೆ, ಕೊಳ, ಬಾವಿ ಕಲುಷಿತಗೊಂಡಿತು. ನಳನಳಿಸುತ್ತಿದ್ದ ಭೂಮಿ ಸ್ಮಶಾನವಾಯಿತು.
ಆರಂಭದಲ್ಲಿ ಜನಪ್ರತಿನಿಧಿಗಳು, ರಾಜಕಾರಣಿಗಳು ಹಾಗೂ ಅಧಿಕಾರಿಗಳ ದಂಡೇ ಮಂದಾರಕ್ಕೆ ಆಗಮಿಸಿತು. ಎಲ್ಲರೂ ಫೋಟೋ ತೆಗಿಸಿಕೊಂಡು ಹಲವು ಭರವಸೆಗಳನ್ನು ನೀಡಿದರು. ತಿಂಗಳು ಕಳೆಯುತ್ತಿದ್ದಂತೆ ರಾಜಕಾರಣಿಗಳ ಹಾಗೂ ಅಧಿಕಾರಿಗಳ ಓಡಾಟ ನಿಂತು ಹೋಯಿತು.
ನಂತರ ಪ್ರಥಮ ಹಂತದಲ್ಲಿ ಕೃಷಿ ಪರಿಹಾರ 8 ಕೋಟಿ ರೂ.ವನ್ನು ಸರಕಾರ ಮಂಜೂರು ಮಾಡಿತು. ಇದರಲ್ಲಿ 4 ಕೋಟಿ ರೂ.ವನ್ನು ತಡೆಗೋಡೆ ನಿರ್ಮಿಸಲು ಉಪಯೋಗಿಸಲಾಗಿದೆ. ನಂತರ ರಾಜ್ಯ ಹೈಕೋರ್ಟ್ ಆದೇಶದಂತೆ 14 ಕೋಟಿ ರೂ. ಮಧ್ಯಂತರ ಪರಿಹಾರವನ್ನು ಸರಕಾರ ನೀಡಿದೆ. ಅದು ಬಿಟ್ಟರೆ ಸಂತ್ರಸ್ತರಿಗೆ ಯಾವುದೇ ಪರಿಹಾರದ ವ್ಯವಸ್ಥೆಯನ್ನು ಸರಕಾರ ಮಾಡಿಲ್ಲ. ಹೈಕೋರ್ಟ್ ಆದೇಶದಂತೆ ಭೂಸ್ವಾಧೀನ ಪ್ರಕ್ರಿಯೆಯ ಕರಡು ಅಧಿಸೂಚನೆಯನ್ನು ಜಿಲ್ಲಾಧಿಕಾರಿ 2021 ಜುಲೈ 17ರಂದು ಹೊರಡಿಸಿದ್ದರು. 64 ಮಂದಿ ಸಂತ್ರಸ್ತರಿಗೆ ಸೇರಿದ 17.25 ಎಕರೆ ಜಾಗಕ್ಕೆ ಇನ್ನು ದರ ನಿಗದಿಪಡಿಸಬೇಕಾಗಿದೆ. ಮಹಾನ್ ಸಾಹಿತಿ, ಮಂದಾರ ರಾಮಾಯಣ ಖ್ಯಾತಿಯ ಮಂದಾರ ಕೇಶವ ಭಟ್ ಅವರ ಪಾರಂಪರಿಕ ಮನೆಯನ್ನು ಉಳಿಸುವ ಬಗ್ಗೆ ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ. ಎರಡು ವರ್ಷದಲ್ಲಿ ಮನೆ ಸಾಕಷ್ಟು ಹಾನಿಗೀಡಾಗಿದೆ. ಅದನ್ನು ಮಂದಾರ ಕೇಶವ ಭಟ್ ರಾಷ್ಟ್ರೀಯ ಸ್ಮಾರಕ ಮತ್ತು ಅಧ್ಯಯನ ಕೇಂದ್ರ ಮಾಡಿ ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಆಗಬೇಕಾಗಿದೆ.
ತ್ಯಾಜ್ಯ ದುರಂತ ನಡೆದಾಗ ಮಂಗಳೂರು ಮಹಾನಗರಪಾಲಿಕೆ ಕಮಿಷನರ್ ಆಗಿದ್ದ ಮಹಮ್ಮದ್ ನಜೀರ್ ಹಾಗೂ ಉಪ ಆಯುಕ್ತೆ(ಕಂದಾಯ) ಗಾಯತ್ರಿ ನಾಯಕ್ ನಂತರ ವರ್ಗಾವಣೆಗೊಂಡರು. ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಸ್ವಯಂ ನಿವೃತ್ತಿ ಹೊಂದಿದರು. ನಂತರ ಜಿಲ್ಲಾಧಿಕಾರಿಯಾಗಿ ಬಂದ ಸಿಂಧೂ ಬಿ. ರೂಪೇಶ್ ಒಂದೆರಡು ಬಾರಿ ಮಂದಾರಕ್ಕೆ ಭೇಟಿ ನೀಡಿ ಪರಿಹಾರದ ಭರವಸೆ ನೀಡಿ ಹೋದರು. ಪಾಲಿಕೆಯ ಹೊಸ ಕಮಿಷನರ್ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಕೂಡ ನಾಲ್ಕೈದು ಬಾರಿ ಮಂದಾರಕ್ಕೆ ಭೇಟಿ ನೀಡಿ ಭರವಸೆಯ ಮಾತನಾಡಿದರು. ಅವರು ಕೂಡ ವರ್ಗಾವಣೆಯಾಗುವ ಹೋದರು. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೋದರು.
ಮಂತ್ರಿ- ಮಾಗಧರ ಹಾಗೂ ಅಧಿಕಾರಿಗಳ ದಂಡೇ ಬಂದು ಹೋದರೂ ಮಾಡಿದ್ದು ಮಾತ್ರ ಹೇಳುವಂತದ್ದೇನೂ ಇಲ್ಲ. ಎರಡು ವರ್ಷ ಕಳೆದರೂ ಸಂತ್ರಸ್ತರ ಕಣ್ಣೀರು ಒರೆಸುವಲ್ಲಿ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ವಿಫಲರಾಗಿದ್ದಾರೆ.
ಮಂದಾರದಲ್ಲಿ ಸ್ವಚ್ಛಂದ ಬದುಕು ಕಟ್ಟಿಕೊಂಡಿದ್ದವರು ಇಂದು ಸಂತ್ರಸ್ತರಾಗಿ ಕಳೆದ ಎರಡು ವರ್ಷಗಳಿಂದ ಕುಡುಪು ಸಮೀಪದ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಮನೆಗಳಲ್ಲಿ ಪಂಜರದ ಬದುಕು ನಡೆಸುತ್ತಿದ್ದಾರೆ. ಕೆಲವು ಹಿರಿಯ ನಾಗರಿಕರಲ್ಲಿ ಮಾನಸಿಕ ಸಮಸ್ಯೆಗಳು ಕಂಡು ಬಂದಿವೆ. ಕೆಲಸವಿಲ್ಲದೆ ತತ್ತರಿಸಿ ಹೋಗಿದ್ದಾರೆ.
ತಾವು ಮಾಡದ ತಪ್ಪಿಗೆ ಇಲ್ಲಿನ ನಿವಾಸಿಗಳು ದಸರಾ, ದೀಪಾವಳಿ, ಹೊಸ ವರ್ಷ, ಯುಗಾದಿಯನ್ನು ಕರ್ನಾಟಕ ಗೃಹ ಮಂಡಳಿಯ ಫ್ಲ್ಯಾಟ್ ಗಳ ನಾಲ್ಕು ಗೋಡೆಗಳ ಮಧ್ಯೆ ಆಚರಿಸುವಂತಾಗಿದೆ.
ದುರಂತ ನಡೆದಾಗ ಅಧಿಕಾರದಲ್ಲಿದ್ದ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ , ಮಹಾನಗರ ಪಾಲಿಕೆ ಆಯುಕ್ತ ಮಹಮ್ಮದ್ ನಝೀರ್ , ಉಪ ಆಯುಕ್ತೆ ಗಾಯತ್ರಿ ನಾಯಕ್ ಅವರು 3 ತಿಂಗಳೊಳಗಾಗಿ ಸೂಕ್ತ ಮತ್ತು ಗರಿಷ್ಠ ಪರಿಹಾರ ನೀಡಿ ಪ್ರಕರಣದ ಇತ್ಯರ್ಥದ ಭರವಸೆ ನೀಡಿದ್ದರು. ಆದರೆ ನಂತರ ಬಂದ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರಿಗೆ ಹಿಂದಿನ ಅಧಿಕಾರಿಗಳ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ
ನಂತರದಲ್ಲಿ ಬಂದ ಅಧಿಕಾರಿಗಳನ್ನು ಮಂದಾರ ಸಂತ್ರಸ್ತರು ಅನೇಕ ಬಾರಿ ಸಂಪರ್ಕಿಸಿ ಪರಿಹಾರ ನೀಡುವಂತೆ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ನಾಶವಾದ ದೈವಸ್ಥಾನ, ನಾಗಬನ ಧಾರ್ಮಿಕ ನಂಬಿಕೆಗಳ ಪುನಶ್ಚೇತನದ ಬಗ್ಗೆ ನಿರ್ಧಾರ ಆಗಬೇಕಿದೆ. ಈ ಪ್ರದೇಶವನ್ನು ನಾಶ ಮಾಡಿದ ಸುಮಾರು 10 ಲಕ್ಷ ಟನ್ ಘನ ತ್ಯಾಜ್ಯಗಳ ವಿಲೇವಾರಿ ಆಗಬೇಕಿದೆ. ಇದ್ಯಾವುದೂ ಕಳೆದ ಎರಡು ವರ್ಷದಲ್ಲಿ ನಡೆದಿಲ್ಲ. ಇದಕ್ಕೆಲ್ಲ ಉತ್ತರ ಸಿಗಲು ಇನ್ನೆಷ್ಟು ವರ್ಷ ಕಾಯಬೇಕೆನ್ನುವುದೇ ಸದ್ಯದ ಪ್ರಶ್ನೆಯಾಗಿದೆ.