ಇತ್ತೀಚಿನ ಸುದ್ದಿ
ಮಂಗಳೂರು ಕಂಬಳ: ಫೋಟೋಗ್ರಾಫಿ ಸ್ಪರ್ಧೆ, ಕಲರ್ ಕೂಟ, ರೀಲ್ ಕಂಟೆಸ್ಟ್; ಬನ್ನಿ ತುಳುವರ ಜನಪದ ಕ್ರೀಡೆಯನ್ನು ಸಂಭ್ರಮಿಸೋಣ
28/12/2023, 22:39
ಮಂಗಳೂರು(reporterkarnataka.com): ಮಂಗಳೂರು ಕಂಬಳ ಸಮಿತಿ ವತಿಯಿಂದ ನಗರದ ಬಂಗ್ರಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಸಿಟಿಯಲ್ಲಿ ಡಿಸೆಂಬರ್ 30ರಂದು ಮಂಗಳೂರು ಕಂಬಳ ಸಂಭ್ರಮ- ಸಡಗರದಿಂದ ನಡೆಯಲಿದ್ದು, ಕಂಬಳದ ಅಂಗವಾಗಿ ಛಾಯಾಚಿತ್ರ ಸ್ಪರ್ಧೆ, ಕಲರ್ ಕೂಟ ಮತ್ತು ರೀಲ್ ಕಂಟೆಸ್ಟ್ ಆಯೋಜಿಸಲಾಗಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಕ್ಯಾಪ್ಟನ್ ಬೃಜೇಶ್ ಚೌಟ ಹೇಳಿದರು.
ನಗರದ ಗೋಲ್ಡ್ ಫಿಂಚ್ ಹೊಟೇಲಿನಲ್ಲಿ ಗುರುವಾರ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಯಾಪ್ಟನ್ ಚೌಟ ಅವರು ಈ ಕುರಿತು ಮಾಹಿತಿ ನೀಡಿದರು.
ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಕಂಬಳದ ವ್ಯವಸ್ಥಾಪಕರು, ಕಂಬಳ ಕೋಣಗಳ ಮಾಲೀಕರು ಹಾಗೂ ಜಿಲ್ಲಾ ಕಂಬಳ ಸಮಿತಿಯ ಸರ್ವಸದಸ್ಯರ ಗೌರವ ಉಪಸ್ಥಿತಿಯಲ್ಲಿ ಕಂಬಳ ನಡೆಯಲಿದೆ. ಡಿ. 3೦ ರ ಸಂಜೆ ಸಭಾ ಕಾರ‍್ಯಕ್ರಮದಲ್ಲಿ ಮಂಗಳೂರು ಕಂಬಳ ಸಮಿತಿ ಗೌರವಾಧ್ಯಕ್ಷರಾದ ಎಂ.ಆರ್.ಜಿ. ಗ್ರೂಪ್ ನ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವಿ. ಸುನೀಲ್ ಕುಮಾರ್, ಉಮಾನಾಥ್ ಎ. ಕೋಟ್ಯಾನ್, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಹರೀಶ್ ಪೂಂಜ, ಅಶೋಕ್ ಕುಮಾರ್ ರೈ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಶಾಸಕರು, ಮಾಜಿ ಸಚಿವರುಗಳ ಸಹಿತ ಹಲವು ಮಂದಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
31ರ ಬೆಳಿಗ್ಗೆ 8 ಗಂಟೆಗೆ ಗಣ್ಯರ ಸಮ್ಮುಖದಲ್ಲಿ ಬಹುಮಾನ ವಿತರಣೆ ಕಾರ‍್ಯಕ್ರಮವಿದೆ. ಡಿ. 3೦ರ ಬೆಳಿಗ್ಗೆ 8.3೦ರಿಂದ 1೦ರ ವರೆಗೆ ನೇಗಿಲು ಕಿರಿಯ ವಿಭಾಗ, ಬೆಳಿಗ್ಗೆ 11.30 ರಿಂದ 12 ರ ವರೆಗೆ ಹಗ್ಗ ಕಿರಿಯ ವಿಭಾಗ, ಮಧ್ಯಾಹ್ನ 1ರಿಂದ 1.3೦ರ ವರೆಗೆ ನೇಗಿಲು ಹಿರಿಯ ವಿಭಾಗ, ಮಧ್ಯಾಹ್ನ 3.3೦ರಿಂದ 4.3೦ರ ವರೆಗೆ ಹಗ್ಗ ಕಿರಿಯ ವಿಭಾಗ, ಸಂಜೆ 5.3೦ರಿಂದ 6 ರ ವರೆಗೆ ಅಡ್ಡ ಹಲಗೆ ಮತ್ತು ಕನೆ ಹಲಗೆ ವಿಭಾಗದಲ್ಲಿ ಕೋಣಗಳನ್ನು ಗದ್ದೆಗೆ ಇಳಿಸುವ ಸಮಯ ನಿಗದಿಪಡಿಸಲಾಗಿದೆ. ಕನೆ ಹಲಗೆ ವಿಭಾಗದಲ್ಲಿ ನಿಗದಿತ ನಿಶಾನೆಗೆ ನೀರು ಹಾಯಿಸಿದ ಕೋಣಗಳಿಗೆ 2 ಪವನ್ ಚಿನ್ನ (ಪ್ರಥಮ), 1 ಪವನ್ ಚಿನ್ನ (ದ್ವಿತೀಯ) ಬಹುಮಾನವಿದೆ.
ಹಗ್ಗ, ನೇಗಿಲು-ಹಿರಿಯ ವಿಭಾಗದಲ್ಲಿ 2 ಪವನ್ ಚಿನ್ನ (ಪ್ರಥಮ), 1 ಪವನ್ ಚಿನ್ನ (ದ್ವಿತೀಯ) ಬಹುಮಾನವಿದೆ.
ಅಡ್ಡ ಹಲಗೆ, ಹಗ್ಗ, ನೇಗಿಲು -ಕಿರಿಯ ವಿಭಾಗದಲ್ಲಿ ಪ್ರಥಮ 1 ಪವನ್ ಚಿನ್ನ ಹಾಗೂ 1/2 ಪವನ್ ಚಿನ್ನ ದ್ವಿತೀಯ ಬಹುಮಾನವಿದೆ.
ರಾಜೀವ್ ಶೆಟ್ಟಿ ಎಡ್ತೂರು, ಸತೀಶ್ ಹೊಸ್ಮಾರು, ರವೀಂದ್ರ ಕುಮಾರ್ ಕುಕ್ಕುಂದೂರು, ವಿದ್ಯಾಧರ್ ಜೈನ್ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.
ಉಳಿದಂತೆ, ವೀಡಿಯೋ ತೀರ್ಪುಗಾರರು, ವೀಡಿಯೋ ದಾಖಲೀಕರಣ ಮತ್ತು ಚಿತ್ರೀಕರಣ, ವೀಕ್ಷಕ ವಿವರಣೆ ಮತ್ತು ಪ್ರಕಟನೆ, ತೀರ್ಪುಗಾರರು, ಬರವಣಿಗೆ ಮತ್ತು ದಾಖಲೆ ನಿರ್ವಹಣೆ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಕಂಬಳ ಸಮಿತಿ
ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್ ಮಂಗಲ್ಪಾಡಿ, ಸಂಚಾಲಕರಾದ ಸಾಂತ್ಯಗುತ್ತು ಸಚಿನ್ ಶೆಟ್ಟಿ, ಕೋಶಾಧಿಕಾರಿ ತಲಪಾಡಿ ದೊಡ್ಡಮನೆ ಪ್ರೀತಮ್ ರೈ, ಉಪಾಧ್ಯಕ್ಷರುಗಳಾದ ಸಂಜಯ್ ಪ್ರಭು, ಈಶ್ವರ್ ಪ್ರಸಾದ್ ಶೆಟ್ಟಿ, ಬಟ್ಟಿರ ಅಜಿತ್ ಬೋಪಯ್ಯ, ಪ್ರಕಾಶ್ ಪೂಜಾರಿ ಗರೋಡಿ, ಗೌರವ ಸಲಹೆಗಾರರಾದ ವಿಜಯ್‌ಕುಮಾರ್ ಕಂಗಿನ ಮನೆ ಉಪಸ್ಥಿತರಿದ್ದರು.