ಇತ್ತೀಚಿನ ಸುದ್ದಿ
ಮಂಗಳೂರು: 200 ಯುವ ವಕೀಲರಿಗೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ
02/06/2021, 06:34
ಮಂಗಳೂರು(reporterkarnataka news): ಮಂಗಳೂರು ವಕೀಲರ ಸಂಘದ ವತಿಯಿಂದ ನಗರದ ಯುವ ವಕೀಲರಿಗೆ ಕೋವಿಡ್ ಮುಂಚೂಣಿ ಯೋಧರು ಎಂಬ ನೆಲೆಯಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ನ್ಯಾಯಾಲಯ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮುರಳೀಧರ ಪೈ ಅವರ ಮುತುವರ್ಜಿಯಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳು ಸುಮಾರು 200 ಯುವ ವಕೀಲರಿಗೆ ಲಸಿಕೆ ನೀಡಿದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎನ್. ನರಸಿಂಹ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ, ಉಪಾಧ್ಯಕ್ಷರಾದ ಜಿನೇಂದ್ರ ಕುಮಾರ್, ಜೊತೆ ಕಾರ್ಯದರ್ಶಿ ಪ್ರಮೀಳಾ, ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರಮೋದ್ ಕೆರ್ವಾಶೆ, ರವಿರಾಜ ಶೆಟ್ಟಿ, ಪ್ರೇಮ್ ಅಂಚನ್, ಶುಕರಾಜ ಕೊಟ್ಟಾರಿ, ವಿನಯ ಕುಮಾರ್, ಚಂದ್ರಹಾಸ ಕೊಟ್ಟಾರಿ ಮೊದಲಾದವರು ಲಸಿಕೆ ಅಭಿಯಾನದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಉಪಯುಕ್ತ ನೆರವು ನೀಡಿದರು.
ಜಿಲ್ಲಾ ನ್ಯಾಯಾಧೀಶರ ಸೂಚನೆ ಹಾಗೂ ಮನವಿ ಮೇರೆಗೆ ಜಿಲ್ಲಾಡಳಿತ ಈ ವಿಶೇಷ ಲಸಿಕಾ ಅಭಿಯಾನವನ್ನು ನಡೆಸಿತ್ತು. ಈ ಹಿಂದೆ, ನ್ಯಾಯಾಂಗ ಸಿಬ್ಬಂದಿಗೆ ಹಾಗೂ 45 ವರ್ಷ ಮೇಲ್ಪಟ್ಟ ವಕೀಲರಿಗೆ ಲಸಿಕೆ ನೀಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿತ್ತು.
ಎರಡೂ ಶಿಬಿರಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದವರಿಗೆ ಹಾಗೂ ವಕೀಲರ ಕುಟುಂಬ ಸದಸ್ಯರಿಗೂ ಮುಂದಿನ ದಿನಗಳಲ್ಲಿ ಲಸಿಕೆ ಅಭಿಯಾನ ನಡೆಸುವ ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮುರಳೀಧರ ಪೈ ಭರವಸೆ ನೀಡಿದರು.