ಇತ್ತೀಚಿನ ಸುದ್ದಿ
ಮಲ್ಪೆ ಹೋಟೆಲ್ ಗೆ ದಾಳಿ ಪ್ರಕರಣ: ಶಾಸಕ ರಘುಪತಿ ಭಟ್ ಕೈವಾಡ: ಅಸೀಲ್ ಅಕ್ರಂ ಆರೋಪ
23/02/2022, 18:52
ಉಡುಪಿ(reporterkarnataka.com):
ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ಮೆಟ್ಟಿಲೇರಿರುವ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹಝ್ರ ಶಿಫಾ ಅವರ ತಂದೆಯ ಮಲ್ಪೆ ಹೊಟೇಲಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ, ಸಹೋದರನಿಗೆ ಹಲ್ಲೆ ನಡೆಸಿರುವ ಘಟನೆ ಮಲ್ಪೆಯಲ್ಲಿ ನಡೆದಿದ್ದು, ಇದರ ಹಿಂದೆ ಶಾಸಕ ರಘುಪತಿ ಭಟ್ ಕೈವಾಡವಿದೆ ಎಂದು ಆರೋಪಿಸಲಾಗಿದೆ.
ಫೆ.21ರಂದು ರಾತ್ರಿ ಬೈಕಿನಲ್ಲಿ ಬಂದ ದೀಪಕ್ ಕುಮಾರ್ ಹಾಗೂ ಇತರರು ಹೊಟೇಲಿಗೆ ಕಲ್ಲು ತೂರಾಟ ನಡೆಸಿ ಕಿಟಕಿ ಗಾಜನ್ನು ಪುಡಿಗೈದು, ಬಳಿಕ ತನಗೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆಂದು ಸೈಫ್ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ಸಂಬಂಧ ಈವರೆಗೆ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಸಶಸ್ತ್ರ ಮೀಸಲು ಪಡೆಯ ತುಕಡಿಯನ್ನು ನಿಯೋಜಿಸಲಾಗಿದೆ.
ಹೊಟೇಲಿಗೆ ದಾಳಿ ಹಾಗೂ ವಿದ್ಯಾರ್ಥಿನಿಯ ಸಹೋದರನ ಹಲ್ಲೆಯ ಹಿಂದೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸಿ, ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಮುಂದೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಸಿಎಫ್ ಐ ಉಡುಪಿ ಅಧ್ಯಕ್ಷ ಆಸೀಲ್ ಅಕ್ರಂ ಎಚ್ಚರಿಕೆ ನೀಡಿದ್ದಾರೆ.