ಇತ್ತೀಚಿನ ಸುದ್ದಿ
ಮಲೆನಾಡಲ್ಲಿ ಮತ್ತೆ ಮಳೆ ಅಬ್ಬರ: ಬೆಳೆ ಕಳೆದುಕೊಳ್ಳುವ ಆತಂಕದಲ್ಲಿ ಕೃಷಿಕರು
03/12/2021, 10:29
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸಂಪೂರ್ಣ ಬಿಡುವು ನೀಡಿದ್ದ ವರುಣದೇವ ಮತ್ತೆ ಅಬ್ಬರಿಸಿ ಬೊಬ್ಬರಿದಿದ್ದಾನೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸುತ್ತಮುತ್ತ ಸುಮಾರು 2 ತಾಸಿಗೂ ಹೆಚ್ಚು ಹೊತ್ತು ಭಾರೀ ಮಳೆ ಸುರಿದಿದೆ. ಕೊಟ್ಟಿಗೆಹಾರ, ಚಾರ್ಮಾಡಿಘಾಟ್, ಬಣಕಲ್, ಬಾಳೂರು ಸುತ್ತಮುತ್ತ ಏಕಾಏಕಿ ಶುರುವಾದ ಮಳೆ ಜನಜೀವನವನ್ನ ಹೈರಾಣಾಗುವಂತೆ ಮಾಡಿದೆ.
ಮಳೆ ನೀರು ರಸ್ತೆಯಲ್ಲಿ ನದಿಯಂತೆ ಹರಿದಿದ್ದರಿಂದ ವಾಹನ ಸವಾರರು ವಾಹನ ಓಡಿಸೋದಕ್ಕೂ ಪರದಾಟ ನಡೆಸಿದ್ದಾರೆ. ಮಲೆನಾಡು ಭಾಗದಲ್ಲಿ ಕಳೆದ ಎರಡು ತಿಂಗಳಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ಅಡಿಕೆ-ಕಾಫಿ-ಮೆಣಸು ಬೆಳೆಗಾರರು ಬೆಳೆಯನ್ನ ಒಣಗಿಸಲಾಗದೆ ಕಂಗಾಲಾಗಿದ್ದರು. ಕೆಲವರು ಬೆಳೆಯನ್ನ ಕಟಾವು ಮಾಡಲಾಗದೆ ಹಾಗೇ ಬಿಟ್ಟಿದ್ದರು. ಹಲವರು ಹೆಚ್ಚಿನ ಕೂಲಿ ನೀಡಿ ಮಳೆಯಲ್ಲಿ ನೆನೆದುಕೊಂಡೇ ಕಾಫಿಯನ್ನ ಕೀಳಿಸಿದ್ದರು. ಕೆಲ ಸಣ್ಣ ಬೆಳೆಗಾರರು ತೋಟದಲ್ಲಿ ಕಸ ಹೊಡೆದು ಉದುರಿದ್ದ ಕಾಫಿಯನ್ನ ಆಯ್ದು ಮನೆಗೆ ತಂದಿದ್ದರು. ಮತ್ತಲವರು ಕಾಫಿಯನ್ನ ಗಿಡದಲ್ಲೇ ಬಿಟ್ಟಿದ್ದರು. ಕೆಲ ಹಳ್ಳಿಗರು ಕಾಫಿ-ಅಡಿಕೆಯನ್ನ ದೊಡ್ಡ-ದೊಡ್ಡ ಒಲೆಗಳನ್ನ ನಿರ್ಮಾಣ ಮಾಡಿ ಒಲೆ-ಗ್ಯಾಸ್‍ಗಳ ಮೇಳೆ ದೊಡ್ಡ ಬಾಂಡಲಿಗಳನ್ನ ಇಟ್ಟು ಕಾಫಿ-ಅಡಿಕೆಯನ್ನ ಒಣಗಿಸಿದ್ದರು. ಕಳೆದ ನಾಲ್ಕೈದು ದಿನದಿಂದ ಮಳೆ ಬಿಡುವು ನೀಡಿದ್ದ ಪರಿಣಾಮ ಬೆಳೆಗಾರರು ನಿಟ್ಟುಸಿರು ಬಿಟ್ಟು ಬೆಳೆಯನ್ನ ಒಣಗಿಸೋದಕ್ಕೆ ಮುಂದಾಗಿದ್ದರು. ಆದರೀಗ, ಮತ್ತೆ ಏಕಾಏಕಿ ಆರಂಭವಾದ ಮಳೆ ಧಾರಾಕಾರವಾಗಿ ಸುರಿದ ಪರಿಣಾಮ ಅಂಗಳದಲ್ಲಿದ್ದ ಬೆಳೆ ಮೇಲೆ ನೀರು ನುಗ್ಗಿದ್ದು ಬೆಳೆಗಾರರು ಮತ್ತೆ ಆತಂಕಕ್ಕೀಡಾಗಿದ್ದಾರೆ. ಈ ಬಾರಿ ಕಾಫಿಗೆ ಉತ್ತಮ ಬೆಲೆ ಇದೆ. ಆದರೆ, ಬೆಳೆ ಇಲ್ಲ. 50 ಕೆ.ಜಿ. ಕಾಫಿ ಮೂಟೆಗೆ 15 ರಿಂದ 17 ಸಾವಿರದವೆಗೆ ಇದೆ. ಆದರೆ, ಈ ವರ್ಷ ಬೆಳೆಯೇ ಇಲ್ಲ. ಆರಂಭದಲ್ಲಿ ಉತ್ತಮವಾಗಿದ್ದ ಫಸಲು ಮಳೆ, ಹವಾಮಾನ ವೈಪರಿತ್ಯದಿಂದ ಗಿಡದಲ್ಲಿ ಇದ್ದದ್ದಕ್ಕಿಂತ ಜಾಸ್ತಿ ಮಣ್ಣಲ್ಲಿ ಕೊಳೆದು ಗೊಬ್ಬರವಾಗಿದ್ದೇ ಹೆಚ್ಚು. ಇರೋ ಬೆಳೆಯನ್ನ ಬೆಳೆಗಾರರು ಹೋರಾಡಿ ಉಳಿಸಿಕೊಳ್ಳುತ್ತಿದ್ದಾರೆ. ಈಗ ಮತ್ತೆ ಮಳೆ ಆರಂಭವಾಗಿದ್ದು ಇರೋ ಬೆಳೆಗೂ ಮಳೆರಾಯ ಮಗ್ಗಲ ಮುಳ್ಳಾಗುತ್ತಾನಾ ಎಂದು ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.