ಇತ್ತೀಚಿನ ಸುದ್ದಿ
ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ; ಬಂಡವಾಳ ಒದಗಿಸುವ ಪ್ರಸ್ತಾವನೆ ಸರಕಾರದ ಮುಂದಿಲ್ಲ: ಸಚಿವ ಶಿವಾನಂದ ಎಸ್ ಪಾಟೀಲ್ ಸ್ಪಷ್ಟನೆ
14/12/2024, 13:47
ಬೆಳಗಾವಿ (reporterkarnataka.com):ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಸರ್ಕಾರದ ವತಿಯಿಂದ ರೂ.50 ಕೋಟಿ ಷೇರು ಬಂಡವಾಳ ಒದಗಿಸುವ ಯಾವುದೆ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್ ಪಾಟೀಲ್ ಸ್ಪಷ್ಟ ಪಡಿಸಿದರು.
ಬೆಳಗಾವಿ ಸುವರ್ಣಸೌಧಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಮೇಲಿಂತೆ ಸಚಿವರು ಉತ್ತರಿಸಿದರು.
ರಾಜ್ಯ ಸರ್ಕಾರ ಸರ್ಕಾರಿ ಸ್ವಾಮ್ಯದ ದಿ ಮೈಸೂರು ಷುಗರ್ ಕಂಪನಿ ಹೊರತು ಪಡಿಸಿ ಯಾವುದೇ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ರಾಜ್ಯ ಸರ್ಕಾರದಿಂದ ಷೇರು ಬಂಡವಾಳ ಅಥವಾ ಅನುದಾನ ನೀಡುವ ನೀತಿ ಸರ್ಕಾರದ ಮುಂದೆ ಇರುವುದಿಲ್ಲ. ಮಲಪ್ರಭಾ ಸಕ್ಕರೆ ಕಾರ್ಖಾನೆಯು ಚುನಾಯಿತ ಆಡಳಿತ ಮಂಡಳಿಯನ್ನು ಹೊಂದಿದೆ. ಕಾರ್ಖಾನೆಯ ಕಾರ್ಯನಿರ್ವಹಣೆಗೆ ಅಗತ್ಯವಾದ ಸಂಪನ್ಮೂಲ ಕ್ರೋಢಿಕರಿಸುವುದು ಆಡಳಿತ ಮಂಡಳಿ ಜವಬ್ದಾರಿಯಾಗಿದೆ. ಆರ್ಥಿಕ ಸಂಕಷ್ಟದಿAದ ಹಾಗೂ ಇತರೆ ಆಡಳಿತಾತ್ಮಕ ಕಾರಣಗಳಿಂದ ಸ್ಥಗಿತಗೊಂಡಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ದೀರ್ಘಾವಧಿಯ ಮೆಲೆ ಖಾಸಗಿಯವರಿಗೆ ಗುತ್ತಿಗೆ ನೀಡಿ ಪುನಶ್ಚೇತನಗೊಳಿಸಬಹುದು. ಈ ಬಗ್ಗೆ ಕಾರ್ಖಾನೆ ಸಾಮಾನ್ಯ ಸಭೆ ಮತ್ತು ಆಡಳಿತ ಮಂಡಳಿ ಸಭೆ ಸೂಕ್ತ ತೀರ್ಮಾನ ಕೈಗೊಂಡು ಪ್ರಸ್ತಾವನೆ ಸಲ್ಲಿಸಿದರೆ ಸರ್ಕಾರ ಪರಿಶೀಲನೆ ನಡೆಸುವುದು ಎಂದು ಸಚಿವ ಶಿವಾನಂದ ಎಸ್ ಪಾಟೀಲ್ ಹೇಳಿದರು.
*ಕೋಲ್ಡ್ ಸ್ಟೋರೇಜ್ ನಿರ್ಮಾಣ: ಎ.ಪಿ.ಎಂ.ಸಿ ಸ್ಥಳ ಲೀಜಿಗೆ*
ಅರಸೀಕೆರೆಯ ಹಬ್ಬನಘಟ್ಟ ಕಾವಲ್(ಗೀಜಿಹಳ್ಳಿ) ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಖಾಸಗಿಯವರು ಕೋಲ್ಡ್ ಸ್ಟೋರೇಜ್ ನಿರ್ಮಿಸಿ, ನಿರ್ವಹಣೆ ಮಾಡಲು ಮುಂದೆ ಬಂದರೆ ಕೃಷಿ ಮಾರುಕಟ್ಟೆ ಸ್ಥಳವನ್ನು ಲೀಜಿಗೆ ನೀಡುವುದಾಗಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್ ಪಾಟೀಲ್ ಸದನದಲ್ಲಿ ಹೇಳಿದರು.
ಬೆಳಗಾವಿ ಸುವರ್ಣಸೌಧಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಶುಕ್ರವಾರ ಪ್ರಶ್ನೋತ್ತರ ಕಲಾಪದಲ್ಲಿ, ಅರಸಿಕೆರೆ ಶಾಸಕ ಶಿವಲಿಂಗೇಗೌಡ.ಕೆ.ಎ. ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು.
ಹಬ್ಬನಘಟ್ಟ ಕಾವಲ್ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ರೂ.5 ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪಿಸಲು ಹೆಚ್ಚುವರಿ ಅನುದಾನ ಕೋರಿ ಹಣಕಾಸು ಇಲಾಖೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಮಧ್ಯಯೇ ಖಾಸಗಿಯವರು ಮುಂದೆ ಬಂದರೆ ಸ್ಥಳ ನೀಡುವುದಾಗಿ ಸಚಿವ ಶಿವಾನಂದ ಎಸ್ ಪಾಟೀಲ್ ತಿಳಿಸಿದರು.
2024-25ನೇ ಸಾಲಿನಲ್ಲಿ ಆರ್ಥಿಕ ಇಲಾಖೆ ಎ.ಪಿ.ಎಂ.ಸಿಗಳಲ್ಲಿ ಕೋಲ್ಡ್ ಸ್ಟೋರೇಜ್ ಮತ್ತು ಇನ್ನಿತರ ಮೂಲಭೂತ ಸೌಕರ್ಯ ಒದಗಿಸಲು ರೂ.144.75 ಕೋಟಿ ಅನುದಾನ ಒದಗಿಸಿತ್ತು. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯರು, ಸಚಿವರು, ಶಾಸಕರುಗಳಿಂದ ರೈತರ ಬೆಳೆದ ಬೆಳಗೆ ಯೋಗ್ಯ ದರ ಮತ್ತು ಮಾರುಕಟ್ಟೆ ಒದಗಿಸಲು, ಮಾರುಕಟ್ಟೆಗೆ ಬರುವ ಹೆಚ್ಚಿನ ಆವಕಗಳನ್ನು ಶೇಖರಿಸಲು ಹೆಚ್ಚಿನ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಿದ್ದರು. ಆದ್ದರಿಂದ ರೂ.354.75 ಕೋಟಿಗಳ ಹೆಚ್ಚುವರಿ ಅನುದಾನ ಮಂಜೂರು ಮಾಡುವಂತೆ ಆರ್ಥಿಕ ಇಲಾಖೆ ಕೋರಲಾಗಿದೆ ಎಂದು ಸಚಿವ ಶಿವಾನಂದ ಎಸ್ ಪಾಟೀಲ್ ಮಾಹಿತಿ ನೀಡಿದರು.
ಶಾಸಕ ಶಿವಲಿಂಗೇಗೌಡ.ಕೆ.ಎA ಮಾತನಾಡಿ ಪದವಿ ಪಡೆದ ಹಲವು ಜನರು ಇಂದು ಪಶುಸಂಗೋಪನೆ ಹಾಗೂ ತೋಟಗಾರಿಕೆ ಕಡೆಗೆ ಮುಖ ಮಾಡುತ್ತಿದ್ದಾರೆ. ಇವರು ಉತ್ಪಾದಿಸಿದ ತೋಟಗಾರಿಕೆ ಬೆಳೆಗಳಿಗೆ ಸೂಕ್ತ ಬೆಳೆ ಲಭಿಸಿದೇ ನಿರಾಶೆ ಹೊಂದುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ಒಮ್ಮೆಗೆ ಹೆಚ್ಚಿನ ದಾಸ್ತಾನು ಬಂದರೆ ಸಂಗ್ರಹಿಸಿ ಇಡಲು ಯಾವುದೇ ವ್ಯವಸ್ಥೆಗಳು ಇಲ್ಲ. ಆದ್ದರಿಂದ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡುವುದು ಅಗತ್ಯವಾಗಿದೆ ಎಂದು ಸಚಿವ ಶಿವಾನಂದ ಎಸ್ ಪಾಟೀಲ್ ಮನವಿ ಮಾಡಿದರು.