ಇತ್ತೀಚಿನ ಸುದ್ದಿ
ಮಳಲಿ ಮಸೀದಿ ವಿವಾದ: ವಿಚಾರಣೆ ಜೂ.6 ಕ್ಕೆ ಮುಂದೂಡಿದ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ
02/06/2022, 10:43
ಮಂಗಳೂರು(reporterkarnataka com): ಮಳಲಿಯ ಮಸೀದಿ ನವೀಕರಣ ವೇಳೆ ದೇವಾಲಯ ಮಾದರಿ ಪತ್ತೆಯಾಗಿವೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಜೂ.6ಕ್ಕೆ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮುಂದೂಡಿದೆ.
ಸಿವಿಲ್ ನ್ಯಾಯಾಲಯದಲ್ಲಿ ಮಂಗಳವಾರ ಈ ವಿಚಾರಣೆ ಆರಂಭವಾಗಿದ್ದು, ಬುಧವಾರವೂ ಮುಂದುವರಿಯಿತು. ಜ್ಞಾನವಾಪಿ ಮಾದರಿಯಲ್ಲಿ ಮಳಲಿ ಮಸೀದಿಯಲ್ಲೂ ಉತ್ಖನನಕ್ಕೆ ಆದೇಶ ನೀಡಬೇಕು ಎಂದು ವಿಶ್ವ ಹಿಂದು ಪರಿಷತ್ ಮನವಿ ಮಾಡಿದೆ. ಆದರೆ ವಿಹಿಂಪ ಅರ್ಜಿಯನ್ನು ವಜಾಗೊಳಿಸಬೇಕು ಎನ್ನುವುದು ಮಸೀದಿ ಆಡಳಿತ ಮಂಡಳಿ ಪರ ವಾದ ಮಂಡಿಸಲಾಗಿದೆ.
ಜ್ಞಾನವಾಪಿ ಮಾದರಿಯಲ್ಲಿ ಮಳಲಿ ಮಸೀದಿಯಲ್ಲೂ ಸರ್ವೇ ಮತ್ತು ತನಿಖಾ ಆಯೋಗ ನೇಮಕ ಮಾಡುವಂತೆ ವಿಹಿಂಪ ಪರ ವಕೀಲ ಚಿದಾನಂದ ಕೆದಿಲಾಯ ಮಂಗಳವಾರ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಬುಧವಾರ ಮುಂದುವರಿದ ವಿಚಾರಣೆಯಲ್ಲಿ ಪ್ರತಿವಾದ ಮಂಡನೆ ಮಾಡಿದ ಮಸೀದಿ ಆಡಳಿತ ಮಂಡಳಿ ಪರ ವಕೀಲರು, ಮಳಲಿ ಮಸೀದಿಗೆ ನೂರಾರು ವರ್ಷಗಳ ಇತಿಹಾಸವಿದೆ. ಇದೇ ಜಾಗದಲ್ಲಿ ದಫನ ಭೂಮಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವುದಕ್ಕೆ ದಾಖಲೆಗಳಿವೆ. ಮೇಲಾಗಿ ಇದು ವಕ್ಫ್ ಆಸ್ತಿಯಾಗಿ ಸರಕಾರಿ ದಾಖಲೆಗಳಲ್ಲೂ ಉಲ್ಲೇಖವಾಗಿದೆ. ಗ್ರಾಮ ಪಂಚಾಯತ್ ಅನುಮತಿ ಪಡೆದೇ ನವೀಕರಣ ಮಾಡಲು ತೊಡಗಿದ್ದಾರೆ. ಮಸೀದಿ ಇತಿಹಾಸಕ್ಕೆ ಪೂರಕ ದಾಖಲೆಗಳು ಇರುವುದರಿಂದ ವಿಹಿಂಪದ ಸರ್ವೇ ಮನವಿ ತಿರಸ್ಕರಿಸಬೇಕು ಎಂದು ವಾದಿಸಿದರು.
ಈ ಮಸೀದಿ ವಿಚಾರವನ್ನು ಜ್ಞಾನವಾಪಿ ಪ್ರಕರಣಕ್ಕಾಗಲೀ, ಅಯೋಧ್ಯೆಗಾಗಲೀ ಹೋಲಿಕೆ ಮಾಡುವುದು ಸರಿಯಲ್ಲ ಎಂದು ವಾದಿಸಿದ
ವಕೀಲರು, ಅಯೋಧ್ಯೆ ವಿಚಾರದಲ್ಲಿ ರಾಮನ ಜನ್ಮಸ್ಥಾನದ ವಿಚಾರ ಇತ್ತು. ಆದರೆ ಮಳಲಿಯಲ್ಲಿ ಅಂತಹ ಯಾವ ವಿಚಾರವೂ ಇಲ್ಲ. ಮಳಲಿಯಲ್ಲಿ ಯಾವ ದೇವರಿದ್ದರು, ಅದರ ಇತಿಹಾಸ ಏನು ಎಂಬ ಬಗ್ಗೆ ಅರ್ಜಿದಾರರು ಸಾಕ್ಷ್ಯ ನೀಡಿಲ್ಲ. ಆದರೆ ಅಲ್ಲಿ ೭೦೦ ವರ್ಷಗಳಿಂದ ಮಸೀದಿ ಇತ್ತು ಎನ್ನುವುದಕ್ಕೆ ದಾಖಲೆ ಇದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಮಸೀದಿ ಆಡಳಿತ ಮಂಡಳಿ ಪರ ವಕೀಲರ ವಾದಕ್ಕೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ ವಿಹಿಂಪ ಪರ ವಕೀಲರು, ಇಸ್ಲಾಂ ನಿಯಮಗಳ ಪ್ರಕಾರ ನಮಾಜ್‌ನ್ನು ಎಲ್ಲಿ ಬೇಕಾದರೂ ಮಾಡಬಹುದು. ನಿಗದಿತ ಜಾಗದಲ್ಲೇ ಮಾಡಬೇಕೆಂದಿಲ್ಲ. ಹಾಗಾಗಿ ವಿವಾದಿತ ಜಾಗದ ಸರ್ವೇ ಮಾಡಲು ಕೋರ್ಟ್ ಆದೇಶ ಮಾಡಬೇಕು ಎಂದು ಮನವಿ ಮಾಡಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಶರು ಮುಂದಿನ ವಿಚಾರಣೆಯನ್ನು ಜೂ.6ಕ್ಕೆ ನಿಗದಿಪಡಿಸಿದ್ದಾರೆ.