ಇತ್ತೀಚಿನ ಸುದ್ದಿ
ಮಕ್ಕಿ ಕಾ ಮಕ್ಕಿಯಂತೆ ಇರಬೇಡಿ: ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಖಡಕ್ ವಾರ್ನಿಂಗ್
08/05/2022, 23:36
ಬೆಂಗಳೂರು(reporterkarnataka.com): ಜಿಲ್ಲಾಧಿಕಾರಿಗಳೇ ಸದಾ ಗಡಿಯಾರದತ್ತಲೇ ಗಮನವಿಡಬೇಡಿ, ಮನಸ್ಸಿಟ್ಟು ಕೆಲಸ ಮಾಡಿ._ ಮಕ್ಕಿ ಕಾ ಮಕ್ಕಿಯಂತೆ ಇರಬೇಡಿ. ಇಂತಹ ಧೋರಣೆಯಿಂದ ಯಾವುದೇ ಪ್ರಯೋಜನವಾಗದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ಆಗಿ ಹೇಳಿದ್ದಾರೆ.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ ಕರೆದಿದ್ದ ಡಿಸಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಐದು ವರ್ಷಗಳ ಅವಧಿಯ ಚುನಾಯಿತ ಸರ್ಕಾರದ ಕೊನೆಯ ವರ್ಷವಿದು. ಜಿಲ್ಲಾ ಹಂತದಲ್ಲಿ ಡಿಸಿ, ಸಿಇಒಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡಿದರೆ ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ರೂಪುಗೊಳ್ಳುತ್ತವೆ._ ಅದಕ್ಕಿಂತಲೂ ಮುಖ್ಯವಾಗಿ ದೀನ-ದಲಿತರು, ಜನಸಾಮಾನ್ಯರ ಅಹವಾಲಿಗೆ ಸ್ಪಂದನೆ, ಜನಪರ ಯೋಜನೆಗಳ ಲಾಭ ಫಲಾನುಭವಿಗಳಿಗೆ ಸಕಾಲಕ್ಕೆ ತಲುಪಿಸಬೇಕು ಎಂದು ತಾಕೀತು ಮಾಡಿದರು.
ಗ್ರಾಮ ಒನ್ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ . ಸಕಾಲ ಯೋಜನೆ ಬಗ್ಗೆ ಉದಾಸೀನತೆ ಎದ್ದುಕಾಣುತ್ತಿದೆ. ಕೆಳ ಹಂತದ ಅಧಿಕಾರಿಗಳು ನೋಡಿಲ್ಲ, ಮಾಡಿಲ್ಲ ಎಂಬ ಸಬೂಬು ಕೇಳುವುದಿಲ್ಲ. ಸಮಯದ ಪರಿವೆಯಿಲ್ಲದೆ ಕೆಲಸ ಮಾಡಿ, ನಿಮಗಾಗದಿದ್ದರೆ ನಿಮ್ಮ ಜಾಗಕ್ಕೆ ಮತ್ತೊಬ್ಬರು ಬರುತ್ತಾರೆ ಹುಷಾರ್ ಎಂದು ಎಚ್ಚರಿಸಿದರು.