ಇತ್ತೀಚಿನ ಸುದ್ದಿ
ಮಕ್ಕಳ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ: ದ.ಕ.ಜಿಲ್ಲೆ; ಕೊರೊನಾ ಅವಧಿಯಲ್ಲಿ 48 ಪೋಕ್ಸೋ ಪ್ರಕರಣ ದಾಖಲು !!
23/11/2021, 08:51
ಮಂಗಳೂರು(reporterkarnataka.com): ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಯಾನಕ ಸತ್ಯ ಬೆಳಕಿಗೆ ಬಂದಿದೆ. ಇಲ್ಲಿನ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊರೊನಾ ಅವಧಿಯಲ್ಲಿ 48 ಪೋಕ್ಸೋ (ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ) ಪ್ರಕರಣಗಳು ದಾಖಲಾಗಿದೆ. 4 ಮಕ್ಕಳ ನ್ಯಾಯ ಸಂಬಂಧಿತ ಪ್ರಕರಣಗಳು ವರದಿಯಾಗಿವೆ.
ಇದನ್ನು ಜಿಲ್ಲಾ ಪೊಲೀಸ್‌ನ ಹಿರಿಯ ಮಕ್ಕಳ ಕಲ್ಯಾಣ ಅಧಿಕಾರಿ ಡಾ. ಗಾನ ಪಿ.ಕುಮಾರ್ ಬಹಿರಂಗಗೊಳಿಸಿದ್ದಾರೆ. ನಗರದ ಜಿ.ಪಂ. ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಅಹವಾಲು ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಯುನಿಸೆಫ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಕಲಾಖೆ ಮತ್ತು ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಹಕ್ಕುಗಳ ಮಾಸಾಚರಣೆ ಅಂಗವಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಸೈಬರ್ ಅಪರಾಧಗಳಿಗೆ ಮಕ್ಕಳು ಬಲಿಯಾಗುತ್ತಿರುವುದೂ ಕಂಡು ಬಂದಿದೆ. ಮುಖ್ಯವಾಗಿ ಆನ್‌ಲೈನ್ ತರಗತಿ ಸಂದರ್ಭ ಮಕ್ಕಳ ಕೈಗೆ ಮೊಬೈಲ್ ಫೋನ್ ಲಭಿಸಿದ ಪರಿಣಾಮ ಚಾಟಿಂಗ್ ಮೂಲಕ ಬಾಹ್ಯ ವ್ಯಕ್ತಿಗಳು ಸಂಪರ್ಕಕ್ಕೆ ಬಂದು ದುಶ್ಚಟಗಳು ಅಂಟಿಕೊಳ್ಳುತ್ತವೆ. ಫೋನ್ ರಿಚಾರ್ಜ್ ಮಾಡಲು ಅಂಗಡಿಗಳಿಗೆ ತೆರಳಿದ ಸಂದರ್ಭದಲ್ಲಿ ಈ ಮೊಬೈಲ್‌ನಿಂದ ಮಾಹಿತಿಗಳನ್ನು ಬೇರೆಯವರು ಪಡೆದು ದುರ್ಬಳಕೆ ಮಾಡುವಂತಹ ವಿದ್ಯಮಾನಗಳು ನಡೆಯುತ್ತವೆ. ಹಾಗಾಗಿ ಹೆತ್ತವರು ಜಾಗ್ರತೆ ವಹಿಸುವುದರ ಜತೆಗೆ ಮಕ್ಕಳು ಕೂಡ ಎಚ್ಚರಿಕೆಯಿಂದ ಇರಬೇಕು ಎಂದು ಡಾ. ಗಾನ ಪಿ. ಕುಮಾರ್ ವಿವರಿಸಿದರು.
ಕೊರೊನಾ ಸಂದರ್ಭ ಮಕ್ಕಳು ಅನುಭವಿಸಿದ ನೋವುಗಳನ್ನು ಸಾರ್ವಜನಿಕವಾಗಿ ಆಲಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವ ಸಲುವಾಗಿ ರಾಜ್ಯದಲ್ಲಿ ಹಮ್ಮಿಕೊಂಡಿರುವ ಈ ಸಾರ್ವಜನಿಕ ಅಹವಾಲು ವಿಚಾರಣೆ ಕಾರ್ಯಕ್ರಮ ದೇಶದಲ್ಲಿಯೇ ಒಂದು ಹೊಸ ಪ್ರಯೋಗ ಎಂದು ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಿ. ಶಂಕರಪ್ಪ ಹೇಳಿದರು.
ಮಕ್ಕಳು ಕೌಟುಂಬಿಕವಾಗಿ, ಸಮುದಾಯ ಹಂತದಲ್ಲಿ ಹಾಗೂ ಶೈಕ್ಷಣಿಕವಾಗಿ ಅನುಭವಿಸಿದ ಸಮಸ್ಯೆ ಗಳನ್ನು ಆಲಿಸಿ ಅವುಗಳ ಬಗ್ಗೆ ಚರ್ಚಿಸಿ, ಜಿಲ್ಲಾ ಮಟ್ಟದಲ್ಲಿ ಪರಿಹಾರ ಸೂಚಿಸಲು ಪ್ರಯತ್ನಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಪರಿಹಾರವಾಗದಿದ್ದರೆ ವಲಯ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿಯೂ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಡಿಡಿಪಿಐ ಮಲ್ಲೇಸ್ವಾಮಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕಿಶೋರ್ ಕುಮಾರ್ ಎಂ., ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿ’ಸೋಜ ಉಪಸ್ಥಿತರಿದ್ದರು.