ಇತ್ತೀಚಿನ ಸುದ್ದಿ
ಭಾರತೀಯ ವೈದ್ಯ ಪದ್ಧತಿಯಾದ ಆಯುರ್ವೇದವನ್ನು ಇನ್ನಷ್ಟು ಜನಪ್ರಿಯಗೊಳಿಸಿ: ವೈದ್ಯ ವಿದ್ಯಾರ್ಥಿಗಳಿಗೆ ಎಸಿಪಿ ವಿಜಯಕ್ರಾಂತಿ ಕಿವಿಮಾತು
11/10/2025, 22:31

ಚಿತ್ರ:ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarkarnataka.com): ಭಾರತೀಯ ವೈದ್ಯ ಪದ್ಧತಿಯಯಾಗಿರುವ ಆಯುರ್ವೇದ ವನ್ನು ಇನ್ನಷ್ಟು ಜನ ಪ್ರಿಯ ಗೊಳಿಸಲು ವೈದ್ಯ ವಿದ್ಯಾರ್ಥಿಗಳು ಮುಂದಾಗ ಬೇಕೆಂದು ಮಂಗಳೂರು ದಕ್ಷಿಣ ವಲಯ ಸಹಾಯಕ ಪೊಲೀಸ್ ಆಯುಕ್ತೆ ವಿಜಯಕ್ರಾಂತಿ ಹೇಳಿದರು.
ಶನಿವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಕರ್ನಾಟಕ ಎಜ್ಯುಕೇಶನಲ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್ ನ ಅಂಗಸಂಸ್ಥೆ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ 16ನೇ ಪದವಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ
ಅವರು ಮಾತನಾಡಿದರು.
ಮಾದಕ ವ್ಯವಸನ, ಸೈಬರ್ ವಂಚನೆಯ ಜಾಲಗಳೂ ವಿದ್ಯಾರ್ಥಿಗಳನ್ನು, ಉದ್ಯೋಗಾಕಸ್ತರನ್ನು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿವೆ. ಇವುಗಳನ್ನು ಸಮರ್ಥವಾಗಿ ಎದುರಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದ್ದು,ಈಗಿನ ಡಿಜಿಟಲ್ ಯುಗದಲ್ಲಿ ಜವಾಬ್ದಾರಿಯುತ ವಾಗಿರಬೇಕು. ಪೊಲೀಸ್ ಇಲಾಖೆಯೂ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ದ.ಕ. ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೊಹಮ್ಮದ್ ಇಕ್ಬಾಲ್ ಅವರು ಮಾತನಾಡಿ, ಪ್ರತಿಯೊಂದು ವೈದ್ಯ ಪದ್ಧತಿಗೂ ತನ್ನದೇ ಆದ ಮಹತ್ವವಿದೆ. ಆದ್ದರಿಂದ ಆಯುರ್ವೇದ ಎನ್ನುವುದು ಎರಡನೇ ದರ್ಜೆಯ ವೈದ್ಯ ಪದ್ಧತಿ ಅಲ್ಲ. ಶೇ.70ರಷ್ಟು ರೋಗಗಳನ್ನುಗುಣಪಡಿಸುವ ಶಕ್ತಿ ಆಯುರ್ವೇದ ಪದ್ಧತಿಗೆ ಇದೆ ಎಂದು ನುಡಿದರು.
ಕರ್ನಾಟಕ ಎಜ್ಯುಕೇಶನಲ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್ ನ ಅಧ್ಯಕ್ಷ ಡಾ. ರಜನೀಶ್ ಸೊರಕೆ ಅವರು ಅಧ್ಯಕ್ಷತೆ ವಹಿಸಿದ್ದರು.
ಎಸ್ ಸಿಎಸ್ ಸಮೂಹ ಸಂಸ್ಥೆಗಳ ಆಡಳಿತ ಅಧಿಕಾರಿ ಯು.ಕೆ. ಖಾಲಿದ್, ವೈದ್ಯಕೀಯ ಅಧೀಕ್ಷಕ ಡಾ. ಉದಯ್ ಡಿ.ಕೆ., ಪ್ರಾಂಶುಪಾಲ ಡಾ. ಸಜಿತ್ ಎಂ. ಉಪಸ್ಥಿತರಿದ್ದರು.
ಪದವಿ ಪಡೆದ ವಿದ್ಯಾರ್ಥಿಗಳಿಗೆ ಡಾ. ಸುಚಿತ್ರಾ ಪ್ರತಿಜ್ಞಾವಿಧಿ ಬೋಧಿಸಿದರು. ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಬಹುಮಾನಗಳನ್ನು ವಿತರಿಸಲಾಯಿತು.
ದ್ರವ್ಯಗುಣ ವಿಭಾಗ ಮುಖ್ಯಸ್ಥೆ, ನಿಕಟಪೂರ್ವ ಪ್ರಾಂಶುಪಾಲೆ ಡಾ. ಸ್ವಪ್ನಾ ವಾರ್ಷಿಕ ವರದಿ ಮಂಡಿಸಿದರು. ಉಪ ಪ್ರಾಂಶುಪಾಲ ಡಾ. ಅಜಿತ್ ಕಾಮತ್ ಸ್ವಾಗತಿಸಿದರು. ಕಾಯಚಿಕಿತ್ಸಾ ವಿಭಾಗ ಮುಖ್ಯಸ್ಥೆ ಡಾ. ವಹಿದಾ ಬಾನು ವಂದಿಸಿದರು. ಡಾ. ಜಿ. ಶ್ವೇತಾ ಪ್ರಭು ಮತ್ತು ಡಾ. ಕೃತಿ ಕಾರ್ಯಕ್ರಮ ನಿರೂಪಿಸಿದರು.