ಇತ್ತೀಚಿನ ಸುದ್ದಿ
ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಮಾಜಮುಖಿಯಾಗಿ ಬಳಸಬೇಕು: ಆಳ್ವಾಸ್ ನಲ್ಲಿ ತೇಜಸ್ವಿನಿ ಅನಂತ ಕುಮಾರ್
07/03/2024, 22:17
ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಮಾಜಮುಖಿಯಾಗಿ ಬಳಸಬೇಕು: ಆಳ್ವಾಸ್ ನಲ್ಲಿ ತೇಜಸ್ವಿನಿ ಅನಂತ ಕುಮಾರ್
*ಆಳ್ವಾಸ್ ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ*
*ಆಳ್ವಾಸ್ ಮಹಿಳಾ ವೇದಿಕೆಯ ಉದ್ಘಾಟನೆ*
*ಲಾಂಛನ ಅನಾವರಣ, ಸಾಧಕರಿಗೆ ಸನ್ಮಾನ*
ಮೂಡುಬಿದಿರೆ(reporterkarnataka.com): ಮಹಿಳೆಯರಿಗೆ ಶಕ್ತಿಯನ್ನು ತುಂಬಲು ಸಮಾಜ ಪೂರಕವಾದ ವಾತಾವರಣ ನಿರ್ಮಿಸಬೇಕು ಮತ್ತು ಆಕೆಯೂ ತನ್ನ ಸಾಮರ್ಥ್ಯವನ್ನು ಸಮರ್ಥ ಹಾಗೂ ಸಮಾಜಮುಖಿಯಾಗಿ ಬಳಸಿಕೊಳ್ಳಬೇಕು ಎಂದು ಬೆಂಗಳೂರು ಅದಮ್ಯ ಚೇತನ ಫೌಂಡೇಷನ್ ಸ್ಥಾಪಕಾಧ್ಯಕ್ಷೆ ತೇಜಸ್ವಿನಿ ಅನಂತ ಕುಮಾರ್ ಹೇಳಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ -2024 ಪ್ರಯುಕ್ತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಳ್ವಾಸ್ ಕಾಲೇಜಿನ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ ಆಳ್ವಾಸ್ ಮಹಿಳಾ ವೇದಿಕೆ "ಸಕ್ಷಮಾ" ಉದ್ಘಾಟನೆ, ಲಾಂಛನ ಅನಾವರಣ ಮತ್ತು ವೈವಿಧ್ಯಮಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಿಂದಲೂ ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಯುದ್ಧಭೂಮಿವರೆಗೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲು ಶಕ್ತಳಾಗಿದ್ದಳು. ನಾವು ಆಕೆಯ ಕ್ಷಮತೆಯ ಬಗ್ಗೆ ಪ್ರಶ್ನಿಸುವ ಆಗಿಲ್ಲ ಎಂದು ಅವರು ನುಡಿದರು.
ಪ್ರಸ್ತುತ ಗ್ರಾಮೀಣ ಮಕ್ಕಳಲ್ಲೂ ಪರಿಸರ ಆಸಕ್ತಿ ಇಳಿಕೆಯಾಗುತ್ತಿದೆ. ಹೀಗಾಗಿ ಶಿಕ್ಷಣದಲ್ಲಿ ಪರಿಸರದ ಜಾಗೃತಿ ಅವಶ್ಯ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಲಾಂಛನ ಅನಾವರಣಗೊಳಿಸಿ, ಪೋಷಕರು ಲಿಂಗ ತಾರತಮ್ಯ ಮಾಡಬಾರದು. ಲಿಂಗ ತಾರತಮ್ಯದ ಮನಸ್ಥಿತಿಯನ್ನು ನಿವಾರಿಸಿದಾಗ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಮಂಗಳೂರಿನ ಸಿಸಿಬಿ ಪೊಲೀಸ್ ಸಹಾಯಕ ಆಯುಕ್ತೆ ಗೀತಾ ಡಿ. ಕುಲಕರ್ಣಿ ಮಾತನಾಡಿ, ತಂತ್ರಜ್ಞಾನದ ದಾಸರಾಗದೇ, ಸಮರ್ಥ ಬಳಕೆ ಮಾಡಿದಾಗ ಅಪರಾಧ ಚಟುವಟಿಕೆ ನಿಯಂತ್ರಣ ಸಾಧ್ಯ ಎಂದು ಹೇಳಿದರು
*ಸಾಧಕರಿಗೆ ಸನ್ಮಾನ:* ಎನ್‌ಸೈಕ್ಲೋಪಿಡಿಯಾ ಆಫ್ ಫಾರೆಸ್ಟ್ ಖ್ಯಾತಿಯ ತುಳಸಿ ಗೌಡ, ಸಾಮಾಜಿಕ ಕಾರ್ಯಕರ್ತೆ ಹಿಲ್ಡಾ ರಾಯಪ್ಪನ್, ಪ್ರಾಣಿ ಸಂರಕ್ಷಕಿ ರಜನಿ ಶೆಟ್ಟಿ, ಆಳ್ವಾಸ್ ಕಾಲೇಜಿನ ಹಿರಿಯ ವಿದ್ಯಾರ್ಥಿನಿ, ಸಿವಿಲ್ ನ್ಯಾಯಾಧೀಶೆ ಗೀತಾ ಡಿ., ಇಸ್ರೋ ವಿಜ್ಞಾನಿ ಡಾ.ನಂದಿನಿ, ಚಲನಚಿತ್ರ ನಟಿ ಆಶಾ ಭಟ್ ಅವರನ್ನು ಸನ್ಮಾನಿಸಲಾಯಿತು.
ಬೆಂಗಳೂರಿನ ಟೆಕ್ ಅವಂತ್ ಗಾರ್ಡ್ ಬೋಧನಾ ವಿಜ್ಞಾನ ಮತ್ತು ಶೈಕ್ಷಣಿಕ ಆವಿಷ್ಕಾರದ ಮಖ್ಯಸ್ಥೆ ರೂಪಾ ಅರುಣ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿಯ ಡಾ. ಗ್ರೀಷ್ಮಾ ವಿವೇಕ್ ಆಳ್ವ ಉಪಸ್ಥಿತರಿದ್ದರು.
ಪ್ರಾಧ್ಯಾಪಕಿ ಡಾ ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು.