ಇತ್ತೀಚಿನ ಸುದ್ದಿ
ಮಹಿಳಾ ಸಶಕ್ತಿಕರಣಕ್ಕೆ ಗೃಹಲಕ್ಷ್ಮೀ ಯೋಜನೆಗೆ ಚಾಲನೆ: ಮಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ
30/08/2023, 22:27
ಮಂಗಳೂರು(reporterkarnataka.com): ಬೆಲೆ ಏರಿಕೆ ಹಾಗೂ ಹಣದುಬ್ಬರದ ಪರಿಸ್ಥಿತಿಯಲ್ಲಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದೆ ಎಂದು ವಿಧಾನ ಪರಿಷತ್ ಶಾಸಕ ಮಂಜುನಾಥ್ ಭಂಡಾರಿ ಹೇಳಿದರು.
ಅವರು ಬುಧವಾರ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಮನೆಯೊಡತಿಗೆ ಮಾಸಿಕ 2000 ಸಾವಿರ ರೂ.ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಬೆಲೆ ಏರಿಕೆ ಹಾಗೂ ಹಣದುಬ್ಬರದಿಂದಾಗಿ ಬಡ ಜನರು ತತ್ತರಿಸಿದ್ದರು, ಅಡುಗೆ ಅನಿಲ ಸೇರಿದಂತೆ ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಪರೀತವಾಗಿತ್ತು. ಬದುಕುವುದೇ ದುಸ್ತರವಾಗಿತ್ತು. ಇದನ್ನು ಅವಲೋಕಿಸಿದ ಮುಖಂಡರು ಮಹಿಳಾ ಸಬಲೀಕರಣದ ದೃಷ್ಟಿಯಿಂದ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈ ಯೋಜನೆಯ ಅನುಷ್ಠಾನಗೊಳಿಸುವುದಾಗಿ ಚಿಂತಿಸಿ, ಪ್ರಣಾಳಿಕೆಯಲ್ಲಿ ಸೇರ್ಪಡೆಗೊಳಿಸಿದರು. ಅದರಂತೆ ಇದೀಗ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಇದರಿಂದಾಗಿ ಫಲಾನುಭವಿ ಮಹಿಳೆಯರು ಆರ್ಥಿಕವಾಗಿ ಸಶಕ್ತರಾಗಲಿದ್ದಾರೆ. ಆ ಮೂಲಕ ಅವರು ತಮ್ಮ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ, ಅವರ ಶಾಲೆ-ಕಾಲೇಜುಗಳ ಶುಲ್ಕ ಪಾವತಿಸಬಹುದಾಗಿದೆ, ಆ ಮಕ್ಕಳು ಉತ್ತಮವಾಗಿ ಬೆಳೆದು ಶೈಕ್ಷಣಿಕವಾಗಿ ಸಬಲರಾಗಲಿದ್ದಾರೆ ಎಂದರು.
ರಾಜ್ಯದ 1.30 ಕೋಟಿ ಗೃಹಲಕ್ಷ್ಮಿಯರಿಗೆ ನೇರವಾಗಿ ಹಣ ಬಿಡುಗಡೆ ಮಾಡುವ ಈ ಬೃಹತ್ ಯೋಜನೆಯ ಅನುಷ್ಠಾನವನ್ನು ಇಂದು ವಿಶ್ವವೇ ಬೆರಗಾಗಿ ನೋಡುತಿದೆ. ಇದೊಂದು ಯಶಸ್ವಿ ಕಾರ್ಯಕ್ರಮವಾಗಿದ್ದು, ಯೋಜನೆಯ ಜಾರಿಯಿಂದ ರಾಜ್ಯದ ಮಹಿಳೆಯರ ಜೀವನ ಉತ್ಕೃಷ್ಟ ಮಟ್ಟಕ್ಕೆ ಹೋಗುತ್ತದೆ, ಪಂಚ ಗ್ಯಾರಂಟಿಗಳಲ್ಲಿ ಈಗಾಗಲೇ 4 ಯೋಜನೆಗಳು ಜಾರಿಯಾಗಿದ್ದು ಉಳಿಕೆ ಒಂದು ಯೋಜನೆ ಮುಂದಿನ ದಿನಗಳಲ್ಲಿ ಜಾರಿಯಾಗಲಿದೆ ಎಂದವರು ಹೇಳಿದರು.
ಮಾಜಿ ಶಾಸಕ ಜೆ. ಆರ್. ಲೋಬೊ, ಕಾಂಗ್ರೆಸ್ ಮುಖಂಡರಾದ
ವಿಶ್ವಾಸ್ ಕುಮಾರ್ ದಾಸ್ , ಟಿ.ಕೆ. ಸುಧೀರ್, ಶಾಂತಲಾ ಗಟ್ಟಿ,
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪಾಪ ಭೋವಿ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಅಭಿಷೇಕ್ ಹಾಗೂ ಇತರೆ ಗಣ್ಯರು ವೇದಿಕೆಯಲ್ಲಿದ್ದರು.
ಮೈಸೂರಿನಲ್ಲಿ ನಡೆದ ಚಾಲನಾ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟಿಸಿದರೆ, ರಾಜ್ಯಸಭಾ ಸದಸ್ಯ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ರಿಮೋಟ್ ಒತ್ತುವ ಮೂಲಕ 1.10 ಕೋಟಿ ಮಹಿಳೆಯರಿಗೆ ಮಾಸಿಕ 2,000 ಕೋಟಿ ರೂ. ಡಿಬಿಟಿ ಮೂಲಕ ವರ್ಗಾವಣೆಗೆ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ 33 ಸ್ಥಳಗಳು ಸೇರಿದಂತೆ ಜಿಲ್ಲೆಯ 296 ಸ್ಥಳಗಳಲ್ಲಿ ಗೃಹಲಕ್ಷ್ಮೀ ಯೋಜನೆಯ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯ ಅರ್ಹ 2,38,352 ಫಲಾನುಭವಿಗಳಿಗೆ ಆನ್ಲೈನ್ ಮೂಲಕ ಹಣವನ್ನು ಜಮೆ ಮಾಡಲಾಗಿದೆ.
ನಗರದ ಟೌನ್‍ಹಾಲ್‍ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಾವಿರಾರು ಗೃಹ ಲಕ್ಷ್ಮೀಯರ ದಂಡೇ ಹರಿದು ಬಂತು. ಪುರಭವನದ ಸುತ್ತ ಮುತ್ತ ಹಬ್ಬದ ವಾತಾವರಣ ಮನೆ ಮಾಡಿತ್ತು. ಪ್ರವೇಶ ದ್ವಾರದಲ್ಲಿ ರಂಗೋಲಿಯ ರಂಗು, ಸಬಾಂಗಣ ಅಲಂಕೃತಗೊಂಡಿತ್ತು.