10:50 PM Monday26 - January 2026
ಬ್ರೇಕಿಂಗ್ ನ್ಯೂಸ್
ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:… ಸೋಮವಾರಪೇಟೆ ಕಾಜೂರಿನಲ್ಲಿ ಭಾರೀ ಬೆಂಕಿ ಅವಘಡ: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕ ಬಚಾವ್ ಮಾಡಿದ… ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಉಸ್ತುವಾರಿ ಸಚಿವ ಬೋಸರಾಜ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಾಲದಲ್ಲಿ ಗಣರಾಜ್ಯೋತ್ಸವ: 130ಕ್ಕೂ ಅಧಿಕ ವಾಹನ ಚಾಲಕಿಯರಿಗೆ… ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ

ಇತ್ತೀಚಿನ ಸುದ್ದಿ

50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮಹಾಕಾಳಿಪಡ್ಪು ರೈಲ್ವೆ ಅಂಡರ್‌ಪಾಸ್ ಲೋಕಾರ್ಪಣೆ

26/01/2026, 20:58

ಮಂಗಳೂರು(reporterkarnataka.com): ಸ್ಮಾರ್ಟ್ ಸಿಟಿ ಯೋಜನೆಯಡಿ 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಉಳ್ಳಾಲ ಮತ್ತು ಕಾಸರಗೋಡನ್ನು ಮಂಗಳೂರು ನಗರದ ಕೇಂದ್ರ ಭಾಗದೊಂದಿಗೆ ಸಂಪರ್ಕಿಸುವ, ಜನರ ಬಹುಕಾಲದ ನಿರೀಕ್ಷೆಯ ಮಹಾಕಾಳಿಪಡ್ಪು ರೈಲ್ವೆ ಅಂಡರ್‌ಪಾಸ್ ಉದ್ಘಾಟನೆಗೊಂಡಿದೆ.


ಈ 4-ಲೇನ್ ಅಂಡರ್‌ಪಾಸ್‌ನ್ನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಸಚಿವ ಬೈರತಿ ಸುರೇಶ್, 2018ರಲ್ಲಿ ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಯು.ಟಿ. ಖಾದರ್ ಅವರಿಂದಾಗಿ ಆರಂಭಗೊಂಡ ಈ ಯೋಜನೆ ಇಂದು ಲೋಕಾರ್ಪಣೆಯಾಗಿ ಈ ಭಾಗದ ಸಂಚಾರ ಸುವ್ಯವಸ್ಥೆ ಮತ್ತು ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಲಿದೆ. ನಗರಾಭಿವೃದ್ಧಿ ಇಲಾಖೆಯಿಂದಲೂ 7 ಕೋಟಿ ರೂ. ವೆಚ್ಚದಲ್ಲಿ ಹಲವು ಕಾಮಗಾರಿಗಳನ್ನು ಇಲ್ಲಿ ನಿರ್ವಹಿಸಲಾಗಿದೆ. ಅತ್ಯುತ್ತಮ ಗುಣಮಟ್ಟದಲ್ಲಿ ಕಾಮಗಾರಿ ಕೈಗೊಂಡಿದ್ದೇವೆ ಎಂದು ತಿಳಿಸಿದರು.

*ಮಹಾನಗರ ಪಾಲಿಕೆಗೆ 200 ಕೋಟಿ:*
ಮಂಗಳೂರು ನಗರದಲ್ಲಿ ಇನ್ನೂ ಇಂತಹ ಬಹುನಿರೀಕ್ಷೆಯ ಕಾಮಗಾರಿಗಳಿಗೆ ಹಣ ನೀಡಲು ನಗರಾಭಿವೃದ್ಧಿ ಇಲಾಖೆ ಬದ್ಧವಾಗಿದೆ ಎಂದು ಭರವಸೆ ನೀಡಿದ ಅವರು, ಈಗಾಗಲೇ ರಾಜ್ಯದ 12 ನಗರ ಪಾಲಿಕೆಗಳಿಗೆ 2400 ಕೋಟಿ ರೂ. ಅನುದಾನವನ್ನು ಸಿದ್ದರಾಮಯ್ಯ ಸರ್ಕಾರ ನೀಡಿದೆ. ಮಂಗಳೂರು ಮಹಾನಗರ ಪಾಲಿಕೆಗೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ರಸ್ತೆ, ಚರಂಡಿಗಳ ನಿರ್ಮಾಣ, ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು 200 ಕೋಟಿ ರೂ. ನೀಡಲಾಗಿದೆ. ಈ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳ ಗುದ್ದಲಿಪೂಜೆಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದು, ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರವೇ ಸಿಎಂ ಆಗಮಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.

*ದ.ಕ.ಕ್ಕೆ ಹಲವು ಕೊಡುಗೆ:*
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ಸಂದರ್ಭ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಮಾನ ನೀಡದಿದ್ದರೂ ಸ್ವತಃ ಸಿಎಂ ಸಿದ್ದರಾಮಯ್ಯ ಹಲವು ಬಾರಿ ಇಲ್ಲಿಗೆ ಬಂದು ಅನೇಕ ಅಭಿವೃದ್ಧಿ ಯೋಜನೆಗಳನ್ನು ಕೊಡುಗೆಯಾಗಿ ಲೋಕಾರ್ಪಣೆ ಮಾಡಿದ್ದಾರೆ. ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳು ಆಗಬೇಕಿದ್ದು, ಶೀಘ್ರವೇ ಅವುಗಳನ್ನೂ ಕಾರ್ಯರೂಪಕ್ಕೆ ತರಲಿದ್ದೇವೆ ಎಂದು ಹೇಳಿದರು.
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, 2018ರಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಮಹಾಕಾಳಿಪಡ್ಪು ಅಂಡರ್‌ಪಾಸ್ ಯೋಜನೆ, ಕದ್ರಿ ಸ್ಮಾರ್ಟ್ ರಸ್ತೆ ಇತ್ಯಾದಿ ಹಲವು ಯೋಜನೆಗಳನ್ನು ಮಾಡಲಾಗಿತ್ತು. ಈಗ ಅವೆಲ್ಲವೂ ಸಾಕಾರಗೊಂಡಿವೆ. ಈ ಸಂಪರ್ಕ ರಸ್ತೆಯಿಂದ ಅತೀ ಹೆಚ್ಚು ಪ್ರಯೋಜನ ಸಿಗುವುದು ಉಳ್ಳಾಲದ ಜನರಿಗೆ. ಸಚಿವರು ಮುತುವರ್ಜಿ ವಹಿಸಿ ಅತಿ ಶೀಘ್ರ ಪೂರ್ಣಗೊಳಿಸಿದ್ದಾರೆ. ಇದೇ ರೀತಿ ನಗರದ ಅಭಿವೃದ್ಧಿಗೆ ಹಲವು ಕಡೆಗಳಲ್ಲಿ ಅಂಡರ್‌ಪಾಸ್ ಮಾಡಿದರೆ ಭವಿಷ್ಯದಲ್ಲಿ ಅನುಕೂಲತೆ ಆಗಲಿದೆ ಎಂದರು.
ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಮಾತನಾಡಿದರು. ಮುಖಂಡರಾದ ಸದಾಶಿವ ಉಳ್ಳಾಲ್, ಶಶಿಧರ ಹೆಗ್ಡೆ, ಮಮತಾ ಗಟ್ಟಿ, ಪ್ರವೀಣ್‌ಚಂದ್ರ ಆಳ್ವ, ಪದ್ಮರಾಜ್ ಆರ್. ಪೂಜಾರಿ, ಶಾಹುಲ್ ಹಮೀದ್, ಭಾಸ್ಕರ್ ಕೆ., ಶಾಲೆಟ್ ಪಿಂಟೊ, ಟಿ.ಎಂ. ಶಹೀದ್ ಮತ್ತಿತರರಿದ್ದರು.

*ಮಂಗಳೂರು ಪಾಲಿಕೆಗೆ 3 ತಿಂಗಳಲ್ಲಿ ಚುನಾವಣೆ:*

ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ 6 ನಗರ ಪಾಲಿಕೆಗಳಲ್ಲಿ ಪ್ರಸ್ತುತ ಚುನಾಯಿತ ಸದಸ್ಯರಿಲ್ಲ. ಈ ಎಲ್ಲ ನಗರ ಪಾಲಿಕೆಗಳಿಗೆ ಇನ್ನು ಮೂರು ತಿಂಗಳೊಳಗೆ ಚುನಾವಣೆ ನಡೆಸಲಾಗುವುದು, ಇದಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಭರವಸೆ ನೀಡಿದ್ದಾರೆ.

*ಬೋಳಾರ-ಉಳ್ಳಾಲ ಸೇತುವೆ ನಿರ್ಮಾಣಕ್ಕೆ ಡಿಪಿಆರ್:*
ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಬೋಳಾರ- ಉಳ್ಳಾಲ 250 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲು ಡಿಪಿಆರ್ ತಯಾರಾಗುತ್ತಿದೆ. ಇನ್ನು 3-4 ತಿಂಗಳೊಳಗೆ ಈ ಕಾಮಗಾರಿಗೆ ಸರ್ಕಾರ ಅನುಮೋದನೆ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
70 ಕೋಟಿ ರೂ. ವೆಚ್ಚದಲ್ಲಿ ವೆನ್ಲಾಕ್ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಕೆಲಸವನ್ನೂ ಮಾಡಲಿದ್ದೇವೆ. ಮಂಗಳೂರಲ್ಲಿ ಐಟಿ ಕ್ಷೇತ್ರವನ್ನು ಬೆಳೆಸಲು ಈಗಾಗಲೇ 70 ಕೋಟಿ ರೂ. ವೆಚ್ಚದ ಪಿಪಿಪಿ ಯೋಜನೆಗೆ ಅನುಮೋದನೆ ನೀಡುವ ಕಾರ್ಯ ಅಂತಿಮ ಹಂತದಲ್ಲಿದೆ. ಜತೆಗೆ ವಿವಿಧ ಐಟಿ ಯೋಜನೆಗಳನ್ನು ಇಲ್ಲಿಗೆ ತರಲು ಐಟಿ ಸಚಿವರ ಬಳಿ ಮಾತುಕತೆ ನಡೆಸಿದ್ದು, ಜಿಲ್ಲಾಧಿಕಾರಿಗೆ ಸೂಕ್ತ ಜಾಗ ಗುರುತಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು