ಇತ್ತೀಚಿನ ಸುದ್ದಿ
Madikeri | ಕತ್ತಲೆಕಾಡು–ಮರಗೋಡು ರಸ್ತೆ ದುರಸ್ತಿಗೆ ಆಗ್ರಹಿಸಿ ನಡೆದ ರಸ್ತೆ ತಡೆ ಪ್ರತಿಭಟನೆ
26/12/2025, 16:11
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಡಿಕೇರಿ ತಾಲ್ಲೂಕಿನ ಹದಗೆಟ್ಟ ಕತ್ತಲೆಕಾಡು – ಮರಗೋಡು ರಸ್ತೆಯ ದುಸ್ಥಿತಿಯಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೀವ್ರ ಅನಾನು ಕುಲತೆಯ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿ ಕಾಮಗಾರಿಯನ್ನು ತಕ್ಷಣ ಕೈಗೊಳ್ಳಬೇಕೆಂದು ಆಗ್ರಹಿಸಿ ಇಂದು ಬೆಳಿಗ್ಗೆ ಮರಗೋಡು ಗ್ರಾಮದಲ್ಲಿ ರಸ್ತೆ ತಡೆ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕತ್ತಲೆಕಾಡು–ಮರಗೋಡು ಮಾರ್ಗದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಕಳೆದ 20 ವರ್ಷಗಳಿಂದ ಡಾಂಬರು ಕಾಣೆಯಾಗಿದೆ. ಹಾದಿಯುದ್ಧಕ್ಕೂ ಅಲ್ಲಲ್ಲಿ ಭಾರೀ ಗಾತ್ರದ ಹೊಂಡಗಳಿಂದ ಅವೃತವಾಗಿ ವಾಹನಗಳ ಸಂಚಾರಕ್ಕೆ ತೊಡಕ್ಕಾಗಿದೆ. ಈ ರಸ್ತೆಯ ಅವ್ಯವಸ್ಥೆಯಿಂದಾಗಿ ವಾಹನಗಳು, ವಿದ್ಯಾರ್ಥಿಗಳು, ಕಾರ್ಮಿಕರು, ರೋಗಿಗಳು ಹಾಗೂ ಸಾರ್ವಜನಿಕರು, ವ್ಯಾಪಾರಿಗಳು ಪ್ರತಿದಿನ ಅಪಾಯದ ನಡುವೆ ಬಹು ಪ್ರಯಾಸದಿಂದ ತೀವ್ರ ಸಂಕಷ್ಟದಲ್ಲಿ ಸಂಚರಿಸುವಂತಾಗಿದೆ. ರಸ್ತೆಯನ್ನು ದುರಸ್ತಿಪಡಿಸಿಕೊಡುವಲ್ಲಿ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ಧೋರಣೆ ತಾಳಿದ್ದು, ಇದನ್ನು ಖಂಡಿಸಿ ನಡೆದ ರಸ್ತೆ ತಡೆ ಹಾಗೂ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಮರಗೋಡು ವ್ಯಾಪಾರಸ್ಥರು ಅಂಗಡಿ – ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಸೂಚಿಸಿದರು.

ರಸ್ತೆ ತಡೆಯ ಪರಿಣಾಮವಾಗಿ ಖಾಸಗಿ ಬಸ್ ಗಳ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಸ್ಥಳಕ್ಕೆ ಮಡಿಕೇರಿ DSP ಸೂರಜ್ ಅವರು ಭೇಟಿ ನೀಡಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಸೂಚಿಸಿದರು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಶೀಘ್ರದಲ್ಲಿ ರಸ್ತೆಯನ್ನು ದುರಸ್ತಿಪಡಿಸಿಕೊಡುವ ಭರವಸೆ ನೀಡಲು ಪ್ರತಿಭಟನಾಕಾರರು ಆಗ್ರಹಿಸಿದರು.












