ಇತ್ತೀಚಿನ ಸುದ್ದಿ
ಮಡಿಕೇರಿ: ನಿಷೇಧಾಜ್ಞೆ ಉಲ್ಲಂಘಿಸಿ ಮೆರವಣಿಗೆ ಯತ್ನ; ಹಿಂದೂ ಸಂಘಟನೆಯ ಮುಖಂಡರು ಪೊಲೀಸ್ ವಶಕ್ಕೆ
10/11/2021, 20:27

ಮಡಿಕೇರಿ(reporterkarnataka.com):
ನಿಷೇಧಾಜ್ಞೆ ಉಲ್ಲಂಘಿಸಿ ಮೆರವಣಿಗೆ ನಡೆಸಲುದ್ದೇಶಿಸಿದ್ದ ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಸೇರಿದಂತೆ ಹಲವು ಪ್ರಮುಖರನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.
2015ರಲ್ಲಿ ಟಿಪ್ಪು ಜಯಂತಿ ಸಂದರ್ಭ ನಡೆದ ಅಹಿತಕರ ಘಟನೆಯಲ್ಲಿ ಮೃತಪಟ್ಟ ಕುಟ್ಟಪ್ಪ ಸ್ಮರಣಾರ್ಥ ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಜಾಗರಣ ವೇದಿಕೆ ಬುಧವಾರ ಬೆಳಗ್ಗೆ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಶಾಂತಿ ಪೂಜೆ ಸಲ್ಲಿಸಿ ಹೊರಬರುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್ ನ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ ಹಾಗೂ ಹಿಂದೂ ಜಾಗರಣ ವೇದಿಕೆಯ ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದರು.
ಸಂಘ ಪರಿವಾರದ ಸಂಘಟನೆಗಳು ಜನಜಾಗೃತಿ ಸಭೆ, ಮೆರವಣಿಗೆ ಆಯೋಜಿಸಲುದ್ದೇಶಿಸಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ವಿಹಿಂಪ ಮತ್ತು ಹಿಂಜಾವೇ ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೊಡಗು ಜಿಲ್ಲಾದ್ಯಂತ ಇಂದು ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದೆ.