10:00 PM Sunday30 - November 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಮಾನನಷ್ಟ ಮೊಕದ್ದಮೆ : ಕೆ.ಶ್ರೀನಾಥ್ ಹೆಬ್ಬಾರ್‌ಗೆ 1.5ಕೋಟಿ ಪರಿಹಾರ ನೀಡುವಂತೆ ಕೋರ್ಟ್ ಆದೇಶ

06/01/2022, 13:58

ಮಂಗಳೂರು(reporterkarnataka.com): ಮಂಗಳೂರು ಲ್ಯಾಂಡ್‌ ಟ್ರೇಡ್‌ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಮಾಲೀಕ ಕೆ.ಶ್ರೀನಾಥ ಹೆಬ್ಬಾರ್‌ ವಿರುದ್ಧ ಲೇಖನ ಬರೆದು ಮಾನನಷ್ಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಹನುಮಂತ ಕಾಮತ್‌ ಮತ್ತು ವೆಬ್‌ ನ್ಯೂಸ್‌ ಪೋರ್ಟಲ್‌ ತುಳುನಾಡು ನ್ಯೂಸ್‌ ವಿರುದ್ಧ ಮಂಗಳೂರು ಸಿಜೆಎಂ ನ್ಯಾಯಾಲಯ ತೀರ್ಪು ನೀಡಿದ್ದು, 1.5 ಕೋಟಿ ರೂ. ಮಾನನಷ್ಟ ಮೊತ್ತವನ್ನು ಆರು ತಿಂಗಳಿನೊಳಗೆ ಎರಡು ಕಂತಿನಲ್ಲಿ ಪಾವತಿಸುವಂತೆ ಆದೇಶ ಹೊರಡಿಸಿದೆ.

ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ಮುಂದಿನ ದಿನಗಳಲ್ಲಿ ಯಾವುದೇ ಮಾನನಷ್ಟ ಮಾಡುವ ರೀತಿಯಲ್ಲಿ ಮಾನಹಾನಿಕರ, ಸುಳ್ಳು, ದುರುದ್ದೇಶ ಪೂರಿತ ಲೇಖನ, ಹೇಳಿಕೆ ನೀಡದಂತೆ ಶಾಶ್ವತ ತಡೆಯಾಜ್ಞೆ ನೀಡಿದೆ. ಮಾನನಷ್ಟ ಮೊತ್ತದ ಶೇ.95ರಷ್ಟನ್ನು ಪ್ರಥಮ ಪ್ರತಿವಾದಿ ಹನುಮಂತ ಕಾಮತ್‌ ಹಾಗೂ ಉಳಿದ ಶೇ.5ರಷ್ಟು ಮೊತ್ತವನ್ನು ಎರಡನೇ ಪ್ರತಿವಾದಿ ಮೇ ತುಳುನಾಡು ನ್ಯೂಸ್‌ ಅವರು ಪರಿಹಾರ ರೂಪದಲ್ಲಿ ಪಾವತಿಸಬೇಕು ಎಂದು 2021ರ ನವೆಂಬರ್‌ 29ರಂದು ಮಂಗಳೂರು ಸಿಜೆಎಂ ಮತ್ತು ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಧರ್ಮಗಿರಿ ರಾಮಸ್ವಾಮಿ ಆದೇಶ ನೀಡಿದ್ದಾರೆ.

ಮೊದಲ ಪ್ರತಿವಾದಿ ಹನುಮಂತ ಕಾಮತ್‌ ಅವರು ತುಳುನಾಡು ನ್ಯೂಸ್‌ ವೆಬ್‌ ಪೋರ್ಟಲ್‌ನಲ್ಲಿ ಕೆ.ಶ್ರೀನಾಥ್‌ ಹೆಬ್ಬಾರ್‌ ಅವರ ಮಂಗಳೂರಿನ ಚಿಲಿಂಬಿಯ ಹ್ಯಾಟ್‌ಹಿಲ್‌ನಲ್ಲಿರುವ ವಸತಿ ಸಮುಚ್ಚಯ ಸಾಲಿಟೇರ್‌ನ ವಿರುದ್ಧ ಮೂರು ಸರಣಿ ಲೇಖನವನ್ನು ಪ್ರಕಟಿಸಿದ್ದರು. ಈ ಲೇಖನವು ದುರುದ್ದೇಶಪೂರಿತವಾಗಿದ್ದು, ಮಾನಹಾನಿಕರ ಸ್ವರೂಪದಿಂದ ಕೂಡಿದೆ. ಲೇಖನಗಳು ತನ್ನ ಪ್ರತಿಷ್ಠೆಗೆ ಧಕ್ಕೆ ತಂದಿದ್ದು, ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾಗಿದೆ. ವಸತಿ ಸಮುಚ್ಚಯದ ಮಾರಾಟದ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ಈ ಲೇಖನದಿಂದ ಸುಮಾರು 2 ಕೋಟಿ ರೂ. ನಷ್ಟವಾಗಿದೆ ಎಂದು ನ್ಯಾಯಾಲಯದಲ್ಲಿ ಶ್ರೀನಾಥ್‌ ಹೆಬ್ಬಾರ್‌ ದೂರು ದಾಖಲಿಸಿ, ಈ ಸಂಬಂಧ ಪ್ರತಿವಾದಿಗಳ ವಿರುದ್ಧ ಶಾಶ್ವತ ತಡೆಯಾಜ್ಞೆ ಮತ್ತು ನಗದು ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು.

ಎರಡೂ ಕಡೆಯ ವಾದ ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾಯಾಲಯ, ಪ್ರತಿವಾದಿಗಳಾದ ಹನುಮಂತ ಕಾಮತ್‌ ಮತ್ತು ತುಳುನಾಡು ನ್ಯೂಸ್‌ ಅವರು ತಡೆಯಾಜ್ಞೆ ಮತ್ತು ಪರಿಹಾರಕ್ಕೆ ಹೊಣೆಗಾರರಾಗಿರುತ್ತಾರೆ ಎಂಬ ತೀರ್ಪು ನೀಡಿದೆ. ಪ್ರಕರಣ ವಿಚಾರಣೆಯ ವೇಳೆ ಶ್ರೀನಾಥ್‌ ಹೆಬ್ಬಾರ್‌ ಅವರು ನ್ಯಾಯಾಲಯಕ್ಕೆ ಕಟ್ಟಡ ನಿರ್ಮಾಣ ಪರವಾನಗಿ, ಮಂಗಳೂರು ಮಹಾನಗರ ಪಾಲಿಕೆಯಿಂದ ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣಪತ್ರ, ಪೊಲೀಸ್‌ ಮಹಾನಿರ್ದೇಶಕರಿಂದ ಅಂತಿಮ ಅನುಮತಿ ಪತ್ರ, ಅಗ್ನಿಶಾಮಕ ಇಲಾಖೆಯಿಂದ ಅನುಮೋದನೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮೋದನೆ, ಸಂಬಂಧಿತ ಬ್ಯಾಂಕ್‌ ದಾಖಲೆಗಳು, ವಸತಿ ಸಮುಚ್ಚಯಕ್ಕೆ ಪೂರಕವಾಗಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನೀಡಿದ ತೀರ್ಮಾನಗಳು ಸೇರಿದಂತೆ 35ಕ್ಕೂ ಅಧಿಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸಾಲಿಟೇರ್‌ ವಸತಿ ಸಮುಚ್ಚಯವು ಸಂಪೂರ್ಣವಾಗಿ ಕಾನೂನು ಬದ್ಧವಾಗಿದೆ ಮತ್ತು ಫಿರ್ಯಾದಿಯ ವೈಯಕ್ತಿಕ ವಿಶ್ವಾಸಾರ್ಹತೆ ಅಥವಾ ಯೋಜನೆಯ ಕಾರ್ಯಸಾಧ್ಯತೆಯ ಬಗ್ಗೆ ಅನುಮಾನಿಸಲು ಯಾವುದೇ ಕಾರಣವಿಲ್ಲ ಎಂಬುದಕ್ಕೆ ಪೂರಕವಾಗಿ ಎಲ್ಲ ಪುರಾವೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸ್ಥಳೀಯ ಅತೃಪ್ತ ವ್ಯಕ್ತಿಗಳೊಂದಿಗೆ ಶಾಮೀಲಾಗಿ, ದುರುದ್ದೇಶದಿಂದ ಸಂಸ್ಥೆಯ ಮತ್ತು ವೈಯಕ್ತಿಕ ವಿಶ್ವಾಸಾರ್ಹತೆಯನ್ನು ಹಾಳು ಮಾಡಲು ಪ್ರತಿವಾದಿ ಹನುಮಂತ ಕಾಮತ್‌ ಪ್ರಯತ್ನಿಸಿದ್ದಾರೆ ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಸುಮಾರು 250 ಜನರಿಗೆ ಉದ್ಯೋಗ ನೀಡಿರುವ ಈ ಸಂಸ್ಥೆಯು, ಬ್ಯಾಂಕ್‌ ಸಾಲ ಪಡೆದು ಕೋಟ್ಯಂತರ ರೂ. ಹೂಡಿಕೆ ಮಾಡಿದೆ. ಈ ಎಲ್ಲ ವಿಚಾರಗಳನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ ಈ ತೀರ್ಪನ್ನು ನೀಡಿದೆ. ಅರ್ಜಿದಾರರ ಪರವಾಗಿ ನ್ಯಾಯಾಲಯದಲ್ಲಿ ವಕೀಲ ಕೆ.ಶಂಭು ಶರ್ಮಾ ವಾದ ಮಾಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು