ಇತ್ತೀಚಿನ ಸುದ್ದಿ
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಗೆ ರಾಜೀನಾಮೆ: ಬಿಜೆಪಿ ಸೇರ್ಪಡೆಗೆ ಕಮಲ ಪಡೆಯ ಗ್ರೀನ್ ಸಿಗ್ನಲ್ ನ ಕಾತರದಲ್ಲಿ ನೇತಾರ
07/05/2022, 20:36
ಉಡುಪಿ(reporterkarnataka.com): ಕಾಂಗ್ರೆಸ್ ನಾಯಕ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಅವರು ತನ್ನ ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಿದ್ದಾರೆ. ಉಡುಪಿ ಕಾಂಗ್ರೆಸ್ ನಲ್ಲಿ ತಾನು ಮುಂದುವರಿಯುವ ವಾತಾವರಣ ಇಲ್ಲ. ನನ್ನನ್ನು ಇತ್ತೀಚೆಗೆ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನಕ್ಕೆ ನೇಮಿಸಿರುವುದಕ್ಕೆ ಧನ್ಯವಾದಗಳು ಎಂದು ಅವರು ತನ್ನ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಇದಕ್ಕೆ ಮುನ್ನ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಮೋದ್ ಮಧ್ವರಾಜ್ ಅವರು ಬಿಜೆಪಿ ಸೇರ್ಪಡೆ ಕುರಿತು ರಾಜ್ಯ ನಾಯಕರು ಅಂತಿಮ ತೀರ್ಮಾನ ಕೈಗೊಳ್ಳುವರು ಎಂದು ಹೇಳಿದ್ದರು.
ಪಕ್ಷದ ಜಿಲ್ಲಾ ಘಟಕದ ಅಭಿಪ್ರಾಯವನ್ನು ರಾಜ್ಯ ನಾಯಕರಿಗೆ ತಿಳಿಸಲಾಗಿದೆ. ಕಾರ್ಯಕರ್ತ ರೊಂದಿಗೆ ಸಮಾಲೋಚಿಸಿ ನಾವು ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ ಎಂದು ಜಿಲ್ಲಾಧ್ಯಕ್ಷರು ನುಡಿದ್ದರು.
ರಾಜ್ಯ ನಾಯಕರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಮ್ಮ ಸಂಪೂರ್ಣ ಬೆಂಬಲವಿದೆ. ಪ್ರಮೋದ್ ಅವರನ್ನು ಪಕ್ಷಕ್ಕೆ ಸೇರಿಸಬೇಕೇ ಅಥವಾ ಬೇಡವೇ ಎಂಬ ಅಂತಿಮ ತೀರ್ಮಾನವನ್ನು ರಾಜ್ಯ ನಾಯಕರು ಕೈಗೊಳ್ಳುವರು ಎಂದು ಸುರೇಶ್ ನಾಯಕ್ ತಿಳಿಸಿದ್ದರು.
ಪ್ರಮೋದ್ ಮಧ್ಯರಾಜ್ ಅವರು ಮಾಜಿ ಸಚಿವೆ ಹಾಗೂ ಮಾಜಿ ಸಂಸದೆ ಮನೋರಮಾ ಮಧ್ವರಾಜ್ ಅವರ ಪುತ್ರ. ಮನೋರಮಾ ಅವರು ಡಿ. ದೇವರಾಜ ಅರಸ್, ವೀರೇಂದ್ರ ಪಾಟೀಲ್, ಎಸ್. ಬಂಗಾರಪ್ಪ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಪ್ರಮೋದ್ ಮಧ್ವರಾಜ್ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಉಡುಪಿ ಉಸ್ತುವಾರಿ ಸಚಿವರಾಗಿದ್ದರು.