ಇತ್ತೀಚಿನ ಸುದ್ದಿ
ಲಾರಿ ಮಾಲೀಕರ ಸಂಘದ ಅನಿರ್ದಿಷ್ಟಾವಧಿ ಮುಷ್ಕರ 3ನೇ ದಿನಕ್ಕೆ
24/08/2024, 18:04
ಗಣೇಶ ಇನಾಂದಾರ ಬಳ್ಳಾರಿ
info.reporterkarnataka@gmail.com
ಸರಕು ಸಾಗಾಟದ ದರ ಹೆಚ್ಚಿಸಬೇಕು, ಸ್ಥಳೀಯ ಲಾರಿಗಳಿಗೆ ಆದ್ಯತೆ ನೀಡಬೇಕು ಮತ್ತಿತರ ಬೇಡಿಕೆಗಳಿಗೆ ಆಗ್ರಹಿಸಿ ಲಾರಿ ಮಾಲೀಕರ ಸಂಘದ ವತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಶಾಂತಿಯುತ ಮುಷ್ಕರ ಇಂದು ಮೂರನೇ ದಿನಕ್ಕೆ ತಲುಪಿದೆ ಎಂದು ಬಳ್ಳಾರಿ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ವಿ.ಶ್ರೀನಿವಾಸ್ (ಮಿಂಚು) ತಿಳಿಸಿದರು.
ಶಿಡಿಗಿನಮೊಳ ಬಳಿಯ ಜಾನಕಿ, ಬಸಾಯಿ ಸ್ಪಾಂಜ್ ಕಾರ್ಖಾನೆಗಳ ಎದುರು ನಡೆದಿರುವ ಮುಷ್ಕರದ ನೇತೃತ್ವ ವಹಿಸಿ ಮಾತನಾಡಿದರು.
ಕಳೆದ ಮೂರು ದಿನಗಳಿಂದ ಅಹೋರಾತ್ರಿ ನಾವು, ನಮ್ಮ ಸಂಘದ ಪದಾಧಿಕಾರಿಗಳು, ಸದಸ್ಯರು ಮುಷ್ಕರ ನಡೆಸಿದ್ದೇವೆ, ಈವರೆಗೆ ಜಿಲ್ಲಾಡಳಿತವಾಗಲಿ, ಸ್ಪಾಂಜ್ ಐರನ್ ಮಾಲೀಕರ ಸಂಘವಾಗಲಿ ನಮ್ಮ ಹೋರಾಟಕ್ಕೆ ಸ್ಪಂದಿಸಿಲ್ಲವಾದರೂ ಬೇಡಿಕೆ ಈಡೇರುವವರೆಗೆ ಹೋರಾಟ ನಡೆಯಲಿದೆ ಎಂದು ಹೇಳಿದರು.
ಓವರ್ ಲೋಡ್ ಲಾರಿಗಳನ್ನು ನಿಷೇಧಿಸಬೇಕು, ಸೀರಿಯಲ್ ಪ್ರಕಾರವಾಗಿ ಸ್ಥಳೀಯ ಲಾರಿಗಳಿಗೆ ಸರಕು ಸಾಗಣೆಗೆ ಅವಕಾಶ ನೀಡಬೇಕೆಂಬುದು ನಮ್ಮ ಇತರ ಪ್ರಮುಖ ಬೇಡಿಕೆಗಳು ಎಂದು ಅವರು ನುಡಿದರು.
ಸ್ಥಳೀಯವಾಗಿ ಅಂದಾಜು ಸಾವಿರದ ಐದುನೂರು ಲಾರಿಗಳು ಇದ್ದು, ನೂರಾರು ಲಾರಿಗಳಿಗೆ ಸರಕು ಸಾಗಣೆ ಸಿಗದೇ ಲಾರಿ ಮಾಲೀಕರು ಭಾರೀ ಪ್ರಮಾಣದ ನಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದ ಅವರು, ಲಾರಿಗಳ ಮಾಸಿಕ ಕಂತು ಕಟ್ಟಲಾಗದೇ, ಆರ್ಥಿಕ ಸಂಕಷ್ಟದಿಂದಾಗಿ ಈಗಾಗಲೇ ಹಲವು ಜನ ಲಾರಿ ಮಾಲೀಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.
ಕಳೆದ ತಿಂಗಳು ಸಂಘದ ವತಿಯಿಂದ ಐದು ದಿನಗಳ ಕಾಲ ಹಗಲು ರಾತ್ರಿ ಶಾಂತಿಯುತ ಮುಷ್ಕರ ನಡೆಸಿ, ಸ್ಪಾಂಜ್ ಕಾರ್ಖಾನೆಗಳಿಗೆ ಒಳ-ಹೊರ ಹೋಗುವ ಲಾರಿಗಳನ್ನು ನಿಲ್ಲಿಸಲಾಗಿತ್ತು. ಆಗ ಜಿಲ್ಲಾಧಿಕಾರಿಗಳು ಹಾಗೂ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ, ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ ಅಧ್ಯಕ್ಷರ ಮಧ್ಯಸ್ಥಿಕೆಯಲ್ಲಿ ಮಾತುಕತೆಗೆ ಬಂದಿದ್ದ ಸ್ಪಾಂಜ್ ಐರನ್ ಕಾರ್ಖಾನೆಗಳ ಮಾಲೀಕರ ಸಂಘ ಆರಂಭದಲ್ಲಿ ನಮ್ಮ ಬೇಡಿಕೆಗಳಿಗೆ ಒಪ್ಪಿದಂತೆ ಮಾಡಿ, ತದನಂತರ ಮಾತು ಬದಲಿಸಿ, ಈಗ ಏನಾದರೂ ಮಾಡಿಕೊಳ್ಳಿ ಎನ್ನುತ್ತಿದ್ದಾರೆ. ಹೀಗಾಗಿ ನಮಗೆ ಅನ್ಯಾಯ ಆಗಿದ್ದು, ಹೋರಾಟ ಮುಂದುವರೆಸಿದ್ದೇವೆ. ನಮ್ಮ ಬೇಡಿಕೆಗಳು ಈಡೇರದಿದ್ದರೆ ಹೋರಾಟ ತೀವ್ರಗೊಳಸಲಾಗುವುದು ಎಂದು ಮಿಂಚು ಶ್ರೀನಿವಾಸ್ ತಿಳಿಸಿದ್ದಾರೆ.
ಉದ್ಯಮಿ, ಬಳ್ಳಾರಿ ಮಹಾನಗರ ಪಾಲಿಕೆಯ ಸದಸ್ಯ ಎಂ.ಪ್ರಭಂಜನ ಕುಮಾರ್, ಕಾಂಗ್ರೆಸ್ ಮುಖಂಡ ಬಿಆರೆಲ್ ಸೀನಾ, ಪ್ರವೀಣ ಕುಮಾರ್, ಎಂ.ಡಿ. ಫಯಾಜ್, ನಾಗರಾಜ, ಪೂಜಾದೇವಿ ಶ್ರೀನಿವಾಸುಲು, ರಾಂಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.