ಇತ್ತೀಚಿನ ಸುದ್ದಿ
ಲೋಕಸಭೆಯಲ್ಲಿ ಸಿಗದ ಮ್ಯಾಜಿಕ್ ನಂಬರ್: ಸರಕಾರ ರಚನೆಗೆ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡುಗೆ ಬಿಜೆಪಿ, ಕಾಂಗ್ರೆಸ್ ಗಾಳ
04/06/2024, 18:22

ಹೊಸದಿಲ್ಲಿ(reporterkarnataka.com): ಲೋಕಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರಕದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಹಾಗೂ ಕಾಂಗ್ರೆಸ್ ಪಕ್ಷ ಕಿಂಗ್ ಮೇಕರ್ ಆಗಿ ಹೊರ ಹೊಮ್ಕಿದ ಜೆಡಿಯು ಹಾಗೂ ಟಿಡಿಪಿಯ ಮೊರೆ ಹೋಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಕರೆ ಮಾಡಿ ರಾಜ್ಯದಲ್ಲಿ ಅದ್ಬುತ ಗೆಲುವು ಸಾಧಿಸಿದಕ್ಕಾಗಿ ಅಭಿನಂದನೆ ಕೋರಿದ್ದಾರೆ. ಹಾಗೆ ಎನ್ ಡಿಎ ಮೈತ್ರಿಕೂಟದ ಭಾಗವಾದ ಟಿಡಿಪಿಯು ಹೊಸತಾಗಿ ಸರಕಾರ ರಚಿಸಲು ಎನ್ ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡುವಂತೆ ಕೋರಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಈ ಇಬ್ಬರು ನಾಯಕರು ಈ ಹಿಂದೆ ಮೋದಿ ವಿರೋಧಿಗಳಾಗಿದ್ದರು. ಇಂಡಿಯಾ ಮೈತ್ರಿಕೂಟದಲ್ಲಿ ಸರಿಯಾದ ಗೌರವ ಸಿಕ್ಕಿಲ್ಲ ಎಂಬ ಕಾರಣಕ್ಕೆ ನಿತೀಶ್ ಕುಮಾರ್ ಅವರು ಲೋಕಸಭೆ ಚುನಾವಣೆಗೆ ಮುನ್ನ ಇಂಡಿಯಾ ಮೈತ್ರಿಕೂಟ ತೊರೆದು ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸೇರಿದ್ದರು. ಈ ಹಿನ್ನೆಲೆಯಲ್ಲಿ ಅತಂತ್ರ ಸ್ಥಿತಿ ಎದುರಾಗುತ್ತಿದ್ದಂತೆ ಬಿಜೆಪಿ ನಾಯಕರು ಈ ಇಬ್ಬರು ನಾಯಕರ ಮನವೊಲಿಸುವ ಪ್ರಯತ್ನ ಆರಂಭಿಸಿದ್ದಾರೆ.
ಈ ನಡುವೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಕೂಡ ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ಅವರಿಗೆ ಗಾಳ ಹಾಕಲಾರಂಭಿಸಿದೆ. ಆಗಾಗ ಮನಸ್ಸು ಬದಲಾಯಿಸುವುದರಲ್ಲಿ ನಿಸ್ಸೀಮನಾಗಿರುವ ನಿತೀಶ್ ಕುಮಾರ್ ಇಂಡಿಯಾ ಮೈತ್ರಿಕೂಟಕ್ಕೆ ಮರಳಿದರೂ ಆಶ್ಚರ್ಯಪಡುವಂತದ್ದೇನೂ ಇಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಚಂದ್ರಬಾಬು ನಾಯ್ಡು ಅವರು ಆರಂಭದಿಂದಲೂ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಲೇ ರಾಜಕೀಯ ಮಾಡಿಕೊಂಡು ಬಂದವರು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ನಾಯ್ಡು ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.