ಇತ್ತೀಚಿನ ಸುದ್ದಿ
ಲೈಂಗಿಕ ಕಿರುಕುಳ ಆರೋಪ: ಕೊಟ್ಟೂರು ಠಾಣೆಯ ಹೆಡ್ ಕಾನ್ ಸ್ಟೇಬಲ್ ಬಂಧನ
24/09/2022, 22:21
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಕೊಟ್ಟೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಎಂ.ಮಾರಪ್ಪ ಎಂಬುವರನ್ನು ಬಂಧಿಸಲಾಗಿದೆ.
ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನ ಮೇರೆಗೆ ಕೊಟ್ಟೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಎಂ ಮಾರಪ್ಪ ಎಂಬುವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಘಟನೆ ಬೆನ್ನಲ್ಲೇ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಆದೇಶ ಹೊರಡಿಸಿದ್ದಾರೆ.
ಪ್ರಕರಣದ ವಿವರ: ದೂರುದಾರ ಮಹಿಳೆ ಹಣದ ವಿಚಾರವಾಗಿ ಚಿಕ್ಕಪ್ಪನ ಮಗಳ ಜೊತೆ ಜಗಳವಾಡಿದ್ದಳು. ಈ ಕುರಿತು ಮಹಿಳೆ ಪಟ್ಟಣದ ಪೊಲೀಸ್ ಠಾಣೆಗೆ ಸೆ.18 ರಂದು ದೂರು ಕೊಡಲು ಹೋಗಿದ್ದಾರೆ. ಆಗ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ಟೇಬಲ್ ಮಾರಪ್ಪ ಹೆಸರು ಮತ್ತು ವಿಳಾಸ ಕೊಟ್ಟು ಹೋಗಿ ನಂತರ ನಿಮ್ಮನ್ನು ಸಂಪರ್ಕಿಸುವೆ ಎಂದು ಹೇಳಿದ್ದಾರೆ.
ಸೆ. 21ರಂದು ಮಹಿಳೆಗೆ ಕರೆ ಮಾಡಿದ ಮಾರಪ್ಪ, ಪ್ರಕರಣದಲ್ಲಿ ಸಹಾಯ ಮಾಡುವುದಾಗಿ ತಿಳಿಸಿ, ನಿಮ್ಮ ಮನೆಯಲ್ಲಿ ಯಾರ‍್ಯಾರು ಇದ್ದೀರಿ ಎಂದು ಕೇಳಿದ್ದಾನೆ. ಅಲ್ಲದೇ ನಿನ್ನ ಮೇಲೆ ಮನಸಾಗಿದೆ. ನಾನು ನೀನು ದಾವಣಗೆರೆ ಮತ್ತಿತರ ಕಡೆ ಎಲ್ಲಾದರು ಸೇರೋಣ ಎಂದು ಲೈಂಗಿಕ ಸಮ್ಮತಿಗೆ ಒತ್ತಾಯಿಸಿ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.
ಸಂಬಂಧಿಸಿದಂತೆ ದೂರುದಾರ ಮಹಿಳೆ, ಕೊಟ್ಟೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಮಹಿಳೆ ನೀಡಿರುವ ದೂರು ಹಾಗೂ ಪೊಲೀಸ್ ಅಧಿಕಾರಿ ನೀಡಿರುವ ದೂರನ್ನು ಸಬ್ ಇನ್ಸ್ಪೆಕ್ಟರ್ ವಿಜಯ್ ಕೃಷ್ಣ ತನಿಖೆ ಕೈಗೊಂಡಿದ್ದಾರೆ. ಸದ್ಯ ಆರೋಪಿ ಮಾರಪ್ಪ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸೇವೆಯಿಂದಲೂ ಅಮಾನತುಗೊಳಿಸಲಾಗಿದೆ ಎಂದು ಎಸ್ಪಿ ಡಾ. ಅರುಣ್ ತಿಳಿಸಿದ್ದಾರೆ.














