ಇತ್ತೀಚಿನ ಸುದ್ದಿ
ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆ ರಾಜ್ಯದ ಸಮಸ್ಯೆಗೆ ಕಾರಣ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ
13/08/2025, 21:54

ಬೆಂಗಳೂರು(reporterkarnataka.com): ಕೇಂದ್ರದಿಂದ ಪೂರೈಕೆಯಲ್ಲಿ ಆಗಿರುವ ಕೊರತೆಯಿಂದಾಗಿ ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆ ಉಂಟಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಮಾಡದೇ ಒಂದಾಗಿ ರೈತರ ಹಿತ ಕಾಯಬೇಕಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಇಂದು ರಸಗೊಬ್ಬರ ಸಮಸ್ಯೆಯ ಮೇಲೆ ನಡೆದ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕರು ಮಾಡಿದ ಆರೋಪಕ್ಕೆ ಕೃಷಿ ಸಚಿವರು ಅಂಕಿ ಅಂಶವಾರು ಉತ್ತರ ನೀಡಿದರು.
ರಾಜ್ಯದಲ್ಲಿ ಮುಂಗಾರು ಬೇಗ ಪ್ರಾರಂಭವಾಗಿದ್ದು ಬಿತ್ತನೆ ನಿರೀಕ್ಷೆಗೂ ಮುಂಚೆ ಚಾಲನೆಯಾಗಿದೆ. ಅಲ್ಲದೇ 2 ಲಕ್ಷ ಹೆಕ್ಟರ್ ಬಿಳಿ ಜೋಳ ಬಿತ್ತನೆ ಪ್ರದೇಶ ಹೆಚ್ಚಳವಾಗಿದ್ದು ಹಾಗೂ ಕೇಂದ್ರದಿಂದ ಈ ವರೆಗೆ 2.7 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆ ಕೊರತೆಯಾಗಿದ್ದು ಸಮಸ್ಯೆಗೆ ಕಾರಣವಾಗಿದೆ ಆದರೂ ಲಭ್ಯವಿದ್ದ ಕಾಪುದಾಸ್ತಾನು ಬಳಸಿ ಬಹುತೇಕ ತೊಂದರೆಯನ್ನು ನಿಭಾಯಿಸಲಾಗಿದೆ ಎಂದು ಎನ್.ಚಲುವರಾಯಸ್ವಾಮಿ ಹೇಳಿದರು.
ರಸಗೊಬ್ಬರ ಪೂರೈಕೆ ಸಂಪೂರ್ಣ ಕೇಂದ್ರದ ಜವಾಬ್ದಾರಿ ರಾಜ್ಯದಿಂದ 12.5 ಲಕ್ಷ ಮೆ.ಟನ್ ಯೂರಿಯಾಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು ಕೇಂದ್ರದಿಂದ 11.7 ಲಕ್ಷ ಮೆ.ಟನ್ ಹಂಚಿಕೆ ಮಾಡಲಾಗಿತ್ತು. ಆಗಸ್ಟ್ ಅಂತ್ಯದವರೆಗೆ 9.05ಲಕ್ಷ ಮೆ.ಟನ್ ಪೂರೈಕೆ ಮಾಡಬೇಕಾಗಿತ್ತು ಆದರೆ ಈವರೆಗೆ 6.30 ಲಕ್ಷ ಮೆ.ಟನ್ ಮಾತ್ರ ಪೂರೈಕೆಯಾಗಿದೆ. ಹಿಂದೆ ಇದ್ದ 3.46 ಲಕ್ಷ ಮೆ.ಟನ್ ಕಾಪುದಾಸ್ತಾನು ಬಳಸಿ ಪರಿಸ್ಥಿತಿ ನಿಬಾಯಿಸಲಾಗಿದೆ.
ಈ ಹಿಂದಿನ ವರ್ಷಗಳಲ್ಲಿ ಕಾಪುದಾಸ್ತಾನು ಪರಿಗಣಿಸಿದೆ ರಸಗೊಬ್ಬರವನ್ನು ರಾಜ್ಯಕ್ಕೆ ಪೂರೈಕೆ ಮಾಡಲಾಗುತ್ತಿತ್ತು ಆದರೆ ಈ ಬಾರಿ ಸರಬರಾಜಿನಲ್ಲಿ ಕೊರತೆ ಮಾಡಲಾಗಿದೆ. ಅಲ್ಲದೇ ಡಿಎಪಿ ಮತ್ತು ಯೂರಿಯಾ ಬಳಕೆ ಕಡಿಮೆ ಮಾಡಬೇಕೆಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರೇ ಮನವಿ ಮಾಡಿದ್ದಾರೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ರವರು ರಾಜ್ಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ನಮ್ಮ ಇತರ ಬೇಡಿಕೆಗಳಿಗೆ ಸಕರಾತ್ಮಕವಾಗಿ ಸ್ಪಂದನೆ ನೀಡುತ್ತಿದ್ದಾರೆ ಅವರನ್ನು ಜುಲೈ ತಿಂಗಳಿನಲ್ಲೇ ಭೇಟಿ ಮಾಡಿ ರಾಜ್ಯದ ಕೃಷಿ ಹಾಗೂ ರಸಗೊಬ್ಬರ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಕೇಂದ್ರ ರಸಗೊಬ್ಬರ ಸಚಿವರಾದ ಬೇಟಿಗೂ ಅವಕಾಶ ಕೋರಲಾಗಿತ್ತು. ಅಲ್ಲದೇ ಕೇಂದ್ರದಿಂದ ಅಗತ್ಯ ಪ್ರಮಾಣದ ರಸಗೊಬ್ಬರ ಪೂರೈಸುವಂತೆ ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರ ಸಚಿವರು ಹಾಗೂ ಸಂಸದರು, ರಾಜ್ಯಸಭಾ ಸದಸ್ಯರುಗಳಿಗೆ ಪತ್ರ ಬರೆದು ಮನವಿ ಮಾಡಲಾಗಿತ್ತು.
ರಸಗೊಬ್ಬರದ ವಾಸ್ತವ ಸ್ಥಿತಿ ಅರಿತಿದ್ದರೂ ಪ್ರತಿಪಕ್ಷಗಳು ಪ್ರತಿಭಟನೆಗೆ ಇಳಿದ ಕಾರಣ ರೈತರಲ್ಲೂ ಗೊಂದಲ ಮೂಡಿ ಕೆಲವೆಡೆ ರೈತರು ಇದಕ್ಕಿಂದಂತೆ ಮುಂದಿನ 2 ತಿಂಗಳ ಅವಧಿಗೆ ಬೇಕಿರುವ ಗೊಬ್ಬರವನ್ನು ಈಗಲೇ ಖರೀದಿಸಲು ಮುಂದಾಗಿದ್ದು ಯೂರಿಯಾ ಕೊರತೆಗೆ ಪ್ರಮುಖ ಕಾರಣವಾಯಿತು ಎಂದು ಎನ್.ಚಲುವರಾಯಸ್ವಾಮಿರವರು ವಿವರಿಸಿದರು.
ಈಗಾಲಾದರೂ ರಾಜಕೀಯ ಬಿಟ್ಟು ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಬಾಕಿ ರಸಗೊಬ್ಬರ ಪೂರೈಕೆಗೆ ಸಹಕರಿಸುವುದರ ಜೊತೆಗೆ ರೈತರ ಸಮಸ್ಯೆಗಳನ್ನು ಬಗೆಹರಿಸಲು ಒಟ್ಟಾಗಿ ಕೆಲಸ ಮಾಡೋಣವೆಂದು ರಾಜ್ಯ ಕೃಷಿ ಸಚಿವರು ಮನವಿ ಮಾಡಿದರು.
ಅಲ್ಲದೇ ಕೃಷಿ ಇಲಾಖೆ ಕಳೆದ 2 ವರ್ಷಗಳ ಅವಧಿಯಲ್ಲಿ ಕೈಗೊಂಡಿರುವ ರೈತಪರ ಯೋಜನೆಗಳು ಇಲಾಖಾ ಸುಧಾರಣಾ ಕ್ರಮಗಳು, ನೇಮಕಾತಿ ಪ್ರಕ್ರಿಯೆ, ಕೇಂದ್ರದ ಯೋಜನೆಗಳ ಸದ್ಭಳಕೆ ಬರಪರಿಸ್ಥಿತಿಯಲ್ಲಿ ಕೈಗೊಂಡ ಕ್ರಮಗಳು, ಬೆಳೆವಿಮೆ ಮತ್ತು ಇತರ ವಿಚಾರಗಳ ಬಗ್ಗೆ ಸವಿವಿವರವಾಗಿ ಮಾಹಿತಿ ನೀಡಿದರು.