ಇತ್ತೀಚಿನ ಸುದ್ದಿ
ಕ್ಯಾಸನಕೇರಿ ವಾಂತಿಬೇದಿ ಪ್ರಕರಣ: ಜಿಲ್ಲಾಧಿಕಾರಿ, ಜಿಪಂ ಸಿಇಒ ಭೇಟಿ; ನೀರು ಪ್ರಯೋಗಾಲಯಕ್ಕೆ ರವಾನೆ
17/08/2022, 16:11
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕ್ಯಾಸನಕೆರೆ ಗ್ರಾಮದ 3-4 ದಿನಗಳಿಂದ 10ಕ್ಕೂ ಹೆಚ್ಚು ಜನರಲ್ಲಿ ವಾಂತಿ, ಭೇದಿ ಪ್ರಕರಣ ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಹಿನ್ನೆಲೆ ಗ್ರಾಮಕ್ಕೆ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಪಿ.ಶ್ರವಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮದ ಅನೇಕ ಕಡೆ ಸಂಚರಿಸಿ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಆಗುವ ಪೈಪ್ ಲೈನ್, ಓವರ್ ಹೆಡ್ ಹಾಗೂ ಮಿನಿ ಟ್ಯಾಂಕ್ ಗಳನ್ನು ವೀಕ್ಷಿಸಿದರು. ಅಲ್ಲದೆ, ಗ್ರಾಮದಲ್ಲಿ ಮತ್ತೊಮ್ಮೆ ಸ್ವಚ್ಛತೆಯನ್ನು ಮಾಡುವಂತೆ ಚೌಡಾಪುರ ಗ್ರಾಪಂ ಅಧಿಕಾರಿಗೆ ಸೂಚಿಸಿದರು.
ಕ್ಯಾಸನಕೆರೆ ಗ್ರಾಮದಿಂದ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವಾಂತಿ, ಭೇದಿಯಿಂದ ದಾಖಲಾಗಿದ್ದ ರೋಗಿಗಳ ಆರೋಗ್ಯವನ್ನು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು. ತಹಸೀಲ್ದಾರ್ ಟಿ.ಜಗದೀಶ್, ತಾಪಂ ಇಒ ವೈ.ರವಿಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರದೀಪ್, ಸಿಡಿಪಿಒ ನಾಗನಗೌಡ, ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಪಿಡಿಒ ಪ್ರಶಾಂತ್ ಇದ್ದರು.
ಘಟನೆ: ಕ್ಯಾಸನಕೆರೆ ಗ್ರಾಮದಲ್ಲಿ ವಾಂತಿ, ಭೇದಿ ಪ್ರಕರಣದಿಂದ ಕಳೆದ ಆ.12 ರಂದು ಬಾಲಕಿ ಬಿಂದು ಎನ್ನುವವರು ಮೃತಪಟ್ಟಿದ್ದಾಳೆ ಎನ್ನಲಾಗಿದ್ದು, 8-10 ಜನರು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.
ಗ್ರಾಮಕ್ಕೆ ಕಲುಷಿತ ನೀರು ಸರಬರಾಜು ಆಗಿದ್ದರಿಂದ ಆ ನೀರು ನೀರು ಸೇವಿಸಿದ್ದ ಕೆಲವರಲ್ಲಿ ವಾಂತಿ, ಭೇದಿ ಪ್ರಕರಣಗಳು ಕಾಣಿಸಿಕೊಂಡಿದೆ ಎನ್ನುವುದು ಗ್ರಾಮಸ್ಥರು ಹೇಳುತ್ತಾರಾದರೂ, ಘಟನೆಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಆ.13 ರಂದು ವಿಜಯನಗರ ಜಿಪಂ ಸಿಇಒ ಹರ್ಷಲ್ ಭೋಯರ್ ನಾರಾಯಣರಾವ್, ಡಿಎಚ್ಒ ಡಾ. ಸಲೀಂ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರದೀಪ್ ಸೇರಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ, ಕುಡಿಯುವ ನೀರನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.
ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯು ಚಿಕಿತ್ಸೆ ನೀಡುತ್ತಿದ್ದು, ವಾಂತಿ, ಭೇದಿಯ ಪ್ರಕರಣ ಹತೋಟಿಯಲ್ಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರದೀಪ್ ತಿಳಿಸಿದ್ದಾರೆ.