ಇತ್ತೀಚಿನ ಸುದ್ದಿ
ಕ್ವಿಟ್ ಇಂಡಿಯಾ ಚಳುವಳಿ: ಕಾರ್ಪೋರೇಟ್ ಕಂಪೆನಿಗಳ ವಿರುದ್ಧ ಇಂದು ಮಂಗಳೂರಿನ ಕ್ಲಾಕ್ ಟವರ್ ಸಮೀಪ ಪ್ರತಿಭಟನೆ
09/08/2021, 08:20
ಮಂಗಳೂರು(reporterkarnataka.com): ಕ್ವಿಟ್ ಇಂಡಿಯಾ ಚಳುವಳಿಯ ಸವಿನೆನಪಿನಲ್ಲಿ, ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ಕಾರ್ಪೋರೇಟ್ ಕಂಪೆನಿಗಳ ವಿರುದ್ಧ ಹಾಗೂ ಕೇಂದ್ರ ಸರ್ಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಆಗಸ್ಟ್ 9 ರಂದು ದೇಶವ್ಯಾಪಿ ಪ್ರತಿಭಟನೆ ನಡೆಯಲಿದೆ.
9ರಂದು ಬೆಳಗ್ಗೆ 10 ಗಂಟೆಗೆ ನಗರದ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನ ಜರುಗಲಿದೆ ಎಂದು ರೈತ ಕಾರ್ಮಿಕ ಸಂಘಟನೆಗಳಾದ ಸಿಐಟಿಯು -ಎಐಕೆಎಸ್ ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಕೃಷಿ ರಂಗದ ಸುಧಾರಣೆಗಳ ಹೆಸರಿನಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಿರುವ ಮೂರು ಹೊಸ ಕೃಷಿ ಕಾನೂನುಗಳು ಸಂಪೂರ್ಣವಾಗಿ ರೈತ ವಿರೋಧಿ ಯಾಗಿದೆ ಮಾತ್ರವಲ್ಲದೆ ಕಾರ್ಪೋರೇಟ್ ಕಂಪೆನಿಗಳ ಪರವಾಗಿದೆ. ಇಂತಹ ದೇಶ ವಿರೋಧಿ ಕೃಷಿ ನೀತಿಗಳ ವಿರುದ್ಧ ರೈತರು ಕಳೆದ 7 ತಿಂಗಳಿನಿಂದ ಹೋರಾಟದ ಪಥದಲ್ಲಿದ್ದರೂ, ಸರಕಾರವು ಮಾತ್ರ ದಿವ್ಯ ಮೌನ ವಹಿಸಿದೆ. ಮತ್ತೊಂದು ಕಡೆ ಕಾರ್ಮಿಕ ವರ್ಗದ ಎಲ್ಲಾ ಪ್ರಮುಖ ಕಾನೂನುಗಳನ್ನು ಸಂಹಿತೆಗಳನ್ನಾಗಿ ಮಾರ್ಪಡಿಸಿ ಕಾರ್ಮಿಕರ ಹಕ್ಕು ಭಾದ್ಯತೆಗಳನ್ನು ಕಸಿಯಲು ಹೊರಟಿದೆ. ಇಂತಹ ಫ್ಯಾಸಿಸ್ಟ್ ಸರಕಾರದ ವಿರುದ್ಧ ರೈತ ಕಾರ್ಮಿಕರು ಜನಸಾಮಾನ್ಯರು ಸಂಘಟಿತ ಹೋರಾಟ ನಡೆಸಬೇಕಾಗಿದೆ. ಅಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷ ವಾಕ್ಯದೊಂದಿಗೆ ಕ್ವಿಟ್ ಇಂಡಿಯಾ ಚಳುವಳಿಯು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಮೈಲುಗಲ್ಲಾಗಿದ್ದು, ಇಂದು ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುವ ಕಾರ್ಪೋರೇಟ್ ಕಂಪೆನಿಗಳ ವಿರುದ್ದ ಎರಡನೆಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ರೈತ ಕಾರ್ಮಿಕರು ಅಣಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 9ರಂದು ಜರುಗಲಿರುವ ಪ್ರತಿಭಟನೆ ಯಲ್ಲಿ ರೈತ ಕಾರ್ಮಿಕರು, ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಎಐಕೆಎಸ್ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಹಾಗೂ ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಜಂಟಿ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.