ಇತ್ತೀಚಿನ ಸುದ್ದಿ
ಕುಕ್ಕರ್ ಸ್ಪೋಟದ ಸಂತ್ರಸ್ತ ಪುರುಷೋತ್ತಮ ಪೂಜಾರಿಗೆ ಸರ್ವ ರೀತಿಯಲ್ಲೂ ಸಹಕಾರ: ಶಾಸಕ ವೇದವ್ಯಾಸ ಕಾಮತ್
22/12/2022, 12:35

ಮಂಗಳೂರು(reporterkarnataka.com): ಕುಕ್ಕರ್ ಬಾಂಬ್ ಸ್ಪೋಟದ ಸಂತ್ರಸ್ತ ಪುರುಷೋತ್ತಮ ಪೂಜಾರಿ ಅವರಿಗೆ ಸರ್ವ ರೀತಿಯಲ್ಲೂ ಸಹಕಾರ ನೀಡುತಿದ್ದು, ಭಯೋತ್ಪಾದನಾ ಚಟುವಟಿಕೆಗಳಂತಹ ಹೀನ ಕೃತ್ಯಗಳಲ್ಲಿ ರಾಜಕೀಯ ಬೇಳೆ ಬೇಯಿಸುವುದು ಸರಿಯಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ನಗರದ ನಾಗುರಿಯಲ್ಲಿ ಕುಕ್ಕರ್ ಬಾಂಬ್ ಸ್ಪೋಟದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಟೋ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರ ಕುಟುಂಬದ ಜೊತೆ ಸಂಪರ್ಕದಲ್ಲಿದ್ದೇನೆ. ಈಗಾಗಲೇ ಬಿಜೆಪಿ ಮಂಡಲದ ಪ್ರಮುಖರು ಆಸ್ಪತ್ರೆಯಲ್ಲಿರುವ ಪುರುಷೋತ್ತಮ ಪೂಜಾರಿ ಅವರನ್ನು ಭೇಟಿ ಮಾಡಿದ್ದು, ಅವರ ಮೂಲಕ ವೈಯಕ್ತಿಕ ನೆಲೆಯಲ್ಲಿ ಧನ ಸಹಾಯವನ್ನು ನೀಡಲಾಗಿದೆ. ನಮ್ಮ ಕಾರ್ಯಕರ್ತರು ಕುಟುಂಬದ ಸದಸ್ಯರ ಜೊತೆಗಿದ್ದು ಅವಶ್ಯಕತೆಗಳಿಗೆ ಸ್ಪಂದಿಸುತಿದ್ದಾರೆ ಎಂದರು.
ಪರಿಹಾರ ಧನ ಒದಗಿಸುವ ಕುರಿತು ಸರಕಾರವು ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ನಿಯಮಗಳಂತೆ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಪರಿಹಾರ ಧನ ಬಿಡುಗಡೆಯಾಗಲಿದೆ. ಪುರುಷೋತ್ತಮ ಪೂಜಾರಿ ಅವರಿಗೆ ಜೀವನೋಪಾಯಕ್ಕಾಗಿ ಆಟೋ ರಿಕ್ಷಾ ಕೊಡಿಸಲು ಬೇಕಾದ ವ್ಯವಸ್ಥೆ ಕಲ್ಪಿಸಲಾಗುವುದು. ಹಿಂದಿನ ಪರ್ಮಿಟ್ ನಲ್ಲಿ ಹೊಸದಾಗಿ ಆಟೋ ರಿಕ್ಷಾ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ಜಗದೀಶ್ ಶೇಣವ, ಕಾರ್ಪೋರೇಟರ್ ಸಂದೀಪ್ ಗರೋಡಿ, ಸುರೇಂದ್ರ ಜಪ್ಪಿನಮೊಗರು,ಕಿರಣ್ ರೈ ಮುಂತಾದವರು ಫಾದರ್ ಮುಲ್ಲರ್ ಆಸ್ಪತ್ರೆಗೆ ಭೇಟಿ ನೀಡಿ ಪುರುಷೋತ್ತಮ ಪೂಜಾರಿ ಅವರನ್ನು ಹಾಗೂ ವೈದ್ಯರನ್ನು ಭೇಟಿ ಮಾಡಿ ಮಾಹಿತಿ ಪಡೆದು ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು.