ಇತ್ತೀಚಿನ ಸುದ್ದಿ
ಕುದ್ರೋಳಿ ಶ್ರೀ ಭಗವತಿ ಕ್ಷೇತ್ರ ಮೇಲ್ಛಾವಣಿ ಕಾಮಗಾರಿ ಪೂರ್ಣ: ಶಾಸಕ ವೇದವ್ಯಾಸ ಕಾಮತ್ ಉದ್ಘಾಟನೆ
15/09/2022, 22:05

ಮಂಗಳೂರು(reporterkarnataka.com): ಕುದ್ರೋಳಿ ಶ್ರೀ ಭಗವತಿ ಕ್ಷೇತ್ರ ಪರಿಸರದಲ್ಲಿ ಮೇಲ್ಛಾವಣಿಯ ಕಾಮಗಾರಿ ಪೂರ್ಣಗೊಂಡಿದ್ದು ಶಾಸಕ ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕಾಮತ್, ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಗೆ ನಮ್ಮ ಆಡಳಿತ ವ್ಯವಸ್ಥೆಯು ಹೆಚ್ಚಿನ ಮುತುವರ್ಜಿ ವಹಿಸಿದೆ. ಕಳೆದ ಸರಕಾರದ ಆಡಳಿತಕ್ಕೆ ಹೋಲಿಸಿದರೆ ನಮ್ಮ ಸರಕಾರವು ಹಿಂದೆಂದಿಗಿಂತಲೂ ಅಧಿಕ ಅನುದಾನಗಳನ್ನು ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಗೆ ನೀಡಿದೆ ಎಂದು ಹೇಳಿದರು.
ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಪರಿಸರದಲ್ಲಿ ಮೇಲ್ಛಾವಣಿ ಅಳವಡಿಕೆ ಕಾಮಗಾರಿ ಮಾಡಿಕೊಡುವಂತೆ ಸ್ಥಳೀಯ ಕಾರ್ಪೋರೇಟರ್ ಹಾಗೂ ಕ್ಷೇತ್ರದ ಆಡಳಿತ ಮಂಡಳಿಯ ಪ್ರಮುಖರು ಮನವಿ ನೀಡಿದ್ದರು. ಕ್ಷೇತ್ರದ ಅಭಿವೃದ್ಧಿಯ ನೆಲೆಯಲ್ಲಿ ಕಾಮಗಾರಿಗೆ ಅನುಮೋದನೆ ನೀಡಿದ್ದು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಪೋರೇಟರ್ ಜಯಶ್ರೀ ಕುಡ್ವ, ಲೀಲಾವತಿ ಪ್ರಕಾಶ್, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಆಚಾರಪಟ್ಟವರು, ಅಧ್ಯಕ್ಷರಾದ ಗಣೇಶ್ ಕುಂಟಲ್ಪಾಡಿ, ಮೊಕ್ತೇಸರರಾದ ನಾರಾಯಣ ಕೆ, ಸುಜನ್ ದಾಸ್ ಕುಡುಪು, ಉಪಾಧ್ಯಕ್ಷರಾದ ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಸುಧೀರ್ ಬಿ, ಉಷಾ ಪ್ರಭಾಕರ್ ಹಾಗೂ ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.